ಗುರುವಾರ , ಅಕ್ಟೋಬರ್ 17, 2019
26 °C

ಕೋಮಾ ಸ್ಥಿತಿಯಲ್ಲಿ ಸುಖ್‌ರಾಂ: ನ್ಯಾಯಾಲಯಕ್ಕೆ ವಕೀಲರ ಮಾಹಿತಿ

Published:
Updated:

 ನವದೆಹಲಿ (ಪಿಟಿಐ): ಟೆಲಿಕಾಂ ಹಗರಣದಲ್ಲಿ ಶಿಕ್ಷೆಗೊಳಪಟ್ಟಿರುವ ಮಾಜಿ  ಕೇಂದ್ರ ಸಚಿವ ಸುಖ್‌ರಾಂ

ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಅವರ ವಕೀಲರು ಶುಕ್ರವಾರ ದೆಹಲಿ ಕೋರ್ಟ್‌ಗೆ ತಿಳಿಸಿದ್ದು, ವಿಚಾರಣೆಯನ್ನು ಶನಿವಾರಕ್ಕೆ (ಜ.7) ಮುಂದೂಡಲಾಗಿದೆ.1993ರ ಈ ಹಗರಣಕ್ಕೆ ಸಂಬಂಧಿಸಿದಂತೆ ಸಂಜೆಯೊಳಗೆ ವಿಚಾರಣಾ ಕೋರ್ಟ್‌ಗೆ ಹಾಜರಾಗುವಂತೆ ಸುಖ್‌ರಾಂ ಅವರಿಗೆ ಗುರುವಾರ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಅನಾರೋಗ್ಯದ ಕಾರಣ ನೀಡಿ ಅವರು ಕೋರ್ಟ್‌ಗೆ ಗೈರುಹಾಜರಿದ್ದರು.`ಟೋಮೊಗ್ರಫಿ ಹಾಗೂ ಆಂಜಿಯೊಗ್ರಫಿಗೆ ಒಳಪಟ್ಟ ಸುಖ್‌ರಾಂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಕೋಮಾದಲ್ಲಿ ಇರುವುದರಿಂದ ಆಸ್ಪತ್ರೆಯಿಂದ ಹೊರಕ್ಕೆ ಬರಲಾಗದು~ ಎಂದು ವಕೀಲರು ಸಿಬಿಐ ವಿಶೇಷ ನ್ಯಾಯಾಧೀಶ ಧರ್ಮೇಶ್ ಶರ್ಮ ಅವರಿಗೆ ತಿಳಿಸಿದರು.ಸಂಬಂಧಪಟ್ಟ ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ್ ಜೈನ್ ಅವರು ಶುಕ್ರವಾರ ರಜೆಯ ಮೇಲೆ ತೆರಳಿದ್ದರಿಂದ ಶರ್ಮ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದರು.`ಅರ್ಜಿದಾರ/ ಆರೋಪಿ ಕೋಮಾದಲ್ಲಿದ್ದಾರೆ. ಅಲ್ಲದೆ ಉಸ್ತುವಾರಿ ನ್ಯಾಯಾಧೀಶರು ರಜೆಯ ಮೇಲೆ ತೆರಳಿದ್ದಾರೆ. ಆದ ಕಾರಣ ವಿಚಾರಣೆಯನ್ನು ಶನಿವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡಲಾಗಿದೆ~ಎಂದು ಶರ್ಮ ವಿವರಿಸಿದರು.ಇತರ ಇಬ್ಬರು ಆರೋಪಿಗಳಾದ ಮಾಜಿ ಅಧಿಕಾರಿ ರುನು ಘೋಷ್ ಹಾಗೂ ಹೈದರಾಬಾದ್ ಮೂಲದ ಉದ್ಯಮಿ ಪಿ.ರಾಮ ರಾವ್ ಅವರು ಗುರುವಾರದೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ನಂತರ ಅವರನ್ನು ಕಾರಾಗೃಹಕ್ಕೆ ಕಳುಹಿಸಲಾಯಿತು. ಇಬ್ಬರೂ ಕ್ರಮವಾಗಿ ಎರಡು ಮತ್ತು ಮೂರು ವರ್ಷಗಳ ಶಿಕ್ಷೆ ಅನುಭವಿಸಬೇಕಾಗಿದೆ.ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದ್ದ ಹೈಕೋರ್ಟ್, ಮೂವರೂ ಗುರುವಾರದೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಈ ಮೂವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಚಾರಣಾ ನ್ಯಾಯಾಲಯಕ್ಕೆ ಹಾಜರಾದಲ್ಲಿ ಮಾತ್ರ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು.

 

ವೈದ್ಯರಿಂದ ವ್ಯತಿರಿಕ್ತ ಹೇಳಿಕೆ
`ಸುಖ್‌ರಾಂ ಅವರು ಕೋಮಾ ಸ್ಥಿತಿಯಲ್ಲಿ ಇಲ್ಲ~ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಮೆಟ್ರೊ ಹೃದಯ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ವಾಸಿ ಯು. ಖಾನ್ ಹೇಳಿಕೆಯಲ್ಲಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.ಈ ಮೂಲಕ ಅವರು, ಸುಖ್‌ರಾಂ ಕೋಮಾ ಸ್ಥಿತಿಯಲ್ಲಿದ್ದಾರೆ ಎಂಬ ಅವರ ವಕೀಲರ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

`ಸುಖ್‌ರಾಂ ಸ್ಥಿತಿ ಸ್ಥಿರವಾಗಿದೆ. ಸೋಡಿಯಂ ಪ್ರಮಾಣ ಕಡಿವೆು ಆಗಿರುವುದರಿಂದ ಅವರಿಗೆ ತುಸು ಮಂಪರು ಆವರಿಸಿಕೊಂಡಿದೆ ಅಷ್ಟೆ~ ಎಂದು ಮೆಟ್ರೊ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ. ಸಂದೀಪ್ ಛತ್ರಥ್ ತಿಳಿಸಿದ್ದಾರೆ.

 

Post Comments (+)