ಕೋರಂ ಕೊರತೆ-ಸಾಮಾನ್ಯ ಸಭೆ ಮುಂದೂಡಿಕೆ

7
ತಾ.ಪಂ. ಸಭೆ: ಹಾಲಾಡಿ ಶ್ರೀನಿವಾಸ ಶೆಟ್ಟಿ ಬಣ ಬಿಜೆಪಿ ಸದಸ್ಯರ ಮಧ್ಯೆ ಜಟಾಪಟಿ

ಕೋರಂ ಕೊರತೆ-ಸಾಮಾನ್ಯ ಸಭೆ ಮುಂದೂಡಿಕೆ

Published:
Updated:

ಉಡುಪಿ: ಬಿಜೆಪಿಯ ಬಹುತೇಕ ಸದಸ್ಯರು ಗೈರಾಗಿದ್ದರಿಂದ ಶುಕ್ರವಾರ ನಡೆಯಬೇಕಿದ್ದ ಉಡುಪಿ ತಾಲ್ಲೂಕು ಪಂಚಾಯಿತಿಯ 13ನೇ ಸಾಮಾನ್ಯ ಸಭೆಯನ್ನು ಮುಂದೂಡಲಾಯಿತು.ಬಿಜೆಪಿ ಮತ್ತು ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಗುಂಪಿನ ಮಧ್ಯೆ ಭಿನ್ನಾಭಿಪ್ರಾಯ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಸಭೆಗೆ ಹಾಜರಾಗಲಿಲ್ಲ ಎಂದು ತಿಳಿದು ಬಂದಿದೆ.

ಬೆಳಿಗ್ಗೆ ಹನ್ನೊಂದು ಗಂಟೆಗೆ ಸಭೆ ನಿಗದಿಯಾಗಿತ್ತು.ಕಾಂಗ್ರೆಸ್‌ನ 18 ಸದಸ್ಯರು ಮತ್ತು ಬಿಜೆಪಿ ನಾಲ್ವರು ಸದಸ್ಯರು ಸಭೆಗೆ ಹಾಜರಾಗಿದ್ದರು. ಆದರೆ ಸಭೆ ನಡೆಯಲು 30 ಸದಸ್ಯರ ಹಾಜರಿಯ (ಕೋರಂ) ಅಗತ್ಯ ಇತ್ತು. ಕಾರ್ಯ ನಿರ್ವಹಣಾ ಅಧಿಕಾರಿ ಮಂಜುನಾಥಯ್ಯ ಅರ್ಧ ಗಂಟೆಗಳ ಕಾಲ ಕಾಲಾವಕಾಶ ನೀಡಿದರು. 11.30ರ ನಂತರವೂ ಹೆಚ್ಚಿನ ಸದಸ್ಯರು ಬರದ ಕಾರಣ ಸಭೆಯನ್ನು ಮುಂದೂಡಲಾಯಿತು.ಸಭೆಯನ್ನು ಮುಂದೂಡಿದರೂ ಪರವಾಗಿಲ್ಲ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನಾದರೂ ನೀಡಿ ಎಂದು ಕಾಂಗ್ರೆಸ್ ಸದಸ್ಯೆ ವೆರೋನಿಕ ಕರ್ನೆಲಿಯೋ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ  ಮಂಜುನಾಥಯ್ಯ ಸದಸ್ಯರಿಗೆ ಕೆಲವು ಮಾಹಿತಿಗಳನ್ನು ನೀಡಿದರು.

ಬಣ ರಾಜಕೀಯ: ಹಾಲಾಡಿಶ್ರೀನಿವಾಸ ಶೆಟ್ಟಿ ಬಣ ಮತ್ತು ಬಿಜೆಪಿ ಬಣದವರ ಮಧ್ಯೆ ಒಪ್ಪಂದ ಏರ್ಪಟ್ಟ ನಂತರ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು.ಹಾಲಾಡಿ ಅವರ ಬಣದ ಗೌರಿ ಪೂಜಾರಿ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಬಿಜೆಪಿಯ ಶ್ರೀರಾಮ ಕುಲಾಲ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಬಿಜೆಪಿಯ ಹಾಲಾಡಿ ಬಣದವರ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು.ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಟ್ಟಿರುವ ಕಾರಣ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ನಮ್ಮವರಿಗೆ ನೀಡಿ ಎಂದು ಬಿಜೆಪಿ ಸದಸ್ಯರು ಮನವಿ ಮಾಡಿದ್ದರು. ಆದರೆ ಇದಕ್ಕೆ ಸ್ಪಂದಿಸದ ಹಾಲಾಡಿ ಬಣದವರು, ತಮ್ಮ ಬಣದವರೇ ಆದ ದಿವಾಕರ ಹೆಗ್ಡೆ ಅವರನ್ನು ಆಯ್ಕೆ ಮಾಡಿದ್ದರು. ಇದರಿಂದ ಬಿಜೆಪಿ ಸದಸ್ಯರು ಆಕ್ರೋಶಗೊಂಡಿದ್ದರು ಎಂದು ತಿಳಿದು ಬಂದಿದೆ.ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡದ ಹಾಲಾಡಿ ಬಣದವರಿಗೆ ಬುದ್ಧಿ ಕಲಿಸಲು ನಿರ್ಧರಿಸುವ ಬಿಜೆಪಿ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದಾರೆ ಎನ್ನುತ್ತವೆ ಮೂಲಗಳು.ಉಪಾಧ್ಯಕ್ಷ ಶ್ರೀರಾಮ ಕುಲಾಲ, ಮಾಜಿ ಅಧ್ಯಕ್ಷ ಮತ್ತು ಹಿರಿಯ ಸದಸ್ಯ ದೇವದಾಸ್ ಹೆಬ್ಬಾರ್ ಅವರೇ ಗೈರು ಹಾಜರಾಗಿದ್ದರಿಂದ ವಿರೋಧಿಗಳನ್ನು ಹೆಣೆಯಲು ಪಕ್ಷವೇ ಗೈರು ಹಾಜರಿಯ ತಂತ್ರ ರೂಪಿಸಿದೆ ಎಂಬ ಮಾತು ಕೇಳಿ ಬಂದಿದೆ.`ಸದಸ್ಯರು ಏಕೆ ಗೈರು ಹಾಜರಾಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಎಲ್ಲರೂ ಸಹಕಾರ ನೀಡುವ ವಿಶ್ವಾಸ ಇದೆ. ಮುಂದೆ ಸಭೆ ನಡೆಯುವಂತೆ ನೋಡಿಕೊಳ್ಳುತ್ತೇನೆ' ಎಂದು ಅಧ್ಯಕ್ಷೆ ಗೌರಿ ಪೂಜಾರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry