ಭಾನುವಾರ, ನವೆಂಬರ್ 17, 2019
23 °C

ಕೋರ್ಟ್ ಮುಂದೆ ಹಾಜರಾದ ಮುರುಘಾ ಶರಣರು

Published:
Updated:
ಕೋರ್ಟ್ ಮುಂದೆ ಹಾಜರಾದ ಮುರುಘಾ ಶರಣರು

ಚಿತ್ರದುರ್ಗ: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಶನಿವಾರ ನಗರದ ಒಂದನೇ ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಲಯದ ಮುಂದೆ ಹಾಜರಾದರು.ಶಿವಮೂರ್ತಿ ಮುರುಘಾ ಶರಣರು ರಚಿಸಿದ `ಅಭಿವೃದ್ಧಿ ಹಾದಿಗೆ ಮುಳ್ಳಿನ ಹಾಸಿಗೆ' ಕೃತಿ ವಿರುದ್ಧ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಹಾಲಿ ಶಾಸಕ ಎಸ್.ಕೆ. ಬಸವರಾಜನ್ ನ್ಯಾಯಾಲಯದಲ್ಲಿ  6 ತಿಂಗಳ ಹಿಂದೆ ಖಾಸಗಿ ಮೊಕದ್ದಮೆ ದಾಖಲಿಸಿದ್ದರು.ಎಸ್.ಕೆ. ಬಸವರಾಜನ್ ನೀಡಿರುವ ಉಪದ್ರವಗಳು, ತೊಂದರೆಗಳು, ಕಿರುಕುಳಗಳು ಮತ್ತು ಅವುಗಳನ್ನು ಹೇಗೆ ಎದುರಿಸಲಾಯಿತು ಹಾಗೂ ಮುರುಘಾ ಮಠದ ಪ್ರಗತಿಗೆ ಬಸವರಾಜನ್ ಹೇಗೆ ಅಡ್ಡಿಯಾದರು ಎನ್ನುವುದನ್ನು ಶರಣರು ಈ ಕೃತಿಯಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ 500, 501 ಕಲಂ ಅಡಿ ಬಸವರಾಜನ್ ಮೊಕದ್ದಮೆ ದಾಖಲಿಸಿದ್ದರು.ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾರಿ ಮಾಡಿದ ಸಮನ್ಸ್‌ನಂತೆ ಭಕ್ತರು ಹಾಗೂ ಎಸ್‌ಜೆಎಂ ವಿದ್ಯಾಪೀಠದ ನೌಕರರ ಜತೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಧೀಶರ ಮುಂದೆ ಹಾಜರಾದರು. ಜಾಮೀನು ಕೋರಿ ಶರಣರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಏ.22ಕ್ಕೆ ಮುಂದೂಡಿತು.`ಮಠದಲ್ಲಿ ಭಕ್ತರ ಭೇಟಿ, ಸಂಸ್ಥೆಯ ಆಡಳಿತ ಜವಾಬ್ದಾರಿ ಇತ್ಯಾದಿ ಕಾರ್ಯಗಳಿಂದ ತಮಗೆ  ನ್ಯಾಯಾಲಯಕ್ಕೆ ಪದೇ ಪದೇ ಬರಲು ಕಷ್ಟವಾಗುತ್ತದೆ. ಅತ್ಯಗತ್ಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗುತ್ತೇವೆ. ಆದ್ದರಿಂದ ತಮಗೆ ಹಾಜರಾತಿಯಿಂದ ವಿನಾಯ್ತಿ ನೀಡಬೇಕು' ಎಂದು ಕೋರಿ ಶರಣರ ವಕೀಲರು ಅರ್ಜಿ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)