ಕೋಮುವಾದದಿಂದ ರಾಷ್ಟ್ರ ವ್ಯವಸ್ಥೆ ನಾಶ

7

ಕೋಮುವಾದದಿಂದ ರಾಷ್ಟ್ರ ವ್ಯವಸ್ಥೆ ನಾಶ

Published:
Updated:

ಬೆಂಗಳೂರು: ಜಾತಿ ರಾಜಕಾರಣ ಮತ್ತು ಕೋಮುವಾದ ಇಡೀ ರಾಷ್ಟ್ರದ ವ್ಯವಸ್ಥೆಯನ್ನೇ ನಾಶ ಮಾಡುತ್ತಿದೆ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಶುಕ್ರವಾರ ಇಲ್ಲಿ ವಿಷಾದಿಸಿದರು.

ಸರ್ಕಾರಿ ಕಲಾ ಕಾಲೇಜು `ಭಾರತ ಸಂವಿಧಾನದ ವಜ್ರ ಮಹೋತ್ಸವ~ ಆಚರಣೆ ಅಂಗವಾಗಿ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಜಾತ್ಯತೀತ ರಾಷ್ಟ್ರ ಹಾಗೂ ಜಾತಿರಹಿತ ಸಮಾಜ ನಿರ್ಮಾಣದ ಪರಿಕಲ್ಪನೆಯಲ್ಲಿ ನಮ್ಮ ಸಂವಿಧಾನ ರಚನೆಯಾದರೂ ರಾಜಕಾರಣದಲ್ಲಿ ನುಸುಳಿದ ಜಾತೀಯತೆ ಇಡೀ ವ್ಯವಸ್ಥೆಯನ್ನು ಕುಲಗೆಡಿಸುತ್ತಿದೆ. ಇದು ಜಾತ್ಯತೀತ ರಾಷ್ಟ್ರದ ಬೆಳವಣಿಗೆಗೆ ಹಿನ್ನಡೆಯಾಗಿದ್ದು, ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿ ನರಳುವಂತಾಗಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.

`ಸಮಾಜದಲ್ಲಿ ತುಳಿತಕ್ಕೆ ಒಳಗಾದಂತಹ ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂಬುದು ಸಂವಿಧಾನದ ಆಶಯ. ಆದರೆ, ಭ್ರಷ್ಟ ವ್ಯವಸ್ಥೆಯಿಂದ ರಾಷ್ಟ್ರಪಿತ ಗಾಂಧೀಜಿ ಕಂಡಂತಹ ಕನಸು ಕನಸಾಗಿಯೇ ಉಳಿದಿದೆ. ಬಡತನ, ಅಸಮಾನತೆ ಯಥಾಸ್ಥಿತಿ ಮುಂದುವರಿದಿದೆ. ಸಮಾಜ ಎಚ್ಚೆತ್ತುಕೊಳ್ಳದ ಹೊರತು, ಸರ್ಕಾರಗಳನ್ನು ದೂರಿ ಪ್ರಯೋಜನವಿಲ್ಲ~ ಎಂದರು.

`ನಮ್ಮ ಸಂವಿಧಾನವನ್ನು ದೂಷಿಸುವುದರಿಂದಲೂ ಪ್ರಯೋಜನವಿಲ್ಲ. ಇದರಿಂದ ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆಯಾಗಲಿದೆ~ ಎಂದು ಎಚ್ಚರಿಸಿದ ಅವರು, `ಸಮಾಜದ ಬೆಳವಣಿಗೆಗೆ ಶಿಕ್ಷಣ ವ್ಯವಸ್ಥೆಯಲ್ಲಿಯೂ ತುರ್ತು ಸುಧಾರಣೆ ತರುವ ಅಗತ್ಯವಿದೆ~ ಎಂದು ಪ್ರತಿಪಾದಿಸಿದರು.

