ಕೋಡಹಳ್ಳಿಗೆ ಸೌಲಭ್ಯ ಕೊಡಬಾರದೇ?

7

ಕೋಡಹಳ್ಳಿಗೆ ಸೌಲಭ್ಯ ಕೊಡಬಾರದೇ?

Published:
Updated:

ಗುಂಡ್ಲುಪೇಟೆ: ತಾಲ್ಲೂಕಿನ ಕೋಡಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ. ತಕ್ಷಣ ಗ್ರಾಮಕ್ಕೆ ಬೇಕಾದ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ, ಚರಂಡಿ ಸೌಲಭ್ಯ ಒದಗಿಸದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಹಾಕಲಾಗುವುದು ಎಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ. ಈ ಗ್ರಾಮವು ಶಿವಪುರ ಗ್ರಾಮ ಪಂಚಾಯಿತಿಗೆ ಸೇರಿದ್ದು ಸಮರ್ಪಕವಾದ ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ಹಾಗೂ ರಸ್ತೆಗಳಿಲ್ಲ. ಇದರಿಂದ ಗ್ರಾಮಸ್ಥರಿಗೆ ಅನಾನುಕೂಲವಾಗಿದೆ. ಗ್ರಾಮದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಕೆಲವು ವೇಳೆ ಸಮೀಪದ ಜಮೀನುಗಳಿಂದ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಗ್ರಾಮದಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಚರಂಡಿ ನೀರು ರಸ್ತೆಯ ಮಧ್ಯ ಭಾಗದಲ್ಲಿಯೇ ಹಾದು ಹೋಗುತ್ತಿದೆ. ಹೀಗಾಗಿ ರಾತ್ರಿ ವೇಳೆ ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾಮದಲ್ಲಿ ನೈರ್ಮಲ್ಯ ಇಲ್ಲದ ಕಾರಣ ರೋಗರುಜಿನಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ರಾತ್ರಿ ವೇಳೆ ಬೀದಿ ದೀಪಗಳು ಕೂಡ ಸರಿಯಾಗಿ ಉರಿಯುವುದಿಲ್ಲ. ಇದರಿಂದ ಅನೇಕ ಬಾರಿ ಗ್ರಾಮಸ್ಥರು ಅಪಘಾತಕ್ಕೆ ಒಳಗಾಗಿರುವ ಘಟನೆಗಳು ನಡೆದಿವೆ. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ವಾಸವಾಗಿದ್ದು, ಸಮರ್ಪಕವಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಉದ್ಯೋಗ ಭರವಸೆ ಯೋಜನೆಯಡಿಯಲ್ಲಿಯೂ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗ್ರಾಮದಲ್ಲಿರುವ ಕುಡಿಯುವ ನೀರು ಸರಬರಾಜಿಗಾಗಿ ಏಕೈಕ ನೀರಿನ ಟ್ಯಾಂಕ್ ಇದ್ದು ಸುಸ್ಥಿತಿಯಲ್ಲಿರದ ಕಾರಣ ಹೆಚ್ಚಾಗಿ ನೀರು ತುಂಬಲು ಸಾಧ್ಯವಾಗುತ್ತಿಲ್ಲ.ಪೈಪ್‌ಲೈನ್‌ಗಳು ಸರಿಯಾಗಿಲ್ಲದ ಕಾರಣ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾ ಗುತ್ತಿಲ್ಲ. ಗ್ರಾಮದಲ್ಲಿ ಅನೇಕ ತೊಂಬೆಗಳಿದ್ದರೂ ಸರಿಯಾದ ಸಮಯಕ್ಕೆ ನೀರು ತುಂಬದ ಕಾರಣ ಗ್ರಾಮಸ್ಥರು ಕುಡಿಯುವ ನೀರು ಪಡೆಯಲು ತೊಂದರೆ ಅನುಭವಿಸುವಂತಾಗಿದೆ. ಈ ಗ್ರಾಮದಲ್ಲಿ ವಿದ್ಯುತ್ ಕೊರತೆಯು ಹೆಚ್ಚಾಗಿದ್ದು ಇಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಿಲ್ಲದ ಕಾರಣ ವೊಲ್ಟೇಜ್ ಕೊರತೆಯೂ ಇದೆ. ಕೂಡಲೇ ಒಂದು ಪ್ರತ್ಯೇಕ ಪರಿವರ್ತಕವನ್ನು ಅಳವಡಿಸಬೇಕು  ಎನ್ನುವುದು ಗ್ರಾಮಸ್ಥರ ಪ್ರಮುಖ ಬೇಡಿಕೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry