ಶುಕ್ರವಾರ, ಆಗಸ್ಟ್ 23, 2019
22 °C

ಕೋಡಗ ಕೋಳಿ ಸಾಕಿತ್ತಾ... ನೋಡವ್ವಾ ತಂಗಿ!

Published:
Updated:

ಶಿರಾ: ಕೋಳಿ ಮರಿಯನ್ನು ಕೋತಿ ಅಪಹರಿಸಿ ಅದನ್ನು ಮರದ ಮೇಲೆ ಜೋಪಾನವಾಗಿ ಸಾಕಿ ಸಲಹುತ್ತಿರುವ ಅಚ್ಚರಿ ಘಟನೆ ತಾಲ್ಲೂಕಿನ ಬೇವಿನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ಕೋತಿಯೊಂದು ಏಕಾಏಕಿ ಕೋಳಿ ಮರಿ ಅಪಹರಿಸಿಕೊಂಡು ಮರದ ಮೇಲೆ ಓಡಿತು. ಇದನ್ನು ಕಂಡ ಜನ ಕೋಳಿ ಮರಿ ಕತೆ ಮುಗಿತು; ಇನ್ನೇನೂ ಈಗಲೋ ಆಗಲೋ ಸಾಯಿಸುತ್ತದೆ ಎಂದೇ ಭಾವಿಸಿ ಕಾಯುತ್ತಿದ್ದರು.ಆದರೆ ಜನರ ನಿರೀಕ್ಷೆ ಹುಸಿ ಮಾಡಿದ ಮಂಗ ಕೋಳಿ ಮರಿ ಹಿಂಸಿಸದೆ ಅತ್ಯಂತ ಜತನದಿಂದ ಸಾಕಿ ಸಲಹುತ್ತಾ ನೋಡುಗರನ್ನು ಬೆಕ್ಕಸ ಬೆರಗಾಗುವಂತೆ ಮಾಡಿದೆ.ಒಂಟಿ: ಐದಾರು ತಿಂಗಳ ಹಿಂದೆ ಹಿಂಡು ಅಗಲಿ ಬಂದ ಈ ಕೋತಿ ಬೇವಿನಹಳ್ಳಿ ಮರಗಳ ಮೇಲೆ ಕಾಣಿಸಿಕೊಂಡಿತ್ತು. ನಂತರ ಗ್ರಾಮದ ಜನರಿಗೆ ಹೊಂದಿಕೊಳ್ಳುತ್ತಾ ಸಿಕ್ಕಿದ್ದು-ಕೊಟ್ಟಿದ್ದು ತಿಂದು ಮರದ ಮೇಲೆ ಅಡ್ಡಾಡಿಕೊಂಡಿತ್ತು.ಹೀಗಿರುವಾಗ ನಾಲ್ಕು ದಿನಗಳ ಹಿಂದೆ ಕೋತಿ ಏಕಾಏಕಿ ಕೃಷ್ಣಪ್ಪ-ಜಯಮ್ಮ ಎಂಬುವರಿಗೆ ಸೇರಿದ ಕೋಳಿ ಮರಿಯೊಂದನ್ನು ಅಪಹರಿಸಿಕೊಂಡು ಮರದ ಮೇಲೆ ಓಡಿತು. ಅದನ್ನು ಕಂಡ ಜನ ಕೋತಿ ಕೈಗೆ ಸಿಕ್ಕಿದರೆ ಯಾವುದು ಉಳಿಯುತ್ತೆ, ಅನ್ಯಾಯವಾಗಿ ಕೋಳಿ ಮರಿ ಸಾಯಿಸುತ್ತೆ ಎಂದು ಭಾವಿಸಿ ಪರಿತಪಿಸಿದರು.ಆದರೆ ಜನರ ಮನೋಭಾವನೆಗೆ ವ್ಯತಿರಿಕ್ತವಾಗಿ ವರ್ತಿಸಿದ ಕೋತಿಯು ಕೋಳಿ ಮರಿ ಸಾಯಿಸುವುದಿರಲಿ ಅದನ್ನು ಬಿಗಿಯಾಗಿ ಹಿಡಿದರೆ ಅದಕ್ಕೆ ಎಲ್ಲಿ ನೋವಾಗುತ್ತೋ ಎಂಬಂತೆ ಮೃದುವಾಗಿ ಹಿಡಿದುಕೊಂಡೇ ಮರಗಳನ್ನೆಲ್ಲ ಸುತ್ತು ಹಾಕಿತು.ಸರ್ಕಸ್: ಇದನ್ನು ಕಂಡ ಜನ ಮತ್ತಷ್ಟು ಬೆರಗಾಗಿದ್ದಲ್ಲದೆ ಹೇಗಾದರೂ ಮಾಡಿ ಕೋತಿ ಕೈಯಿಂದ ಕೋಳಿ ಮರಿ ಬಿಡಿಸಬೇಕು ಎಂದು ಸರ್ಕಸ್ ಆರಂಭಿಸಿದರು. ಬಾಳೆಹಣ್ಣು ಕೊಟ್ಟರೆ ಕೋತಿ ಕೋಳಿ ಮರಿಯನ್ನು ಕೈ ಬಿಡುತ್ತದೆ ಎಂದು ಬಾಳೆಹಣ್ಣು ಕೊಟ್ಟು ನೋಡಿದರು.ಆದರೆ ಜಾಣ ಕೋತಿ ಒಂದು ಕೈಯಲ್ಲಿ ಬಾಳೆಹಣ್ಣು ಪಡೆದು, ಮತ್ತೊಂದು ಕೈಯಿಂದ ಕೋಳಿ ಮರಿ ರಕ್ಷಿಸಿಕೊಂಡಿತೇ ಹೊರತು ಕೈ ಬಿಡಲಿಲ್ಲ. ಆಗ ಕೆಲ ಬುದ್ಧಿವಂತರು ಎರಡು ಬಾಳೆಹಣ್ಣು ಕೊಟ್ಟರೆ ಕೋತಿ ಎರಡೂ ಕೈಯಲ್ಲಿ ಹಣ್ಣು ಪಡೆಯುತ್ತಾ ಕೋಳಿ ಮರಿ ಕೈ ಬಿಡುತ್ತದೆ ಎಂದು ಪ್ರಯೋಗ ಮಾಡಿದರು.ಮಂಗ ಮಾತ್ರ ಬಾಳೆ ಹಣ್ಣು ಆಸೆಗೆ ಬಿದ್ದು ಕೋಳಿ ಕೈ ಬಿಡಲಿಲ್ಲ. ಒಂದು ಕೈಯಲ್ಲಿ ಒಂದು ಹಣ್ಣು ಮಾತ್ರ ಪಡೆದು ತಿಂದ ಮಂಗ, ನಂತರ ಮತ್ತೊಂದು ಹಣ್ಣು ತೆಗೆದುಕೊಂಡಿತು. ಕೋಳಿ ಮರಿ ಮಾತ್ರ ಕೋತಿ ಅಪ್ಪುಗೆಯಲ್ಲಿ ಬೆಚ್ಚಗಿತ್ತು.ಸಂತ ಶಿಶುನಾಳ ಷರೀಪರ ಹಾಡಿನಲ್ಲಿ ಕೋಡಗನ ಕೋಳಿ ನುಂಗಿತ್ತಾ... ಎಂಬುದನ್ನು ಕೇಳಿದ್ದೆವು. ಆದರೆ ಇಲ್ಲೊಂದು ಕೋಡಗ ಕೋಳಿ ಮರಿ ಸಾಕುತ್ತಿರುವುದು ಅಚ್ಚರಿಯೇ ಸರಿ. ಕೋತಿಯು ಕೋಳಿ ಮರಿಗೆ ಕಾಳು ತಿನ್ನಿಸುತ್ತದೆ, ನೀರು ಕುಡಿಸುತ್ತದೆ... ಇದನ್ನೆಲ್ಲ ನೋಡುತ್ತಿದ್ದರೆ ಆ ಕೋತಿ-ಆ ಕೋಳಿ ಮರಿಯದು ಯಾವ ಜನ್ಮದ ಮೈತ್ರಿಯೋ ಎನ್ನಿಸುತ್ತದೆ ಎಂದು ಗ್ರಾಮದ ಅರೆ ವಾದ್ಯ ಕಲಾವಿದ ನರಸಿಂಹರಾಜು `ಪ್ರಜಾವಾಣಿ'ಗೆ ತಿಳಿಸಿದರು.

 

Post Comments (+)