ಕೋರ್ಸ್ ಆಯ್ಕೆ: ಮನಸ್ಸಿನ ಮಾತೇ ನಿರ್ಣಾಯಕ

7

ಕೋರ್ಸ್ ಆಯ್ಕೆ: ಮನಸ್ಸಿನ ಮಾತೇ ನಿರ್ಣಾಯಕ

Published:
Updated:

ಸಿಇಟಿ, `ಕಾಮೆಡ್-ಕೆ~ ಆಕಾಂಕ್ಷಿಗಳಿಗೆ `ಪ್ರಜಾವಾಣಿ~ ಮಾರ್ಗದರ್ಶಕ: ಗುತ್ತಿ ಜಂಬುನಾಥ್ ಬಣ್ಣನೆ

ಕೋರ್ಸ್ ಆಯ್ಕೆ: ಮನಸ್ಸಿನ ಮಾತೇ ನಿರ್ಣಾಯಕ

=====

ದಾವಣಗೆರೆ: `ಪಿಯು ನಂತರದ ಕೋರ್ಸ್ ಆಯ್ಕೆಯಲ್ಲಿ ವಿದ್ಯಾರ್ಥಿಯ ಮನಸ್ಸಿನ ಮಾತೇ ನಿರ್ಣಾಯಕವಾಗಿರಲಿ~ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್ ಸಲಹೆ ನೀಡಿದರು.ನಗರದ ಬಾಪೂಜಿ ಸಭಾಂಗಣದಲ್ಲಿ ಬುಧವಾರ ಸಿಇಟಿ, `ಕಾಮೆಡ್-ಕೆ~ ಆಕಾಂಕ್ಷಿಗಳಿಗೆ `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಬಳಗ ಮತ್ತು ಬೆಂಗಳೂರಿನ ಆಚಾರ್ಯ ತಾಂತ್ರಿಕ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಕೌನ್ಸೆಲಿಂಗ್ ಪೂರ್ವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಪಿಯು ಮುಗಿಸಿದ ನಂತರ ಎಂಜಿನಿಯರಿಂಗ್, ವೈದ್ಯಕೀಯ ಹೀಗೆ ಯಾವ ಕೋರ್ಸ್‌ಗೆ ಹೋಗಬೇಕು ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಇಂಥ ಸಂದರ್ಭದಲ್ಲಿ ಆಯಾ ಕೋರ್ಸ್‌ಗಳ ಮಹತ್ವ ತಿಳಿಸುವ, ಆ ಮೂಲಕ ಸಮರ್ಥ ಕೋರ್ಸ್‌ನ ಆಯ್ಕೆಗೆ ವಿದ್ಯಾರ್ಥಿಗೆ ನೆರವಾಗಲು `ಪ್ರಜಾವಾಣಿ~ ಬಳಗ ನಡೆಸುತ್ತಿರುವ ಈ ಕಾರ್ಯಾಗಾರ ನಿಜಕ್ಕೂ ಮಾದರಿ. ಇದು ವಿದ್ಯಾರ್ಥಿ-ಪೋಷಕರಿಗೆ ಮಾರ್ಗದರ್ಶನ ನೀಡುವ ಕಾರ್ಯಾಗಾರ ಎಂದು ಬಣ್ಣಿಸಿದರು.ವಿದ್ಯಾರ್ಥಿಗಳು ತಮ್ಮ ಆಂತರಿಕ ಸಾಮರ್ಥ್ಯ, ಒಲವಿರುವ ಕೋರ್ಸ್ ಅನ್ನೇ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ವಿಷಯದಲ್ಲಿ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ತಮ್ಮ ಆಸೆ-ಆಕಾಂಕ್ಷೆಗಳ ಪ್ರಭಾವವನ್ನೂ ಮಕ್ಕಳ ಮೇಲೆ ಬೀರಬಾರದು. ಕೋರ್ಸಿನ ಆಯ್ಕೆಯೇ ತಪ್ಪಾದಲ್ಲಿ ಅದಕ್ಕೆ ಜೀವನವಿಡೀ ಬೆಲೆ ತೆರಬೇಕಾದೀತು ಎಂದು ಎಚ್ಚರಿಸಿದರು.ವಿದ್ಯಾರ್ಥಿಗಳೂ ಕೂಡಾ ಒತ್ತಡಕ್ಕೆ ಬಲಿಯಾಗದೇ, ತಮ್ಮ ಮನಸ್ಸಿನ ಮಾತು ಕೇಳಿ, ತಮ್ಮ ಆಯ್ಕೆಯನ್ನು ಪೋಷಕರ ಬಳಿ ಸಮರ್ಥಿಸಿಕೊಳ್ಳಬೇಕು. ಇದರಿಂದ ತಪ್ಪು ಆಯ್ಕೆಯ ಗೊಂದಲ ತಪ್ಪುತ್ತದೆ. ಇಷ್ಟವಿರದ ಕೋರ್ಸ್‌ಗೆ ಬಲವಂತವಾಗಿ ಸೇರಿದಾಗ, ಕಳಪೆ ಗುಣಮಟ್ಟದ ಎಂಜಿನಿಯರ್, ವೈದ್ಯರು ಹೊರಬರುವಂತಾಗುತ್ತದೆ. ಅದು ಸಮಾಜಕ್ಕೂ, ವ್ಯಕ್ತಿಗೂ ಉಪಯೋಗವಾಗಲಾರದು ಎಂದರು.`ತಾಂತ್ರಿಕ ಶಿಕ್ಷಣದಲ್ಲಿನ ಅವಕಾಶ~  ವಿಷಯ ಕುರಿತು ಮಾತನಾಡಿದ  ಬಿಐಇಟಿ  ಕಾಲೇಜಿನ ನಿರ್ದೇಶಕ   ಪ್ರೊ.ವೈ.  ವೃಷಭೇಂದ್ರಪ್ಪ,  `ಎಂಜಿನಿಯರಿಂಗ್ ಕ್ಷೇತ್ರದಲ್ಲಿ  ಸರ್ ಎಂ.  ವಿಶ್ವೇಶ್ವರಯ್ಯ ಅವರು  ಪ್ರಾತಃಸ್ಮರಣೀಯರು. ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂದು 32 ವಿವಿಧ ಬಗೆಯ ಕೋರ್ಸುಗಳಿವೆ. ಜಿಲ್ಲೆಯಲ್ಲಿ 12 ಕೋರ್ಸುಗಳಿವೆ. ವಿದ್ಯಾರ್ಥಿಗಳು ತಮಗೆ ಒಪ್ಪುವ ಕೋರ್ಸ್ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಸಾಧನೆ ಮಾಡಬಹುದು~ ಎಂದರು.ಒಂದು ಕಾಲದಲ್ಲಿ ಕಂಪ್ಯೂಟರ್ ಸೈನ್ಸ್ ಬಹುಬೇಡಿಕೆಯ ಕೋರ್ಸ್ ಆಗಿ ರೂಪುಗೊಂಡಿತು. ಹಾಗೆಂದು ಇತರ ಕೋರ್ಸುಗಳಿಗೆ ಬೆಲೆ ಇಲ್ಲವೆಂದಲ್ಲ. ಕೋರ್ಸ್ ಮುಖ್ಯ ಅಲ್ಲ. ಅದರಿಂದ ವಿದ್ಯಾರ್ಥಿ ಪಡೆಯುವ ಜ್ಞಾನ ಮುಖ್ಯ. ಜ್ಞಾನ ಮತ್ತು ಕೌಶಲದ ಆಧಾರದ ಮೇಲೆಯೇ ಇಂದು ಉದ್ಯೋಗ ಅವಕಾಶಗಳು ದಕ್ಕುತ್ತವೆ. ಮುಂದಿನ 10 ವರ್ಷದಲ್ಲಿ ದೇಶದಲ್ಲಿ 1,500 ಏರ್‌ಪೋರ್ಟ್ ನಿರ್ಮಾಣವಾಗಲಿವೆ ಎಂದು ಈಚೆಗಷ್ಟೇ ನಾಗರಿಕ ವಿಮಾನಯಾನ ಸಚಿವರು ಹೇಳಿದ್ದಾರೆ. ಅಂತೆಯೇ, 6 ಲೇನ್‌ಗಳ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದನ್ನು ಗಮನಿಸಿ ಕೋರ್ಸ್ ಆಯ್ಕೆ ಮಾಡಿಕೊಂಡರೆ ವಿದ್ಯಾರ್ಥಿಗಳಿಗೆ ಲಾಭವಾಗಬಹುದು ಎಂದು ಮಾಹಿತಿ ನೀಡಿದರು.`ವೈದ್ಯಕೀಯ ಶಿಕ್ಷಣದಲ್ಲಿನ ಅವಕಾಶ  ಮತ್ತು ಕಾಮೆಡ್ -ಕೆ~ ಬಗ್ಗೆ  ಮಾಹಿತಿ  ನೀಡಿದ ಬೆಂಗಳೂರಿನ  ಎಂ.ಎಸ್.  ರಾಮಯ್ಯ ಕಾಲೇಜಿನ  ಡಾ.ಎ.ಜಿ.  ಪ್ರತಾಪ್, `ವೈದ್ಯಕೀಯ  ಕೋರ್ಸ್ ತಾಳ್ಮೆ ಬೇಡುವ ಕೋರ್ಸ್.  ಅಷ್ಟೇ ಅಲ್ಲ ರೋಗಿಗಳು ಮತ್ತು ಅವರ ಕುಟುಂಬದೊಂದಿಗೆ ಸೌಹಾರ್ದವಾಗಿ ವರ್ತಿಸಬೇಕಾಗುತ್ತದೆ. ಹಾಗಾಗಿ, ಕೋರ್ಸ್ ಆಯ್ಕೆಯನ್ನು ವಿದ್ಯಾರ್ಥಿಗಳೇ ನಿರ್ಧರಿಸಬೇಕು~ ಎಂದು ಸಲಹೆ ನೀಡಿದರು.ಕಾಮೆಡ್-ಕೆ ಕೌನ್ಸೆಲಿಂಗ್‌ನಲ್ಲಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳು ಮೂಲಸೌಕರ್ಯ ಇರುವ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಅಂತೆಯೇ, ಕೌನ್ಸೆಲಿಂಗ್‌ಗೆ ಬೇಕಾದ ಸಮಗ್ರ ದಾಖಲಾತಿಗಳನ್ನು ಒದಗಿಸಬೇಕು. ಔದ್ಯೋಗಿಕ ಕ್ಷೇತ್ರದಲ್ಲಿನ ಅವಕಾಶಗಳನ್ನು ಗಮನಿಸಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಜಾಣ ವಿದ್ಯಾರ್ಥಿಗಳ ಲಕ್ಷಣ ಎಂದರು.ಸಿಇಟಿ ಸಂಪನ್ಮೂಲ ಅಧಿಕಾರಿಗಳಾದ ನಿರಂಜನ, ಬಡಿಗೇರ್, ಸಿ.ಬಿ. ಹಿರೇಮಠ್, ಕೆ.ಟಿ. ಭಟ್ಟ `ಸಿಇಟಿ~ ಕುರಿತು ಸಮಗ್ರ ಮಾಹಿತಿ ನೀಡಿದರು. ಬೆಂಗಳೂರಿನ ಆಚಾರ್ಯ ತಾಂತ್ರಿಕ ಶಿಕ್ಷಣ ಕಾಲೇಜಿನ ಶಂಕರಲಿಂಗಪ್ಪ ಕಾಲೇಜಿನ ಕುರಿತು ಮಾಹಿತಿ ನೀಡಿದರು. ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದರು.ಪಿಯುನಲ್ಲಿ ದಾವಣಗೆರೆ ಜಿಲ್ಲೆಗೆ ಹೆಚ್ಚು ಅಂಕ ಪಡೆದ ಅಭಿಷೇಕ್ ಎಸ್. ಗೌಡರ್, ಚಿತ್ರದುರ್ಗ ಜಿಲ್ಲೆಗೆ ಹೆಚ್ಚು ಅಂಕ ಪಡೆದ ಅಕ್ಷಯ್‌ಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು.`ಪ್ರಜಾವಾಣಿ~ ದಾವಣಗೆರೆ ಬ್ಯೂರೊ ಮುಖ್ಯಸ್ಥ ಎಂ.ಎಸ್. ರಾಜೇಂದ್ರಕುಮಾರ್, ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಕೆ.ಜಿ. ಲೋಕೇಶ್, ಅಪೂರ್ವ ಗ್ರೂಪ್ ಆಫ್ ಹೋಟೆಲ್ ಮಾಲೀಕ ಅಣಬೇರು ರಾಜಣ್ಣ, ಪತ್ರಿಕಾ ವಿತರಕರಾದ ಕೆ.ಆರ್. ಸಿದ್ದೇಶ್, ಮಾಕನೂರು ವಿಜಯಕುಮಾರ್, ಟಿಪಿಎಂಎಲ್ ಪ್ರೊಡಕ್ಷನ್ ವಿಭಾಗದ ಸಹಾಯಕ ವ್ಯವಸ್ಥಾಪಕ ಟಿ. ಮುರಳೀಧರ ಮತ್ತು `ಪ್ರಜಾವಾಣಿ~ ಬಳಗದ ಸಿಬ್ಬಂದಿ ಹಾಜರಿದ್ದರು.  ಕವಿತಾ ಪ್ರಶಾಂತ್ ಮತ್ತು ಹರ್ಷಿತಾ ಪ್ರಾರ್ಥಿಸಿದರು. `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಹುಬ್ಬಳ್ಳಿ-ದಾವಣಗೆರೆ ವಿಭಾಗದ ಹಿರಿಯ ವ್ಯವಸ್ಥಾಪಕ ಬಿ.ಎ. ರವಿ ಸ್ವಾಗತಿಸಿದರು. ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು. `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್~ ದಾವಣಗೆರೆ ವಿಭಾಗದ ಸಹಾಯಕ ವ್ಯವಸ್ಥಾಪಕ ಎಸ್.ಐ. ಪ್ರಸನ್ನಕುಮಾರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry