ಶನಿವಾರ, ಮೇ 8, 2021
18 °C

ಕೋರ್ ಕಮಿಟಿ ಸಭೆ ಅನಿಶ್ಚಿತ:ಸಂಪುಟ ವಿಸ್ತರಣೆ ವಿಳಂಬ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಪುಟ ವಿಸ್ತರಣೆ ಮತ್ತು ಪಕ್ಷದಲ್ಲಿನ ಗೊಂದಲ ನಿವಾರಣೆ ಕುರಿತು ಚರ್ಚಿಸಲು ಈ ಹಿಂದೆ ನಿಗದಿಯಾಗಿದ್ದಂತೆ ಇದೇ 25 ಅಥವಾ 26ಕ್ಕೆ ಆಡಳಿತಾರೂಢ ಬಿಜೆಪಿಯ ಪ್ರಮುಖರ ಸಭೆ (ಕೋರ್ ಕಮಿಟಿ) ನಡೆಯುವ ಸಾಧ್ಯತೆ ಕಡಿಮೆ. ಇದರಿಂದಾಗಿ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗಲಿದೆ.ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ದೆಹಲಿಯಲ್ಲಿದ್ದು, ರಾಜ್ಯ ಭೇಟಿ ಬಗ್ಗೆ ಬುಧವಾರ ಬೆಳಿಗ್ಗೆ ತಿಳಿಸುವುದಾಗಿ ಹೇಳಿದ್ದಾರೆ.ಪಕ್ಷದ ಮೂಲಗಳ ಪ್ರಕಾರ ಅವರು ಒಂದೆರಡು ದಿನಗಳಲ್ಲಿ ನಗರಕ್ಕೆ ಬರುವುದು ಅನುಮಾನ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರೂ ಮುಂದಿನ ಎರಡು ದಿನಗಳ ಕಾಲ ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲೇ ಇದ್ದಾರೆ. ಹೀಗಾಗಿ ಸಭೆ ನಡೆಯುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ತನಿಖೆಗೆ ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವ ಅಗತ್ಯದ ಬಗ್ಗೆ ಸಿಇಸಿ ಸುಪ್ರೀಂಕೋರ್ಟ್‌ಗೆ ಶಿಫಾರಸು ಮಾಡಿದ ಬೆನ್ನಿಗೇ ಯಡಿಯೂರಪ್ಪ ಸೇರಿದಂತೆ ಇತರ ಮುಖಂಡರು ಶನಿವಾರ ಸಭೆ ಸೇರಿ ಚರ್ಚೆ ನಡೆಸಿದ್ದರು.

 

ಆ ಸಂದರ್ಭದಲ್ಲಿ ಇದೇ 25 ಅಥವಾ 26ರಂದು ಕೋರ್ ಕಮಿಟಿ ಸಭೆ ಸೇರುವ ಬಗ್ಗೆ ತೀರ್ಮಾನಿಸಲಾಗಿತ್ತು. ಸಿಇಸಿ ಶಿಫಾರಸು ಕುರಿತು ಸುಪ್ರೀಂಕೋರ್ಟ್ ಇದೇ 27ರಂದು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಅದರ ಸಾಧಕ- ಬಾಧಕಗಳನ್ನು ನೋಡಿಕೊಂಡು ಪ್ರಮುಖರು ಸಭೆ ಸೇರಲಿದ್ದಾರೆ ಎನ್ನಲಾಗಿದೆ.ಸಂಪುಟ ವಿಸ್ತರಣೆ: `ಒಬ್ಬರಿಂದ 20 ಖಾತೆಗಳ ನಿರ್ವಹಣೆ ಕಷ್ಟ~ ಎಂದು ಸ್ವತಃ ಮುಖ್ಯಮಂತ್ರಿ ಸದಾನಂದ ಗೌಡ ಅವರೇ ಹೇಳಿರುವುದರಿಂದ ಆದಷ್ಟು ಬೇಗ ಸಂಪುಟ ವಿಸ್ತರಣೆ ನಡೆಸುವ ಬಗ್ಗೆ ಪಕ್ಷದ್ಲ್ಲಲಿ ಚರ್ಚೆಗಳು ಆರಂಭವಾಗಿವೆ. ಪ್ರಮುಖರ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮೇ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.