ಸಂವಿಧಾನ ಬೈಬಲ್ ಇದ್ದ ಹಾಗೆ: `ಭಾರತದ ಸಂವಿಧಾನ ಬೈಬಲ್ ಇದ್ದ ಹಾಗೆ. ದೇವರು ಹಾಗೂ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ರಾಜಕಾರಣಿಗಳು ಸಂವಿಧಾನದ ಆಶಯಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಲು ಪ್ರಯತ್ನಿಸುತ್ತಿದ್ದೇವೆ ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ~ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರ್. ರೋಷನ್ ಬೇಗ್ ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಜೈನ್ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಸಂದೀಪ್ ಶಾಸ್ತ್ರಿ, `ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ~ ಎಂದರು.

`ಮತದಾರ ಕೈಕಟ್ಟಿ ಕೂರುವುದನ್ನು ಬಿಟ್ಟು ವ್ಯವಸ್ಥೆ ಸುಧಾರಣೆಗೆ ಅವರಿಗೂ ಅವಕಾಶ ನೀಡುವ ಕುರಿತು ಚಿಂತನೆ ನಡೆಯಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭರವಸೆಗಳ ಮಹಾಪೂರವನ್ನೇ ಹರಿಸುತ್ತಿವೆ. ಜನರ ನಿರೀಕ್ಷೆಗೂ ಮಿತಿ ಇಲ್ಲ. ಅಂತಿಮವಾಗಿ ಪ್ರಗತಿಯಲ್ಲಿ ಕೊರತೆ ಕಾಣುತ್ತಿದ್ದೇವೆ~ ಎಂದು ವಿಶ್ಲೇಷಿಸಿದರು.

ಪ್ರಾಂಶುಪಾಲ ಪ್ರೊ.ಆರ್. ಶ್ರೀನಿವಾಸ್ ಸ್ವಾಗತಿಸಿದರು. ಬೆಂಗಳೂರು ವಿ.ವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಜಿ. ಕೃಷ್ಣನ್ ವಂದಿಸಿದರು.

`ಕಾವಲು ನಾಯಿ~ ರೀತಿ ಕೆಲಸ ಮಾಡುತ್ತೇನೆ

`ನಾನು ಕರ್ನಾಟಕ ರಾಜ್ಯದ ಜನರ ಹಿತರಕ್ಷಣೆಗಾಗಿ ಪ್ರಜಾಪ್ರಭುತ್ವದ `ಕಾವಲು ನಾಯಿ~ ರೀತಿ ಕೆಲಸ ಮಾಡುತ್ತೇನೆ. ಸಂವಿಧಾನದ ಚೌಕಟ್ಟಿನಲ್ಲಿ ರಾಜ್ಯದ ಆಡಳಿತ ನಡೆಯಬೇಕೆಂಬುದು ನನ್ನ ಆಶಯ. ಇದಕ್ಕಾಗಿ ಅಗತ್ಯ ಬಿದ್ದಾಗ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುವುದು ನನ್ನ ಜವಾಬ್ದಾರಿ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಪ್ರತಿಕ್ರಿಯಿಸಿದರು.

`ರಾಜ್ಯಪಾಲರು ಅದನ್ನು ಮಾಡಬಾರದು, ಇದನ್ನು ಮಾಡಬಾರದು ಎಂದು ಕೆಲವರು ಬೊಬ್ಬೆ ಹೊಡೆಯುತ್ತಾರೆ. ಆದರೆ, ಜನರ ಹಿತ ಕಾಪಾಡುವುದು ನನ್ನ ಕೆಲಸ~ ಎಂದು ಅವರು ಸಮಾರಂಭದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದೆ ಹೇಳಿದರು.

ರಾಜ್ಯದ ರಾಜಕೀಯ ಬೆಳವಣಿಗೆ ಹಾಗೂ ಬರ ಪರಿಸ್ಥಿತಿ ಬಗ್ಗೆ ಸಮಾರಂಭದ ನಂತರ ಪತ್ರಕರ್ತರು ರಾಜ್ಯಪಾಲರನ್ನು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry