ಕೋರವಾರ ಗ್ರಾಮದಲ್ಲಿ ನೀರಿಗಾಗಿ ಹರಸಾಹಸ

7

ಕೋರವಾರ ಗ್ರಾಮದಲ್ಲಿ ನೀರಿಗಾಗಿ ಹರಸಾಹಸ

Published:
Updated:
ಕೋರವಾರ ಗ್ರಾಮದಲ್ಲಿ ನೀರಿಗಾಗಿ ಹರಸಾಹಸ

ಕೋರವಾರ(ತಾ.ಸಿಂದಗಿ): `ನೀರಿಗಾಗಿ ಐದಾರು ಕಿ.ಮೀ ದೂರದ ತೋಟಗಳಿಗೆ ಹೋಗಿ ಹೊತ್ತು ತರಬೇಕಾದ ಹರಸಾಹಸ ನಿತ್ಯವೂ ಇದೆ. ನೀರಿಲ್ಲದ ಕಾರಣ ಊರಿನ ಬಹುತೇಕ ಜನ ಬೇರೆ ಊರಿಗೆ ಸಂಬಂಧಿಕರ ಮನೆಗೆ ಹೋಗಿರುವ ಅನಿವಾರ್ಯತೆ ಎದುರಾಗಿದೆ. ಊರಲ್ಲಿದ್ದವರು ಸ್ನಾನ ಮಾಡದೇ ಇರಬೇಕಾದ ದು:ಸ್ಥಿತಿ ಬಂದೊದಗಿದೆ~ ಇದನ್ನೆಲ್ಲ ಹೇಳಿದವರು ಕೋರವಾರ ಗ್ರಾಮಸ್ಥರು.ಮಕ್ಕಳನ್ನೊಳಗೊಂಡು ಮನೆ ಮಂದಿ ಎಲ್ಲಾ ಹಗಲು ರಾತ್ರಿಯೆನ್ನದೇ ಬಿಸಲು, ಗಾಳಿಯೆನ್ನದೇ ನೀರಿಗಾಗಿ, ಟ್ಯಾಂಕರ್ ನೀರಿಗಾಗಿ ಸರದಿ ಹಚ್ಚಿ ನಿಲ್ಲಬೇಕಾಗಿದೆ. ಕೈಗಾಡಿ, ಎತ್ತಿನ ಗಾಡಿ ಎಲ್ಲವೂ ಈಗ ನೀರಿಗಾಗಿಯೇ ಬಳಕೆ ಮಾಡಲಾಗುತ್ತಿದೆ. ಜೂನ್ 15 ದಾಟುತ್ತಿದೆ. ಇನ್ನೂ ಮಳೆ ಲಕ್ಷಣವೇ ಕಾಣ್ತಾ ಇಲ್ಲಾ. ಇದೇ ಪರಿಸ್ಥಿತಿ ಮುಂದುವರಿದರೆ ಹೇಗೆ ಎಂಬ ಆತಂಕ ತುಂಬಾ ಕಾಡುತ್ತಲಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಭೀಮನಗೌಡ ಕುಳೇಕುಮಟಗಿ ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿ ಎದುರು ಗೋಳು ತೋಡಿಕೊಂಡರು.ಪ್ರತಿನಿತ್ಯ ಗ್ರಾಮದಲ್ಲಿ ನಾಲ್ಕು ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. 15ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಕೋರವಾರದಲ್ಲಿ ತಾಂಡಾ ಒಳಗೊಂಡಂತೆ ಐದು ವಾರ್ಡುಗಳಿವೆ. 19 ಜನ ಗ್ರಾ.ಪಂ. ಸದಸ್ಯರಿದ್ದಾರೆ 1500ಕ್ಕೂ ಹೆಚ್ಚು ಮನೆಗಳಿವೆ. ಇಷ್ಟೊಂದು ಕಡಿಮೆ ಟ್ಯಾಂಕರ್ ನೀರು ಅಷ್ಟೊಂದು ಜನರಿಗೆ ಸಾಲುವುದಿಲ್ಲ. ಹೀಗಾಗಿ ಕನಿಷ್ಠ  10 ಟ್ಯಾಂಕರ್‌ಗಳಾದರೂ ತಾಲ್ಲೂಕು ಆಡಳಿತ ಹೆಚ್ಚಿಸಬೇಕು ಎಂಬುದು ಭೀಮನಗೌಡರ ಅಭಿಮತ.ಗ್ರಾಮದಲ್ಲಿ 25-30 ಕೊಳವೆಬಾವಿಗಳಿದ್ದರೂ ಇವುಗಳಲ್ಲಿ ಕೇವಲ ಎರಡು ಮಾತ್ರ ಅಲ್ಪಸ್ವಲ್ಪ ಚಾಲೂ ಸ್ಥಿತಿಯಲ್ಲಿವೆ. ಇವುಗಳಿಂದ ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಒಂದೂವರೆ ತಿಂಗಳಿಗೊಮ್ಮೆ ಬಿಡಲಾಗುತ್ತಿದೆ. ಇಲ್ಲಿನ ಮೂರ‌್ನಾಲ್ಕು ಆಳವಾದ ಬಾವಿಗಳಲ್ಲಿ ಕೂಡ ತಳ ಕಂಡಿವೆ ಎಂಬುದು ಶರಣಗೌಡ ಬಿರಾದಾರ, ನಿಂಗಣ್ಣ ಜಾಲವಾದಿ ಅವರ ಅನಿಸಿಕೆ.ಪರಿಶಿಷ್ಟ ಜಾತಿ(ಮಾದರಗೇರಿ) ಕಾಲೊನಿಗೆ ಟ್ಯಾಂಕರ್ ನೀರು ಕೂಡ ನಾಲ್ಕು ದಿನಕ್ಕೊಮ್ಮೆ ಬರುತ್ತದೆ. ಅದೂ ಕೂಡ ಅರ್ಧ-ಮರ್ಧ ನೀರು ಸರಬರಾಜು ಆಗುತ್ತದೆ ಎನ್ನುತ್ತಾರೆ ಬಸವರಾಜ ತಳಕೇರಿ.ಕೋರವಾರ ಗ್ರಾಮದ ನೀರಿನ ಸರಬರಾಜು ಕಾರ್ಯಕ್ಕಾಗಿ ಐದು ಕಿ.ಮೀ ದೂರದ ಪುರದಾಳ ಕೆರೆಯಲ್ಲಿ ತೆರೆದ ಬಾವಿಯೊಂದು ತೋಡಿಸಿ ಅಲ್ಲಿಂದ ಈ ಗ್ರಾಮಕ್ಕೆ ಪೈಪ್‌ಲೈನ್ ಅಳವಡಿಸುವ  ರೂ. 58 ಲಕ್ಷ ವೆಚ್ಚದ ಯೋಜನೆಯನ್ನು  ಹಿಂದಿನ ಶಾಸಕ ಅಶೋಕ ಶಾಬಾದಿ ಅವಧಿಯಲ್ಲಿ ರೂಪಿಸಲಾಗಿತ್ತು. ಅದು ಪ್ರಯೋಜನವಾಗಲಿಲ್ಲ.  ಇತ್ತೀಚೆಗೆ ಜಿಲ್ಲಾ ಪಂಚಾಯಿತಿ  ಎಂಜಿನಿಯರಿಂಗ್ ಉಪ ವಿಭಾಗದಿಂದ ಗ್ರಾಮದಲ್ಲಿ ಒಂದು ಕೊಳವೆಬಾವಿ ಕೊರೆಯಿಸಲಾಗಿದ್ದು, ಇದರಿಂದ ಕೆಲವು ವಾರ್ಡುಗಳಿಗಾದರೂ ನೀರು ಸರಬರಾಜು ಮಾಡಬಹುದಾಗಿದೆ. ಆದರೆ ಈ ನೀರು ಅಲ್ಲಿಯೇ ವ್ಯರ್ಥವಾಗಿ ಪೋಲಾಗುತ್ತಿದೆ. ಇದ್ದ ನೀರು ಕೂಡ ವ್ಯವಸ್ಥಿತ ಬಳಕೆ ಆಗ್ತಾ ಇಲ್ಲ ಎಂಬುದು ಬಸವರಾಜ ಏವೂರ ಅವರ ಅಭಿಪ್ರಾಯವಾಗಿದೆ.ಈ ಗ್ರಾಮ ದೇವರಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಗೊಳಪಡುತ್ತದೆ .ಈ ಕ್ಷೇತ್ರದ ಶಾಸಕರು ಬರದ ಬವಣೆ ಸಂದರ್ಭದಲ್ಲಿ ತುರ್ತಾದ ಸ್ಪಂದನೆ ಮಾಡದೇ ಇರೋ ಬಗ್ಗೆ ಗ್ರಾಮಸ್ಥರಿಂದ ನೇರ ಆರೋಪ ಕೇಳಿ ಬಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry