ಸೋಮವಾರ, ಮೇ 16, 2022
29 °C

ಕೋರಂ ಕೊರತೆ: ಸಭೆ ಮಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ತಾ.ಪಂ.ನಲ್ಲಿ ಬಹುಮತ ಪಡೆದಿದ್ದರೂ, ಮೀಸಲಾತಿ ಆದೇಶದಿಂದ ಅಧ್ಯಕ್ಷ ಸ್ಥಾನದಿಂದ ವಂಚಿತಗೊಂಡಿರುವ ಕಾಂಗ್ರೆಸ್ ಪಕ್ಷದ ಸದಸ್ಯರು, ಸೋಮವಾರ ನಡೆಯಬೇಕಿದ್ದ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಬಹಿಷ್ಕಾರ ಹಾಕಿದ ಪರಿಣಾಮ, ‘ಕೋರಂ’ ಕೊರತೆ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಮಾರ್ಚ್ 25ಕ್ಕೆ ಮುಂದೂಡಲಾಯಿತು.ಅಧ್ಯಕ್ಷ ಸ್ಥಾನ ‘ಅನುಸೂಚಿತ ಜಾತಿ ಮಹಿಳೆ’ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ‘ಅ’ವರ್ಗಕ್ಕೆ ಮೀಸಲಿರಿಸಿ ಆದೇಶ ಹೊರಬಿದ್ದಿದೆ.ಚುನಾವಣೆಯ ನಿಗದಿತ ವೇಳಾಪಟ್ಟಿಯಂತೆ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಉಚ್ಚಂಗಿದುರ್ಗ ಕ್ಷೇತ್ರದ ಜಯಮಾಲಾ ತಮ್ಮ ಉಮೇದುವಾರಿಕೆ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ನಿಚ್ಚವ್ವನಹಳ್ಳಿ ಕ್ಷೇತ್ರದ ಚನ್ನಪ್ಪ ಹಾಗೂ ಹಲುವಾಗಲು ಕ್ಷೇತ್ರದ ಎಂ. ಪಾರ್ವತಿ ಬಸವರಾಜ ನಾಮಪತ್ರ ಸಲ್ಲಿಸಿದರು.ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮೊದಲು ಕೇವಲ ಬಿಜೆಪಿಯಿಂದ ಆಯ್ಕೆಯಾಗಿರುವ 7 ಮಂದಿ ಸದಸ್ಯರು ಮಾತ್ರ ಭಾಗವಹಿಸಿದರು. ನಂತರ ಕಾಂಗ್ರೆಸ್‌ನ ಕೆಲ ಸದಸ್ಯರು ಮಾತ್ರ ಚುನಾವಣಾ ನಡೆಯುತ್ತಿದ್ದ ಕೊಠಡಿಗೆ ಆಗಮಿಸಿದರು. ಈ ಮಧ್ಯೆ ಚುನಾವಣಾ ನಡಾವಳಿಯ ಪುಸ್ತಕಕ್ಕೆ ಸಹಿ ಹಾಕಿಸಿಕೊಳ್ಳಲು ಮುಂದಾದ ಸಿಬ್ಬಂದಿಗೆ ಕಾಂಗ್ರೆಸ್ ಸದಸ್ಯರಾದ ಮಂಜುನಾಥ, ವಿಶ್ವನಾಥ, ಎನ್. ಕೊಟ್ರೇಶ್ ಹಾಗೂ ಇತರರು ಸಹಿ ಮಾಡದೆ, ತಟಸ್ಥರಾಗಿರುವುದಾಗಿ ತಿಳಿಸಿದರು.ಆದರೆ, ಇದನ್ನು ಒಪ್ಪದ ಚುನಾವಣಾಧಿಕಾರಿ, ನೀವು ನಡಾವಳಿ ಪುಸ್ತಕಕ್ಕೆ ಸಹಿ ಹಾಕಿದ ನಂತರವೇ, ‘ಕೋರಂ’ ನೋಡಿ ಚುನಾವಣಾ ಪ್ರಕ್ರಿಯೆ ನಡೆಸುವುದಾಗಿ ತಿಳಿಸಿದರು.

ಸಹಿ ಮಾಡಿ ಚುನಾವಣೆಯಲ್ಲಿ ಪಾಲ್ಗೊಳ್ಳಿ; ಇಲ್ಲವೇ, ಹೊರಹೋಗಿ ಎಂದು ಮಂಜುನಾಥ ಅವರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಸಹ ಹೊರನಡೆದರು.ಇದರಿಂದ ಚುನಾವಣೆಗೆ ‘ಕೋರಂ’ ಕೊರತೆ ಉಂಟಾಯಿತು. ಕೋರಂ ಭರ್ತಿಗಾಗಿ ಕನಿಷ್ಠ 12ಮಂದಿ ಸದಸ್ಯರ ಆವಶ್ಯಕತೆ ಇತ್ತು. ಆದರೆ, ಹಾಜರಿದ್ದದ್ದು ಕೇವಲ ಬಿಜೆಪಿಯ 7 ಸದಸ್ಯರು ಮಾತ್ರ. ಕಾಂಗ್ರೆಸ್‌ನ ಸದಸ್ಯರು ಭಾಗವಹಿಸದ ಕಾರಣ, ಚುನಾವಣಾಧಿಕಾರಿ ಟಿ.ವಿ. ಪ್ರಕಾಶ್, ಮಾರ್ಚ್ 25ಕ್ಕೆ ಚುನಾವಣೆ ಮುಂದೂಡಿರುವುದಾಗಿ ಪ್ರಕಟಿಸಿದರು.ಅಧಿಕಾರ ದುರ್ಬಳಕೆ ಆರೋಪ

ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್‌ನಲ್ಲಿ ಆಯ್ಕೆಯಾದ ಪ್ರವರ್ಗಕ್ಕೆ ಮೀಸಲಾತಿ ಹೊರ ಬೀಳದಂತೆ ನೋಡಿಕೊಂಡು ಕುತಂತ್ರ ರಾಜಕಾರಣ ನಡೆಸುತ್ತಿದ್ದಾರೆ ಎಂದು ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂಜುನಾಥ ಆರೋಪಿಸಿದ್ದಾರೆ.ಕಾಂಗ್ರೆಸ್ 16 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಕಾರ ಹಿಡಿಯುವ ಸ್ಪಷ್ಟ ಜನಾದೇಶ ಪಡೆದಿದೆ. ಆದರೆ, ಕೇವಲ 7ಸ್ಥಾನಗಳಲ್ಲಿ ಗೆದ್ದು, ಹೀನಾಯವಾಗಿ ಸೋಲುಂಡ ಸಚಿವರು, ಮೀಸಲಾತಿ ಕೈಚಳಕದಿಂದ ಜನಾದೇಶ ಉಲ್ಲಂಘಿಸಿದ್ದಾರೆ. ಹಾಗಾಗಿ, ಸಾಂಕೇತಿಕ ಪ್ರತಿಭಟನೆ ಹಿನ್ನೆಲೆಯಲ್ಲಿ ಚುನಾವಣೆಗೆ ಬಹಿಷ್ಕಾರ ಹಾಕಿರುವುದಾಗಿ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ಮಾರ್ಚ್ 25ಕ್ಕೆ ಮುಂದೂಡಿರುವ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕೆ? ಬೇಡವೇ? ಎಂಬುದರ ಕುರಿತು, ಪಕ್ಷದ ವರಿಷ್ಠರು ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಒಂದು ವೇಳೆ ಚುನಾವಣೆಯಲ್ಲಿ ಪಾಲ್ಗೊಳ್ಳದೆ ದೂರ ಉಳಿಯುವ ಅವಕಾಶ ಇದ್ದರೆ ಇದೇ ರೀತಿ ಅಸಹಕಾರ ಚಳವಳಿ ಮುಂದುವರಿಸುವುದಾಗಿ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.