ಕೋಟ್ಲಾ ಅಂಗಳದಲ್ಲಿ ಮಿಂಚು ಹರಿಸಿದ ಕರ್ನಾಟಕದ ವೇಗಿ

7

ಕೋಟ್ಲಾ ಅಂಗಳದಲ್ಲಿ ಮಿಂಚು ಹರಿಸಿದ ಕರ್ನಾಟಕದ ವೇಗಿ

Published:
Updated:

ನವದೆಹಲಿ: ದೇಶದ ರಾಜಧಾನಿ ನವದೆಹಲಿಯ ಫಿರೋಜಾ ಶಾ ಕೋಟ್ಲಾ ಮೈದಾನದಲ್ಲಿ ಶುಕ್ರವಾರ ಸಂಜೆ ಸೇರಿದ್ದ ಸುಮಾರು ಮೂವತ್ತು ಸಾವಿರ ಪ್ರೇಕ್ಷಕರು ಒಂದೇ ಹೆಸರನ್ನು ಕೂಗುತ್ತಿದ್ದರು. ಅದು ಕರ್ನಾಟಕದ ದಾವಣಗೆರೆಯ ಹುಡುಗ ಆರ್. ವಿನಯಕುಮಾರ್ ಹೆಸರು.ಲೈನ್ ಮತ್ತು ಲೆಂಗ್ತ್‌ಗಳನ್ನು ಶಿಸ್ತಿನಿಂದ ಕಾಪಾಡಿಕೊಂಡು ಬೌಲಿಂಗ್ ಮಾಡುತ್ತಿದ್ದ ಹುಡುಗ ಅಲಿಸ್ಟರ್ ಕುಕ್ ಬಳಗದ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಾಗಿ ಕಾಡಿದರು. ತಂಡದಲ್ಲಿ  ಪ್ರಮುಖ ಬೌಲರ್‌ಗಳ ಕೊರತೆಯನ್ನು ನೀಗಿಸಿದರು. ತಮ್ಮ ಏಕದಿನ ಕ್ರಿಕೆಟ್ ಜೀವನದ (30ಕ್ಕೆ4) ಉತ್ತಮ ಸಾಧನೆಯನ್ನು ದಾಖಲಿಸಿದರು. ದಾವಣಗೆರೆಯ ಅಂಗಳದಲ್ಲಿ ಅವರು ಹರಿಸಿದ ಪರಿಶ್ರಮ ಈಗ ಫಲ ನೀಡುತ್ತಿದೆ. 2004-05ನೇ ಸಾಲಿನಲ್ಲಿ ಪ್ರಥಮ ದರ್ಜೆ ಪಂದ್ಯಗಳಿಗೆ ಕಾಲಿಟ್ಟ ವಿನಯಕುಮಾರ್ ತಮ್ಮ ವೇಗದ ದಾಳಿಯಿಂದ ಗಮನ ಸೆಳೆದರು. ರಾಜ್ಯ ತಂಡದಲ್ಲಿ ಎಸ್. ಅರವಿಂದ್, ಅಭಿಮನ್ಯು ಮಿಥುನ್ ಜೊತೆಗೆ ರಣಜಿ ಟ್ರೋಫಿ ಮತ್ತು ಇನ್ನುಳಿದ ಪ್ರಥಮ ದರ್ಜೆ ಪಂದ್ಯಗಳಲ್ಲಿ ಹಲವು ಗೆಲುವುಗಳನ್ನು ದಾಖಲಿಸಲು ಕಾರಣರಾದರು. 63 ಪ್ರಥಮದರ್ಜೆ ಪಂದ್ಯಗಳಲ್ಲಿ 233 ವಿಕೆಟ್ ಗಳಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿಯೂ ಮಿಂಚಿರುವ ಅವರ ಖಾತೆಯಲ್ಲಿ 1090 ರನ್ನುಗಳೂ ಇವೆ. ವೇಗಕ್ಕೆ ಮಾತ್ರ ಪ್ರಾಧಾನ್ಯತೆ ನೀಡದೇ ಸ್ವಿಂಗ್ ಮತ್ತು ಲೈನ್ ಜಾವಗಲ್ ಶ್ರೀನಾಥ್, ವೆಂಕಟೇಶಪ್ರಸಾದ್ ನಂತರ ರಾಷ್ಟ್ರ ತಂಡದ ಗಮನ ಸೆಳೆದ ಮಧ್ಯಮವೇಗದ ಬೌಲರ್ ವಿನಯಕುಮಾರ್. 2010ರಲ್ಲಿ ಜಿಂಬಾಬ್ವೆಯ ಎದುರು ಬುಲವಾಯೋನಲ್ಲಿ ನಡೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ವಿನಯ್ (51ಕ್ಕೆ2) ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ದೆಹಲಿಯಲ್ಲಿ ಅವರ ಆಟದಿಂದಲೇ ಭಾರತದ ಗೆಲುವು ಸುಲಭವಾಯಿತು.  ಅಲ್ಲಿಂದ ಇಲ್ಲಿಯವರೆಗೆ ಅವರು ಆಡಿರುವ ಎಂಟು ಪಂದ್ಯಗಳಲ್ಲಿ ಒಟ್ಟು ಒಂಬತ್ತು ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಹೈದರಾಬಾದ್ ಪಂದ್ಯದಲ್ಲಿ ವಿಕೆಟ್ ಪಡೆಯದಿದ್ದರೂ ಬಿಗಿಯಾದ ಬೌಲಿಂಗ್ ಮಾಡಿದ್ದರು. ಫೀಲ್ಡಿಂಗ್‌ನಲ್ಲಿಯೂ ಮಿಂಚಿದ್ದರು. ನಾಲ್ಕು ಅಂತರರಾಷ್ಟ್ರೀಯ ಟ್ವೆಂಟಿ-20 ಪಂದ್ಯಗಳನ್ನೂ ಆಡಿರುವ ಅವರು ಐದು ವಿಕೆಟ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಆಡುವ ಅವಕಾಶಕ್ಕಾಗಿ 27 ವರ್ಷದ ವಿನಯ್ ಕಾಯುತ್ತಿದ್ದಾರೆ.

  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry