ಕೋಲಾರದಲ್ಲಿ ಕೊರೆಯುವ ಚಳಿ

7

ಕೋಲಾರದಲ್ಲಿ ಕೊರೆಯುವ ಚಳಿ

Published:
Updated:

ಕೋಲಾರ: ಜಿಲ್ಲೆಯ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತಿಂಗಳಾಂತ್ಯಕ್ಕೆ ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಕೊರೆಯುವ ಚಳಿಯನ್ನು ನಗರದ ಜನತೆ ಇನ್ನೂ ಒಂದು ತಿಂಗಳು ಅನುಭವಿಸಲೇಬೇಕಾಗಿದೆ.ಇನ್ನೂ ಒಂದೆರಡು ವಾರದಲ್ಲಿ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯೊಂದು ತನ್ನ ಹವಾಮಾನ ವರದಿಯಲ್ಲಿ ಪ್ರಸ್ತಾಪಿಸಿದೆ. ಸಂಸ್ಥೆ ವರದಿ ನಿಜವಾದರೆ ಜನತೆ ಚಳಿಯ ಮತ್ತಷ್ಟು ತೀವ್ರತೆ ತಡೆದುಕೊಳ್ಳಬೇಕಾಗುತ್ತದೆ.`ಕಳೆದ ವರ್ಷ ಈ ಮಟ್ಟದ ಚಳಿ ಇರಲಿಲ್ಲ ನೋಡಿ...' ಎಂದು ನೆನಪಿಸಿಕೊಳ್ಳುವ ಜನರು, ದೇಹದ ಉಷ್ಣತೆ ಕಾಪಾಡುವ ಬಟ್ಟೆಗಳ ಮೊರೆ ಹೋಗಿದ್ದಾರೆ. ಮಧ್ಯಾಹ್ನವಾದರೂ ಮಫ್ಲರ್, ಸ್ವೆಟರ್ ಬಿಚ್ಚುತ್ತಿಲ್ಲ. ಇದು ಸ್ವೆಟರ್, ಜರ್ಕೀನ್ ಮಾರಾಟಗಾರರಿಗೆ ವರದಾನವಾದರೆ, ಆಲೂಗಡ್ಡೆ ಬೆಳೆಗಾರರಿಗೆ ಮಾತ್ರ ಶಾಪವಾಗಿ ಪರಿಣಿಮಿಸಿದೆ.ತೀವ್ರವಾದ ಚಳಿಯಿಂದಾಗಿ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಕಾಡುತ್ತಿದ್ದು ನಿಯಂತ್ರಣಕ್ಕೆ ಬಾರದಾಗಿದೆ. ಚಳಿ ಹೆಚ್ಚುತ್ತಿರುವುದರಿಂದ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.ನಿರಂತರವಾಗಿ 10 ದಿನಗಳವರೆಗೆ ಉಷ್ಣಾಂಶ 8ರಿಂದ 10 ಡಿಗ್ರಿ ಸೆಲ್ಸಿಯಸ್ ಇದ್ದರೆ ರೋಗದ ಬಾಧೆ ಹೆಚ್ಚಾಗುತ್ತದೆ. ಗಿಡದ ಎಲೆಗಳ ತುದಿ ಕೆಳಗಡೆ ನೀರಿನಿಂದ ತೊಯ್ದ ಮಚ್ಚೆಗಳು ಕಂಡು ಬಂದು ಕ್ರಮೇಣ ಬಿಳಿ ಬೂಸ್ಟ್ ಬೆಳೆಯುತ್ತದೆ. ರೋಗ ತಡೆಗೆ ಇಲಾಖೆ ಈಗಾಗಲೆ ಪರಿಹಾರ ಕ್ರಮ ಸೂಚಿಸಿದೆ. ಪ್ರತಿದಿನ ಸೂರ್ಯನಿಗಾಗಿ ಕಾಯುವುದೇ ರೈತರ ಕಾಯಕವಾಗಿದೆ.

ಈ ಬಾರಿ ಆಲೂಗಡ್ಡೆಗೆ ಚಳಿ ಕಂಟಕವಾಗಿದೆ.ಮಂಗಳವಾರದ ವಾತಾವರಣದಲ್ಲಿನ ತೇವಾಂಶದ ಪ್ರಮಾಣ ಬೆಳಿಗ್ಗೆ ಶೇ 85ರಷ್ಟು ಇದ್ದರೆ, ಸಂಜೆಯ ಹೊತ್ತಿಗೆ ಶೇ 65ಕ್ಕೆ ಇಳಿದಿತ್ತು. ತಾಪಮಾನ ಗರಿಷ್ಠ 26, ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಇತ್ತು.

ಬುಧವಾರ ಗರಿಷ್ಠ 27, ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ಆಗಲಿದೆ. 21 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿ, ಕಡಿಮೆಯಾದ ಹಗಲಿನ ಅವಧಿಯು ಚಳಿಯ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದೆ. ಇಡೀ ತಿಂಗಳು ಹಗಲಿನ ಅವಧಿ ಈಗ 11 ಗಂಟೆ 34 ನಿಮಿಷ. ಕತ್ತಲಿನ ಅವಧಿ 13 ಗಂಟೆ 26 ನಿಮಿಷ.ಬೆಳಿಗ್ಗೆ 9ರ ವರೆಗೂ ಇಬ್ಬನಿ ಇರುತ್ತದೆ. ನಂತರ ಆಗೊಮ್ಮೆ, ಈಗೊಮ್ಮೆ ಸೂರ್ಯ ಇಣಕುವುದನ್ನು ಬಿಟ್ಟರೆ ಬಹುತೇಕ ಮೋಡ ಕವಿದ ವಾತಾವರಣ ಇರುತ್ತದೆ. ಈ ವಾತಾವರಣ ಜನವರಿ ವರೆಗೂ ಮುಂದುವರಿಯಲಿದೆ ಎನ್ನುತ್ತವೆ ಹವಾಮಾನ ಇಲಾಖೆ ಮೂಲಗಳು.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ 30ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೆ, ಚಳಿಗಾಲದಲ್ಲಿ 25ರಿಂದ 30 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಈ ವರ್ಷ ಇಷ್ಟೊಂದು ಏರುಪೇರಾಗಿರುವುದು.

ಕಳೆದ ವರ್ಷದ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಚಳಿ ಹೆಚ್ಚು ಎನ್ನುತ್ತಾರೆ ಜನತೆ.ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರು ಸೇವಿಸುತ್ತಿದ್ದೇನೆ. ಉಣ್ಣೆ ಬಟ್ಟೆ ಧರಿಸಿದ್ದೇನೆ ಎಂದು `ಪ್ರಜಾವಾಣಿ' ಜತೆ ತಮ್ಮ ಅನುಭವ ಹಂಚಿಕೊಂಡರು ಕೆಂಚಪ್ಪ.ಮುಖ್ಯಾಂಶಗಳು

ಆಲೂಗಡ್ಡೆಗೆ ಕಂಟಕವಾದ   ಚಳಿ

ತಿಂಗಳಾಂತ್ಯಕ್ಕೆ 7 ಡಿಗ್ರಿ   ಸೆಲ್ಸಿಯಸ್ ನಿರೀಕ್ಷೆ

ಕಡಿಮೆಯಾದ ಹಗಲಿನ   ಅವಧಿ

21 ಕಿಲೋಮೀಟರ್   ವೇಗದಲ್ಲಿ ಗಾಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry