ಕೋಣಿ: ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

7

ಕೋಣಿ: ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ಕುಂದಾಪುರ: ಸುಮಾರು 20 ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದ್ದ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ ಕೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಿ ಶಾಲೆ– ಕಾಗೇರಿ ರಸ್ತೆಯ ನಿವಾಸಿ­ಗಳು ಈಚೆಗೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಹಲವು ವರ್ಷಗಳಿಂದ ಈ ರಸ್ತೆ ದುರಸ್ತಿ ಆಗದೆ ಇರುವುದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ. ಕುಂದಾಪುರ– ಬಸ್ರೂರು ಮಾರ್ಗವಾಗಿ ಕೋಟೇಶ್ವರ– ಹಾಲಾಡಿ ರಸ್ತೆಯನ್ನು ಸಂಪರ್ಕಿಸುವ ಹಾಗೂ ತಾಲ್ಲೂಕಿನ ಅಗ್ನಿಶಾಮಕ ಘಟಕದ ನಿಲುಗಡೆ ಕೇಂದ್ರಕ್ಕೆ ತೆರಳುವ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಕಳೆದ ವರ್ಷಗಳಲ್ಲಿ ಸ್ಥಳೀಯರು ಆಗ್ರಹಿಸುತ್ತಿದ್ದರೂ ಯಾವುದೇ ಪ್ರಯೋ­ಜನ ಆಗಿಲ್ಲ ಎಂದು ಸ್ಥಳೀಯರು ದೂರಿದರು.ಬೇಡಿಕೆಗೆ ಸ್ಪಂದಿಸಿದ ಜನಪ್ರತಿನಿಧಿಗಳ ಆಸಕ್ತಿ­ಯಿಂದಾಗಿ ರಾಜ್ಯ ಸರ್ಕಾರದ ಗ್ರಾಮೀಣ ರಸ್ತೆ ಅಭಿವೃದ್ಧಿ ಇಲಾಖೆಯಿಂದ 60 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆಯ ಉನ್ನತೀಕರಣ ಮತ್ತು ಮರು ಡಾಮರೀಕರಣ ಕಾಮಗಾರಿಗೆ ಅನುಮೋದನೆ ದೊರಕಿತ್ತು. ಇದಕ್ಕೆ ಪೂರಕವಾಗಿ ನಡೆದ ಟೆಂಡರ್‌ ಪ್ರಕ್ರಿಯೆಯಲ್ಲಿ ತಾಲ್ಲೂಕಿನ ಗುತ್ತಿಗೆದಾರರೊಬ್ಬರಿಗೆ 53,45,051 ರೂಪಾಯಿಗೆ ಗುತ್ತಿಗೆ ನೀಡಿ, 2013ರ ಸೆಪ್ಟೆಂಬರ್ 30 ರ ಒಳಗೆ ಕಾಮಗಾರಿ ಮುಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.ಈ ಪ್ರಕ್ರಿಯೆ ನಡೆದು ಸಾಕಷ್ಟು ಸಮಯ ಕಳೆದಿದ್ದರೂ ಇದುವರೆಗೂ ಕಾಮಗಾರಿಗೆ ಯಾವುದೇ ರೀತಿಯ ಚಾಲನೆ ದೊರಕಿಲ್ಲ. ನಾಗರಾಜ್‌ ದೇವಾಡಿಗ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ಪ್ರಮುಖರಾದ ಶರಶ್ಚಂದ್ರ ಹೆಗ್ಡೆ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಭಾಸ್ಕರ್‌ ಬಿಲ್ಲವ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಭಟನೆಯ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಸನಗೌಡ ಅವರು ಜನರ ಆಕ್ರೋಶಕ್ಕೆ ಸ್ಪಂದಿಸಿ ಎರಡು ದಿನದ ಒಳಗೆ ಕಾಮಗಾರಿಗೆ ಚಾಲನೆ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry