ಶನಿವಾರ, ಅಕ್ಟೋಬರ್ 19, 2019
27 °C

ಕೋಮಲ್ ಮತ್ತು ಕೋಟಿ

Published:
Updated:
ಕೋಮಲ್ ಮತ್ತು ಕೋಟಿ

ಹೊಸ ಕ್ಯಾಲೆಂಡರ್ ವರ್ಷದೊಂದಿಗೆ ಕನ್ನಡ ದೃಶ್ಯಮಾಧ್ಯಮದಲ್ಲಿ `ಕೋಟಿ ಜಪ~ ಆರಂಭವಾದಂತಿದೆ. ಸೂಟ್ ತೊಟ್ಟುಕೊಂಡ ಪುನೀತ್ ಕಿರುತೆರೆಯಲ್ಲಿ `ಕೋಟ್ಯಾಧಿಪತಿ~ ರಿಯಲ್ ಶೋ ಸಿದ್ಧತೆಯಲ್ಲಿದ್ದಾರೆ. ಬೆಳ್ಳಿತೆರೆಯಲ್ಲಿ ಕೋಟಿಯ ಮಾತನಾಡುತ್ತಿರುವುದು ಕೋಮಲ್.`ಕರೋಡ್‌ಪತಿ~- ಕೋಮಲ್ ನಾಯಕರಾಗಿ ನಟಿಸುತ್ತಿರುವ ಹೊಸಚಿತ್ರದ ಹೆಸರು. ಹಿಂದಿ ಚಿತ್ರದ ಶೀರ್ಷಿಕೆ ಇದ್ದಂತಿದೆಯಲ್ಲ- ಎಂದು ಕೆಣಕಿದಾಗ ಅವರು ಥಟ್ಟೆಂದು ಉತ್ತರಿಸಿದ್ದು- `ಕೋಟ್ಯಧಿಪತಿ ಟೈಟಲ್ ಅನ್ನು ಬೇರೆಯವರು ನೋಂದಾಯಿಸಿರುವುದರಿಂದ ನಾನು ಕರೋಡ್‌ಪತಿ ಆಗಬೇಕಾಯಿತು~.ನಾಮ ಪುರಾಣ ಅದೇನೇ ಇರಲಿ, ಏನಿದು `ಕರೋಡ್‌ಪತಿ~ ಎಂದರೆ ಚಿತ್ರತಂಡದ ಯಾರೊಬ್ಬರೂ ಸ್ಪಷ್ಟ ಉತ್ತರ ನೀಡಲಿಲ್ಲ. `ಇದು ಕೋಮಲ್ ಅವರಿಗೆ ಹೇಳಿ ಮಾಡಿಸಿದಂತಹ ಕಥೆ. ಅವರ ಕಾಮಿಡಿ ಟೈಮಿಂಗ್ ಸಿನಿಮಾದಲ್ಲಿ ಹೊಸ ಹೊಳಪು ಪಡೆದುಕೊಳ್ಳಲಿದೆ. ಕೋಮಲ್ ಅವರಿಗಷ್ಟೇ ಅಲ್ಲ, ನನಗೆ ಕೂಡ ಈ ಚಿತ್ರ ಏಣಿ ಆಗಲಿದೆ~ ಎಂದು ನಿರ್ದೇಶಕ ಸಿ.ರಮೇಶ್ ಆತ್ಮವಿಶ್ವಾಸದಿಂದ ಹೇಳಿದರು.ನಿರ್ದೇಶಕರು ಹೇಳಿದ ಮತ್ತಷ್ಟು ವಿವರಗಳೆಂದರೆ- `ಶ್ರೀನಿವಾಸಬಾಬು ಎನ್ನುವವರು ಕರೋಡ್‌ಪತಿಯ ಕಥೆಗಾರರು. ಅವರ ಕಥೆಯನ್ನು ಗುರುಪ್ರಸಾದ್ ಹಾಗೂ ನಾಗತಿಹಳ್ಳಿ ರಮೇಶ್ ಚಿತ್ರಕಥೆಯಾಗಿ ರೂಪಾಂತರಿಸಿದ್ದಾರೆ. ಶೂಟಿಂಗ್ ಬೆಂಗಳೂರಲ್ಲೇ ನಡೆಯಲಿದೆ~.ಕಥೆಯ ಬಗ್ಗೆ ಕೊಂಚ ಗುಟ್ಟು ಬಿಟ್ಟುಕೊಟ್ಟಿದ್ದು ಕೋಮಲ್ ಅವರೇ. ನ್ಯಾಯವಾದ ದಾರಿಯಲ್ಲಿ ವ್ಯಕ್ತಿಯೊಬ್ಬ ಕೋಟಿ ಗಳಿಸಲು ಪಡಬೇಕಾದ ಪರಿಪಾಟಲು ಕಥೆಯಲ್ಲಿದೆಯಂತೆ. ಪ್ರಿಯಾ ಹಾಗೂ ಮೀರಾ ಎನ್ನುವ ಇಬ್ಬರು ಚೆಲುವೆಯರು ಕೋಮಲ್‌ಗೆ ನಾಯಕಿಯರು. ಫೈಟ್‌ಗಳ ಸಂಖ್ಯೆ ಕೂಡ ಎರಡು! `ನಾಯಕಿಯರನ್ನು ರಕ್ಷಿಸಲಿಕ್ಕಾಗಿ ಈ ಹೊಡೆದಾಟ~ ಎಂದು ಕೋಮಲ್ ಜೋಕ್ ಸಿಡಿಸಿದರು.ಸುರೇಶ್ `ಕರೋಡ್‌ಪತಿ~ಯ ನಿರ್ಮಾಪಕರು. `ಎಲ್ಲರ ಸಹಕಾರ ನಮ್ಮ ಚಿತ್ರಕ್ಕೆ ಬೇಕು~ ಎನ್ನುವುದು ಅವರ ಕೋರಿಕೆ. ಅಂದಹಾಗೆ, `ಕರೋಡ್‌ಪತಿ~ಯ ಸುದ್ದಿಗೋಷ್ಠಿ ನಡೆದದ್ದು ಜನವರಿ 1ರಂದು. 2012ರಲ್ಲಿ ನಡೆದ ಮೊದಲ ಸಿನಿಮಾ ಗೋಷ್ಠಿಯದು. 

Post Comments (+)