ಕೋರ್ಟ್‌ ಮುಂದಿರುವ ಪ್ರಕರಣಗಳ ಪ್ರಸ್ತಾ[ಪ

7

ಕೋರ್ಟ್‌ ಮುಂದಿರುವ ಪ್ರಕರಣಗಳ ಪ್ರಸ್ತಾ[ಪ

Published:
Updated:

ಧಾರವಾಡ: ಮಂಗಳವಾರ ನಗರದಲ್ಲಿ ನಡೆದ ಸಾರ್ವಜನಿಕರ ದೂರಿನ ವಿಚಾರಣೆ ಕಾರ್ಯಕ್ರಮದಲ್ಲಿ ಹಲವು ಸಾರ್ವಜನಿಕರು ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರರಾವ್‌ ಅವರ ಎದುರು ತಮ್ಮ ದೂರುಗಳ ಬಗ್ಗೆ ವಿವರಣೆ ನೀಡಿದರು.ಚರ್ಚೆ ನಡೆಸಲಾದ ಅನೇಕ ಪ್ರಕರಣಗಳು ನ್ಯಾಯಾಲಯದ ಮುಂದೆ ಇದ್ದದ್ದು ಕಂಡು ಬಂತು. ಕೋರ್ಟ್‌ನಲ್ಲಿರುವ ಪ್ರಕರಣಗಳನ್ನು ವಿಚಾರಣೆ ನಡೆಸಲು ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಅವಕಾಶವಿಲ್ಲ. ಆದ್ದರಿಂದ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬೇಕಾದರೆ ಪುನಃ ಪ್ರಕರಣ ದಾಖಲಿಸಿ ಬಗೆಹರಿಸಿಕೊಳ್ಳಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಸೂಚಿಸಿದರು.ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಬಿ.ವಾಲೀಕಾರ ವಿರುದ್ಧ ಸಾಬಣ್ಣ ಹಟ್ಟಿ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತರು, ‘ವಿಶ್ವವಿದ್ಯಾಲಯದ ಕುಲಪತಿಗಳ ವಿಚಾರಣೆ ನಡೆಸುವ ಅರ್ಹತೆ ಲೋಕಾಯುಕ್ತರಿಗೆ ಇರುವುದಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕೋರ್ಟ್‌ ಮೂಲಕವೇ ಬಗೆಹರಿಸಿಕೊಳ್ಳಬೇಕು’ ಎಂದರು.‘ಸರ್ವೋದಯ ಶಿಕ್ಷಣ ಟ್ರಸ್ಟ್‌ ಕುರಿತಂತೆ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಮತ್ತಿತರರ ಮೇಲೆ ಎಂ.ಭರತ್‌ ಅವರು ಸಲ್ಲಿಸಿದ್ದ ಅರ್ಜಿ ಕೂಡ ನ್ಯಾಯಾಲಯದಲ್ಲಿದ್ದು, ಅದನ್ನೂ ಮರು ಅರ್ಜಿ ಸಲ್ಲಿಸಿ ಬಗೆಹರಿಸಿಕೊಳ್ಳಬೇಕು’ ಎಂದು ಸೂಚಿಸಿದರು.ಧಾರವಾಡದ ಪ್ರಭು ಹಿರೇಮಠ ಸಲ್ಲಿಸಿದ್ದ ಸಿಐಟಿಬಿ ಉದ್ಯಾನವನ ಅತಿಕ್ರಮಣ ಕುರಿತ ಅರ್ಜಿ, ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಕೆರೆ ಹೂಳೆತ್ತುವಲ್ಲಿ ನಡೆದಿರುವ ಅವ್ಯವಹಾರ ಕುರಿತಂತೆ ಶೇಖಪ್ಪ ಸಿದ್ದುನವರ ಸಲ್ಲಿಸಿರುವ ಅರ್ಜಿ, ಕೆಐಎಡಿಬಿ ಪರಿಹಾರ ಕುರಿತಂತೆ ಸೂರ್ಯಪ್ರಕಾಶ ಸಿಂದೋಗಿ ಅವರು ಸಲ್ಲಿಸಿರುವ ಅರ್ಜಿ, ಹುಬ್ಬಳ್ಳಿಯ ಪಾಂಜರಪೋಳ ವಿರುದ್ಧ ಶಿವಾನಂದ ಮುತ್ತಳ್ಳಿ ಅವರು ಸಲ್ಲಿರುವ ಅರ್ಜಿ ಸೇರಿದಂತೆ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಅವುಗಳ ವಿಚಾರಣೆ ನಡೆಸುವ ಅಧಿಕಾರ ಲೋಕಾಯುಕ್ತರಿಗೆ ಇರುವುದಿಲ್ಲ. ಅಲ್ಲದೇ, ನೇಮಕಾತಿ ವಿಷಯದಲ್ಲಿ ಲೋಕಾಯುಕ್ತರು ಮಧ್ಯೆ ಪ್ರವೇಶಿಸುವ ಅವಕಾಶ ಇರುವುದಿಲ್ಲ. ಇಂಥ ಪ್ರಕರಣಗಳು ಬಗೆಹರಿಯಬೇಕಾದರೆ ಸೂಕ್ತ ವೇದಿಕೆಯ ಮೊರೆ ಹೋಗಬೇಕು. ಇಲ್ಲವೇ, ಕರ್ನಾಟಕ ಮೇಲ್ಮನವಿ ಪ್ರಾಧಿಕಾರ (ಕೆಎಟಿ) ಅಥವಾ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಸೂಚಿಸಿದರು.ಇಲ್ಲಿಯ ಉಪನಗರ ಠಾಣೆಯಲ್ಲಿ ವಂಚನೆ ಕುರಿತಂತೆ ಗೌಸ್‌ಖಾನ್‌ ನವಲೂರ ಅವರು ಪ್ರಕರಣ ದಾಖಲಿಸಿರುವ ವಿಚಾರಣೆ ನಡೆಸಿದ ಲೋಕಾಯುಕ್ತರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದರು.ನಿಂಗಪ್ಪ ಶಿರಿಯಣ್ಣವರ ತಮ್ಮ ಆಸ್ತಿಯನ್ನು ಬೇರೆಯವರು ತಮ್ಮ ಹೆಸರಿಗೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಲೋಕಾಯುಕ್ತರಿಗೆ ನೀಡಿದ ದೂರಿನ ವಿಚಾರಣೆ ನಡೆಸಿದ ಭಾಸ್ಕರರಾವ್‌, ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು 15 ದಿನಗಳ ಒಳಗಾಗಿ ಸಲ್ಲಿಸುವಂತೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಮೇಘಣ್ಣವರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮಹಾನಗರ ಪೊಲೀಸ್ ಆಯುಕ್ತ ಬಿ.ಎ.ಪದ್ಮನಯನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಲೋಕೇಶಕುಮಾರ, ಪಾಲಿಕೆ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ, ಲೋಕಾಯುಕ್ತ ಡಿಎಸ್‌ಪಿ ಎಂ.ಬಿ.ಮೇಘಣ್ಣವರ ಮತ್ತು ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry