ಗುರುವಾರ , ಏಪ್ರಿಲ್ 22, 2021
29 °C

ಕೋಪ ಏಕಮ್ಮಾ...?

ಡಾ. ಕೆ.ಎಸ್. ಚೈತ್ರಾ Updated:

ಅಕ್ಷರ ಗಾತ್ರ : | |

‘ನನ್ನ ಅಮ್ಮ ತುಂಬಾ ಜಾಣೆ, ನೋಡಲೂ ಚೆಂದ. ನಾನು ಅಂದ್ರೆ ಭಾರೀ ಇಷ್ಟ. ಆದ್ರೆ ಸಿಟ್ಟು ಬಂದಾಗ ಮಾತ್ರ ರಾಕ್ಷಸಿ ಹಾಗೆ ಆಡ್ತಾಳೆ. ಅಬ್ಬಬ್ಬಾ! ಕೂಗೋದು, ಕಿರಿಚೋದು, ಹೊಡೆಯೋದು! ಮೊದಲು ತುಂಬಾ ಹೆದರಿಕೆ ಆಗ್ತಿತ್ತು. ಈಗ ಎಲ್ಲಾ ಮಾಮೂಲಾಗಿದೆ’. ಇದು ಎಂಟರ ಅಂಕಿತ್ ಶಾಲೆಯಲ್ಲಿ ತನ್ನ ಅಮ್ಮನ ಕುರಿತಾಗಿ ಆಶುಭಾಷಣದಲ್ಲಿ ಹೇಳಿದ್ದು!ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ರೋಸಿ ತನ್ನ ಬಗ್ಗೆಯೇ ಬೇಸರಪಡುತ್ತಾಳೆ ‘ಮದುವೆಯ ಮುಂಚೆ ಎಷ್ಟು ಶಾಂತಸ್ವಭಾವವಾಗಿತ್ತು ನಂದು! ಆದ್ರೆ ಈಗ ನನ್ನಿಬ್ಬರು ಮಕ್ಕಳು ಎಷ್ಟೊಂದು ತಂಟೆ ಮಾಡ್ತಾರೆ ಅಂದ್ರೆ ತಡೆಯಲಾರದೆ ಹೊಡೀತೀನಿ, ಬೈತೀನಿ. ಅವರ ಗಲಾಟೆ ದಿನಾ ಹೆಚ್ತಾನೇ ಇದೆ. ನನಗೆ ಮಾತ್ರ ಸುಸ್ತೋ ಸುಸ್ತೋ’.ಕೋಪ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಕಂಡುಬರುವ ಸಹಜ ಭಾವನೆ. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳಿರುವ ತಾಯಂದಿರಲ್ಲಂತೂ ಕೋಪ ಸರ್ವೇಸಾಮಾನ್ಯ. ಕೂತಲ್ಲಿ ಕೂರದೇ, ನಿಂತಲ್ಲಿ ನಿಲ್ಲದೇ, ಮನೆಯಿಡೀ ಅಸ್ತವ್ಯಸ್ತಗೊಳಿಸುವ, ಚಿಕ್ಕ ಚಿಕ್ಕ ವಿಷಯಕ್ಕೂ ರಚ್ಚೆ ಹಿಡಿಯುವ ಮಕ್ಕಳಿರುವಾಗ ತಾಯಿಯಾದವಳಿಗೆ ಕೋಪ ಬರುವುದು ಸಹಜವೇ. ಇವೆಲ್ಲದರ ಜತೆ ಮನೆಗೆಲಸ, ಹೊರಗಡೆ ದುಡಿತ ಮುಂತಾದ ಜವಾಬ್ದಾರಿಗಳ ಒತ್ತಡ ಹೆಚ್ಚಿದಾಗ ನಿಸ್ಸಹಾಯಕಳಾಗಿ ಆಕೆ ತನ್ನ ಕೋಪ-ಹತಾಶೆಯನ್ನು ವ್ಯಕ್ತಪಡಿಸುವುದು ಮಕ್ಕಳ ಮೇಲೆ, ತನ್ನ ಕೋಪವೆಲ್ಲವನ್ನೂ ಕಿರುಚಿ-ಹೊಡೆದು-ಬೈದು ಮಾಡುವುದರಿಂದ ಏನೂ ಫಲವಿಲ್ಲ.ಪರಿಸ್ಥಿತಿ ಸುಧಾರಣೆಯಾಗುವುದರ ಬದಲು ಮತ್ತಷ್ಟು ಹದಗೆಡುತ್ತದೆ. ಮಕ್ಕಳಲ್ಲಿ ತಾಯಿಯ ಕುರಿತು ಸಿಟ್ಟು-ದ್ವೇಷ-ಹೆದರಿಕೆ- ತಿರಸ್ಕಾರ ಉಂಟಾದರೆ ತಾಯಿ ನಿರಂತರ ಒತ್ತಡಕ್ಕೆ ಒಳಗಾಗುತ್ತಾಳೆ, ದೈಹಿಕವಾಗಿ, ಮಾನಸಿಕವಾಗಿ ದುರ್ಬಲಳಾಗುತ್ತಾಳೆ. ಹಾಗಂತ ಯಾವಾಗಲೂ ನಗು-ನಗುತ್ತಾ, ಸ್ಥಿತಪ್ರಜ್ಞರಂತೆ ಇರಲು ಸಾಧ್ಯವೇ? ಖಂಡಿತಾ ಇಲ್ಲ. ಹಾಗೆಯೇ ಹುಟ್ಟುವ ಕೋಪವನ್ನು ಸದಾ ತಡೆಹಿಡಿದಲ್ಲಿ ಅದೂ ಅಪಾಯಕಾರಿ. ಇದಕ್ಕೇನು ಪರಿಹಾರ?ಕೋಪವನ್ನು ನಿಯಂತ್ರಿಸಲು ಮತ್ತು ಸರಿಯಾಗಿ ವ್ಯಕ್ತಪಡಿಸಲು ಕೆಲವು ವಿಧಾನಗಳು ಹೀಗಿವೆ.

*
 ಕೋಪ ಬರುವ ಸನ್ನಿವೇಶ ಎದುರಾಗುತ್ತಿದೆ ಅಥವಾ ಸೃಷ್ಟಿಯಾಗಿದೆ ಅನ್ನಿಸಿದ ತಕ್ಷಣ ಆ ಜಾಗದಿಂದ ದೂರವಿರುವುದು. ಅಲ್ಲಿಯೇ ನಿಂತು ಕ್ಷಣಕ್ಷಣಕ್ಕೂ ಕೋಪ ಏರಿ ಸಹನೆಗೆಡುವುದರ ಬದಲು ಜಾಗ ಬದಲಿಸುವುದು ಒಳ್ಳೆಯದು. ಉದಾಹರಣೆಗೆ ಟಿವಿ ನೋಡುವಾಗ ಗಲಾಟೆ ಶುರುವಾದ್ರೆ ತಕ್ಷಣ ಬೆಡ್‌ರೂಂಗೆ ಬರುವುದು. ಆನಂತರ ಮನಸ್ಸು ಸ್ಥಿಮಿತಕ್ಕೆ ಬಂದ ನಂತರ ಶಾಂತವಾಗಿ ತಾಳ್ಮೆಯಿಂದ ಪರಿಸ್ಥಿತಿ ಎದುರಿಸುವುದು.* ‘ಮಾತು ಮುತ್ತಾದರೆ ಮೌನ ಬಂಗಾರ’ ಎನ್ನುವ ಮಾತು ಕೋಪ ಬಂದ ಸಂದರ್ಭದಲ್ಲಿ ಅಕ್ಷರಶಃ ಸತ್ಯ. ಕೋಪದ ಭರದಲ್ಲಿ ಬಾಯಿಗೆ ಬಂದಂತೆ ಬೈಯ್ಯುವ ಬದಲು ಗಂಭೀರವಾಗಿ ಏನೂ ಮಾತನಾಡದೆ ಸುಮ್ಮನಾಗುವುದು ಮತ್ತು ಮನಸ್ಸಿನಲ್ಲಿ ನಿಧಾನವಾಗಿ ಒಂದರಿಂದ ಇಪ್ಪತ್ತರ ತನಕ ಎಣಿಸುವುದು. ಹೀಗೆ ಮಾಡುವುದರಿಂದ ಕುದಿವ ಮನಸ್ಸು ಶಾಂತ ಸ್ಥಿತಿಗೆ ಮರಳಿ ಬುದ್ಧಿ ನಮ್ಮ ನಿಯಂತ್ರಣಕ್ಕೆ ಬರುತ್ತದೆ. ಆಗ ತನ್ನಿಂತಾನೇ ಕೋಪ ಕಡಿಮೆಯಾಗುತ್ತದೆ.* ಕೋಪದಲ್ಲಿ ಬಯ್ಯುವಾಗ ಮಕ್ಕಳಿಗೆ ‘ನೀನು ಲೇಟ್ ಲತೀಫ್’ ‘ನೀನು ಬರೀ ಸೋಮಾರಿ’ ‘ನೀನು ಯಾವಾಗಲೂ ಇದೇ ರೀತಿ ಗಲೀಜು’ ಎಂದು ನೇರವಾಗಿ ಚುಚ್ಚಿ ಆರೋಪಿಸಿ ಮಾತನಾಡುವುದರಿಂದ ಅವರ ಮನಸ್ಸಿಗೆ ನೋವಾಗುತ್ತದೆ. ಬದಲಾಗಿ ‘ನನಗೆ ನೀನು ಹೀಗೆ ಮಾಡಿದಾಗ ಬೇಸರವಾಗುತ್ತದೆ’ ಎಂದು ನಿಮಗೇಕೆ ಕಿರಿಕಿರಿಯಾಗಿ ಕೋಪ ಬರುತ್ತದೆ ಎಂಬ ಕಾರಣವನ್ನು ಶಾಂತವಾಗಿ, ಸ್ಪಷ್ಟವಾಗಿ ಹೇಳುವುದು ಒಳ್ಳೆಯದು.* ಕೋಪ ಸಕಾರಣವಾಗಿದ್ದಲ್ಲಿ ಮಕ್ಕಳಿಗೆ ಮಾಡಿದ ತಪ್ಪನ್ನು ವಿವರಿಸಿ ಹೇಳುವುದು ಮತ್ತು ಹಾಗೆ ಮಾಡದಂತೆ ಎಚ್ಚರಿಕೆ ನೀಡುವುದು. ಮಕ್ಕಳಿಗೆ ಶಿಸ್ತು ಕಲಿಸಲು ಹೊಡೆಯುವ-ಬೈಯ್ಯುವ ಶಿಕ್ಷೆಯೇ ಆಗಬೇಕೆಂದಿಲ್ಲ. ಇನ್ನೂ ಪರಿಣಾಮಕಾರಿ ವಿಧಾನಗಳಿವೆ. ಉದಾಹರಣೆಗೆ ‘ನಿನ್ನ ಪುಸ್ತಕ ಸರಿಯಾಗಿ ಎತ್ತಿಡದ ಹೊರತು ಟಿ.ವಿ. ನೋಡುವಂತಿಲ್ಲ’ ‘ಜೋರಾಗಿ ಕೂಗಿದರೆ ಆಟಕ್ಕೆ ಹೋಗುವಂತಿಲ್ಲ’ ಹೀಗೆ. ಹಾಗೆಯೇ ಮಕ್ಕಳು ಹೇಳಿದಂತೆ ಮಾಡದೇ ಹಠ ಮಾಡಿದಾಗ ಬೇಸೆತ್ತು ಮಣಿಯುವುದೂ ಸಲ್ಲ. ಶಾಂತವಾಗಿದ್ದರೂ ಮೌನವಾಗಿ, ದೃಢವಾಗಿ ಹೇಳಿದಂತೆ ನಡೆಯುವುದು ಮುಖ್ಯ. ಅದರಂತೆಯೇ ಮಕ್ಕಳು ಸರಿಯಾಗಿ ಕೆಲಸ ಮಾಡಲು ಪ್ರಯತ್ನಿಸಿದಾಗ ಅದಕ್ಕೆ ಸಹಾಯ ನೀಡುವುದರ ಜತೆ ಪ್ರೋತ್ಸಾಹ, ಮೆಚ್ಚುಗೆ ಸೂಚಿಸಬೇಕು.  ಚಿಕ್ಕ-ಪುಟ್ಟ ಬಹುಮಾನ, ಆತ್ಮೀಯ ಅಪ್ಪುಗೆ, ಒಳ್ಳೆಯ ಮಾತು ಇವೆಲ್ಲಾ ಮಕ್ಕಳ ಮೇಲೆ ಗಾಢ ಪರಿಣಾಮ ಬೀರಬಲ್ಲದು.* ಮಕ್ಕಳಿಗೆ ಹೊಡೆಯುವ ಬದಲು ‘ಟೈಂ ಔಟ್’ ನೀಡುವುದು; ಅಂದ್ರೆ ಆಟ ಆಡುವಾಗ ಇಬ್ಬರು ಮಕ್ಕಳು ಜಗಳವಾಡುತ್ತಿದ್ದರೆ ಇಬ್ಬರೂ ಸರಿಯಾಗಿ ಹೊಂದಿಕೊಂಡು ಆಡದ ಹೊರತು ಹತ್ತು ನಿಮಿಷ ಆಟವಿಲ್ಲ. ಮನರಂಜನೆ ಇಲ್ಲದೆ ಕೋಣೆಯ ಮೂಲೆಯಲ್ಲಿ ಸುಮ್ಮನೇ ಇರಬೇಕು..... ಹೀಗೆ.* ಮಕ್ಕಳು ಯಾವಾಗ, ಎಲ್ಲೇ ತಪ್ಪು ಮಾಡಿದರೂ ಹಿಂದೆ ಆದ ಮತ್ತು ಮುಂದೆ ಆಗಬಹುದಾದ ಎಲ್ಲಾ ತಪ್ಪುಗಳನ್ನು ಪಟ್ಟಿ ಮಾಡಿ ಬೈಯ್ಯುವುದು, ತಪ್ಪು. ಕೋಪದಲ್ಲಿ ಪ್ರಸ್ತುತ ತಪ್ಪಿನ ಜತೆ ಹಿಂದೆ-ಮುಂದೆ ಎಲ್ಲಾ ಸೇರಿಸಿ ಬೈದರೆ ಅದರಿಂದಾಗುವ ಹಾನಿಯೇ ಹೆಚ್ಚು. ಯಾವ ಸಂದರ್ಭದಲ್ಲಿ ಯಾವ ತಪ್ಪು ಅದಕ್ಕೆ ಮಾತ್ರ ಸಿಟ್ಟು ಸೀಮಿತವಾಗಿರಲಿ.* ತೀರಾ ಕೋಪ ಬಂದಾಗ ವಿವೇಚನೆ ಇಲ್ಲದೇ ಏನನ್ನಾದರೂ ಮಾಡುವ ಬದಲು ಮನಸ್ಸಿಗೆ ಅನ್ನಿಸಿದ್ದನ್ನು ಒಂದೆಡೆ ಕುಳಿತು ಬರೆಯುವುದು. ಹೀಗೆ ಮಾಡಿದಾಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಹಾಗೆಯೇ ಉದ್ಯಾನದಲ್ಲಿ ನಡಿಗೆ, ವ್ಯಾಯಾಮ, ಸಂಗೀತ ಕೇಳುವುದು, ಧ್ಯಾನ, ಪ್ರಾರ್ಥನೆ, ಪುಸ್ತಕ ಓದುವುದು, ಆಟ ಆಡುವುದು.... ಇವೆಲ್ಲಾ ಕೋಪವನ್ನು ಸರಿಯಾಗಿ ನಿಯಂತ್ರಿಸಲು ಉತ್ತಮ ಮಾರ್ಗಗಳು.* ಅದೆಷ್ಟೋ ಬಾರಿ ಕೋಪಕ್ಕೆ ಬೇರೆ ಬೇರೆ ಕಾರಣಗಳೂ ಇರಬಹುದು. ಯಾವ ಕಾರಣಕ್ಕೆ ಕೋಪ ಬಂದಿದೆ/ಬರುತ್ತಿದೆ ಎಂಬುದನ್ನು ಅರಿಯಬೇಕು. ನಿದ್ದೆ ಸರಿಯಾಗಿ ಆಗದೇ ಇದ್ದಾಗ, ಅನಾರೋಗ್ಯ ಉಂಟಾದಾಗ, ಹಸಿವೆ ಆದಾಗ, ಗಂಡ-ಅತ್ತೆ-ಮಾವರ ಮೇಲಿನ ಬೇಸರ, ನೆಂಟರ ಕಾಟ, ಆಫೀಸ್‌ನಲ್ಲಿ ಕೆಲಸ, ಹಣಕಾಸಿನ ಸಮಸ್ಯೆ ಇವೆಲ್ಲಾ ಮಕ್ಕಳ ಮೇಲಿನ ಕೋಪಕ್ಕೆ ಕಾರಣವಾಗಿರಬಹುದು. ಯಾರ ಮೇಲಿನ ಕೋಪಕ್ಕೋ ಮುಗ್ಧ ಮಕ್ಕಳು ಬಲಿಪಶುಗಳಾಗಬೇಕೇ?* ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ ಎಂಬುದನ್ನು ನೆನಪಿನಲ್ಲಿಡುವುದು. ಆ ಕ್ಷಣಕ್ಕೆ ಮಕ್ಕಳು ಮಾಡಿದ್ದು ಮಹಾಪರಾದ ಅನ್ನಿಸಿದರೂ ಅವರ ಸ್ಥಾನದಲ್ಲಿ ನಿಂತು ನೋಡಿದಾಗ ಅದು ಸಹಜವೇ. ಮಕ್ಕಳು ಮಕ್ಕಳಂತೆ ಇರುವುದು, ವರ್ತಿಸುವುದು ಸರಿ. ಅಮ್ಮಂದಿರೂ ಮಕ್ಕಳಾಗಿಯೇ ಬೆಳೆದು ದೊಡ್ಡವರಾದವರಲ್ಲವೇ? ಹೀಗಾಗಿ ಸಿಟ್ಟಿನ ಕೈಯ್ಯಲ್ಲಿ ಬುದ್ಧಿ ಕೊಡುವ ಬದಲು ಆ ಜಾಗದಲ್ಲಿ ನಾನಿದ್ದರೆ.... ಎಂದು ಒಂದು ಕ್ಷಣ ಯೋಚಿಸಿದರೆ ಮನ ತಿಳಿಯಾಗುತ್ತದೆ.* ಒಂದೊಮ್ಮೆ ಕೋಪ ಹೆಚ್ಚಾಗಿ ಬೈದರೆ ಹೊಡೆದರೆ ತಣ್ಣಗಾದ ಬಳಿಕ ಮನದಲ್ಲೇ ಕೊರಗುವ ಬದಲು ಅವರಲ್ಲಿ ತಾನು ಹೀಗೆ ತಣ್ಣಗಾದ ಬಳಿಕ ಮನದಲ್ಲೇ ಕೊರಗುವ ಬದಲು ಅವರಲ್ಲಿ ತಾನು ಹೀಗೆ ಮಾಡಬಾರದಿತ್ತು ಎಂದು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುವುದು. ಹಾಗೇ ಮಕ್ಕಳಿಗೆ ‘ಇಂಥ ಕಾರಣ/ ನಡವಳಿಕೆಗಾಗಿ ಕೋಪ ಬಂದಿತ್ತು. ಆದರೆ ಅದಕ್ಕೆ ಹೊಡೆಯುವುದು ಸರಿಯಾದ ಹೊಡೆಯುವುದು ಸರಿಯಾದ ವಿಧಾನವಲ್ಲ. ಅದು ತಪ್ಪು. ಎಂದು ವಿವರಿಸಿ ಹೇಳುವುದು ಒಳ್ಳೆಯದು. ಇದರಿಂದ ಹೊಡೆಯುವುದು ಸರಿಯಲ್ಲ ಎಂಬುದರ ಜತೆ ತಪ್ಪಿಗೆ ಕ್ಷಮೆ ಕೇಳುವುದು ನಾಚಿಕೆಯ ವಿಷಯವಲ್ಲ ಎಂಬುದನ್ನು ಮಕ್ಕಳು ತಿಳಿಯುತ್ತಾರೆ.* ಕೋಪ ಬಂದಾಗ ನಮ್ಮ ಧ್ವನಿ ಹೇಗಿರುತ್ತದೆ, ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಮ್ಮರಿವಿಗೆ ಬರುವುದಿಲ್ಲ. ಹಾಗಾಗಿ ತೀರಾ ಸಿಟ್ಟಿಗೆದ್ದು ಕೂಗಾಡುವಾಗ ಟೇಪ್‌ರಿಕಾರ್ಡರ್‌ನಲ್ಲಿ ನಮ್ಮ ಧ್ವನಿಯನ್ನು ರೆಕಾರ್ಡ್ ಮಾಡಿಟ್ಟುಕೊಂಡರೆ ನಂತರ ಅದನ್ನು ಕೇಳಬಹುದು. ಆಗ ನಮ್ಮ ಕೂಗಾಟ, ಬೆದರಿಕೆ ಮಕ್ಕಳಿಗೆ ಎಷ್ಟು ಹೆದರಿಕೆ ಹುಟ್ಟಿಸಬಲ್ಲದು ಎಂದು ಅರ್ಥವಾಗುತ್ತದೆ. ಮಕ್ಕಳಿರಲಿ, ಬಹಳಷ್ಟು ಬಾರಿ ನಮ್ಮ ಧ್ವನಿ ನಮಗೇ ಹೆದರಿಕೆ ಹುಟ್ಟಿಸಬಲ್ಲದು!* ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಮತ್ತು ಗತವೈಭವದ ನೆನಪು ಕೋಪಕ್ಕೆ ಕಾರಣವಾಗಬಲ್ಲದು. ಮಕಕ್ಳಿದ್ದ ಮನೆಯಲ್ಲಿ ಗಲಾಟೆ, ಹಾರಾಟ, ಕಾದಾಟ, ಚೆಲ್ಲಾಟ ಇದ್ದದ್ದೇ. ಮಗು ಮನೆಗೆ ಬರುವ ಮೊದಲು ತಮಗೆ ಬೇಕಾದ ಹಾಗೆ ಅಚ್ಚುಕಟ್ಟಾಗಿ ಇದ್ದ ಹಾಗೆ ಇರಲು ಸಾಧ್ಯವಿಲ್ಲ. ಮಕ್ಕಳು ಬೆಳೆಯುವಾಗ ಇವೆಲ್ಲಾ ಇದ್ದದ್ದೇ ಎಂಬ ವಾಸ್ತವ ಪ್ರಜ್ಞೆ ಇರಬೇಕು. ಅದು ಬಿಟ್ಟು ಮುಂಚೆ ಹಾಗಿದ್ದೆ ಹೀಗಿದ್ದೆ ಎಂದು ಹಳಹಳಿಸುವುದು ಸಲ್ಲ. ಹಾಗೆಯೇ ಮಕ್ಕಳು ಹೀಗೇ ಇರಬೇಕು, ಸರಿಯಾಗೇ ವರ್ತಿಸಬೇಕು ಎಂಬ ಅತಿಯಾದ ನಿರೀಕ್ಷೆ ಬೇಡ. ವರ್ತಮಾನ ಮತ್ತು ವಾಸ್ತವದ ಸ್ಪಷ್ಟ ಚಿತ್ರಣ ಸಿಕ್ಕಲ್ಲಿ ಕೋಪ ತಾನಾಗಿ ಕಡಿಮೆ ಆಗುತ್ತದೆ.ಕೋಪ ಎನ್ನುವುದು ರಕ್ತ-ಮಾಂಸ-ಮೂಳೆ- ಮನಸ್ಸುಗಳಿಂದ ಕೂಡಿದ ಮಾನವನ ಒಂದು ಸಹಜ ಭಾವನೆ. ಆದರೆ ಕೋಪ ಅನ್ನುವುದು ಮಕ್ಕಳ ಮೇಲೆ ಶಕ್ತಿ ಪ್ರದರ್ಶನದ ಕ್ರಿಯೆಯಾಗಿ ಮಾರ್ಪಡುವುದು ಬೇಡ. ಬದಲಿಗೆ ಅದನ್ನು ಸಕಾರಾತ್ಮಕವಾಗಿ ಅಭಿವ್ಯಕ್ತಿಗೊಳಿಸಲು ಮತ್ತು ನಿಯಂತ್ರಿಸಲು ಕಲಿಯಬೇಕು. ನೂರಾರು ಚಿಕ್ಕ-ದೊಡ್ಡ ಕೆಲಸದ ಹೊಣೆ ಹೊತ್ತಿರುವ ತಾಯಿಗೆ ಇದು ಸುಲಭಸಾಧ್ಯವೇನೂ ಅಲ್ಲ, ಅತೀ ಕಷ್ಟದ ಕೆಲಸವೇ. ಹೀಗಿದ್ದೂ ತಾಯಿಯಾದವಳು ತಾಳ್ಮೆಯಿಂದ ವರ್ತಿಸಿದಲ್ಲಿ ಮಕ್ಕಳ ವ್ಯಕ್ತಿತ್ವ ಸರಿಯಾಗಿ ರೂಪುಗೊಳ್ಳುತ್ತದೆ. ತಾಯಿಯಾದವಳಿಗೆ ತಾಳ್ಮೆ ಬೇಕೇ ಬೇಕು!!!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.