ಮಂಗಳವಾರ, ಏಪ್ರಿಲ್ 13, 2021
32 °C

ಕೋಮಾರಪಂಥರ ಹೊಂಡೆಯಾಟದ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ದೀಪಾವಳಿ ಪಾಡ್ಯದಂದು ಹಿಂಡಲಕಾಯಿಗಳನ್ನು ಕವಣೆಗಳಲ್ಲಿ ಹಾಕಿ ಹೊಡೆದಾಡುವ ಜಾನಪದ ಆಚರಣೆಯು ಸ್ಥಳೀಯ ಕೋಮಾರಪಂಥ ಸಮುದಾಯದ ಯುವಕರಲ್ಲಿ ರೂಢಿಯಲ್ಲಿದೆ. ಬುಧವಾರ ಸಂಜೆ ಸಾಂಪ್ರದಾಯಿಕ ಸಡಗರ ಸಂಭ್ರಮದೊಂದಿಗೆ ಪಟ್ಟಣದಲ್ಲಿ ಜರುಗಿದ ಈ ಜನಪದ ಕ್ರೀಡೆಯನ್ನು ಸಹಸ್ರಾರು ಜನರು ನೋಡಿ ಆನಂದಿಸಿದರು. ಜಿಲ್ಲೆಯ ಪ್ರಮುಖ ಕೃಷಿ ಪ್ರಧಾನ ಸಮುದಾಯಗಳಲ್ಲಿ ಒಂದಾಗಿರುವ ಕ್ಷತ್ರಿಯ ಕೋಮಾರ ಪಂಥದ ಯುವಕರು ದೀಪಾವಳಿ ಪಾಡ್ಯದಂದು ಆಡುವ ಹೊಂಡೆಯಾಟವು ಸಮುದಾಯದಲ್ಲಿನ ಕ್ಷಾತ್ರ ಗುಣವನ್ನು ಜೀವಂತವಾಗಿಡುವ ಮತ್ತು ಸಾಂಪ್ರದಾಯಿಕ  ಸ್ಪರ್ಧೆ, ಸಂಘರ್ಷಗಳ ಜಾನಪದ ರೂಪವಾಗಿದೆ. ವಾಡಿಕೆಯಂತೆ  ಲಕ್ಷ್ಮೇಶ್ವರದ ತಂಡದವರು ಕುಂಬಾರಕೇರಿಯ ಕದಂಬೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟರೆ, ಹೊನ್ನಿಕೇರಿ ತಂಡದ ಯುವಕರು ಮಹದೇವ ದೇವಸ್ಥಾನದಿಂದ ಹೊರಟು ಪಟ್ಟಣದ ಭೂಮಿ ತಾಯಿ ಎಂದೇ ಹೆಸರಾದ ಶಾಂತಾದುರ್ಗಾ ದೇವಿಯ ಗುಡಿಯಲ್ಲಿ ಮುಖಾಮುಖಿಯಾಗುತ್ತಾರೆ. ವಿಜಯವನ್ನು ಕೋರಿ ದೇವಿಗೆ ಪೂಜೆ ಸಲ್ಲಿಸಿ ಗೋಪುರಕ್ಕೆ ಹಿಂಡಲಕಾಯಿಗಳನ್ನು ಎಸೆದು ಹೊಂಡೆಯಾಟಕ್ಕೆ ಉಭಯ ತಂಡಗಳು ಚಾಲನೆ ನೀಡಿದವು.  ನಂತರ ಪ್ರಮುಖ ಬಿದಿಗಳಲ್ಲಿ ಸಂಚರಿಸುತ್ತ ಅಲ್ಲಲ್ಲಿ ನಿಂತುಕೊಂಡು ಎರಡೂ ತಂಡಗಳ ಹುರಿಯಾಳುಗಳು ಕವಣೆಗಳಲ್ಲಿ ಹಿಂಡಲಕಾಯಿಗಳನ್ನು ಹಾಕಿ ತುಪಾಕಿ ಹಾರಿಸಿದಂತೆ ಚಟಲ್ ಪಟಲ್ ಎಂದು ಎದುರಾಳಿಗಳ ಮೇಲೆ ದಾಳಿ ನಡೆಸಿದರು. ಪರಸ್ಪರರು ಹಿಂಡಲಕಾಯಿ ಹೊಡೆತಗಳನ್ನು ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತ ಎದುರು ಗುಂಪಿನ ಮೇಲೆ ಕವಣೆ ಬೀಸಿ ಕೇಕೇ ಹಾಕಿದರು.ಮಂಡಿಯ ಕೆಳ ಭಾಗದಲ್ಲಿ ಮಾತ್ರ ಕವಣೆ ಬೀಸಬೇಕು ಎಂಬ ನಿಯಮಗಳು ಈ ಆಟದಲ್ಲಿ ಬಳಕೆಯಲ್ಲಿವೆ. ಆಟ ಮುಗಿದ  ನಂತರ ಪರಸ್ಪರರು ಮೈತ್ರಿಯುತವಾಗಿ ಜೀವನ ನಡೆಸುವ ಭರವಸೆಯೊಂದಿಗೆ ಹಸ್ತಲಾಘವ ನೀಡಿ ಸಂತಸದಿಂದ ಬೀಳ್ಕೊಂಡರು.ಹೊಂಡಯಾಟ ಮುಗಿಸಿ ಮನೆಗೆ ಹೋಗುವ ಈ ಯುವಕರನ್ನು ಯುದ್ಧ ಭೂಮಿಯಿಂದ ವೀರ ಯೋಧರಂತೆ ಮನೆಯ ಗೃಹಿಣಿಯರು ಅಥವಾ ಸಹೋದರಿಯರು ಆರತಿ ಎತ್ತಿ ಬರಮಾಡಿಕೊಳ್ಳುವುದು ಈ ಆಚರಣೆಯ ವಿಶೇಷತೆಯಾಗಿದೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.