ಮಂಗಳವಾರ, ಅಕ್ಟೋಬರ್ 22, 2019
26 °C

ಕೋಲಾರ ಚಿನ್ನದ ಗಣಿ ಆರಂಭಕ್ಕೆ ಒತ್ತಾಯ

Published:
Updated:

ಚಿಕ್ಕಬಳ್ಳಾಪುರ: ನಷ್ಟದ ನೆಪ ನೀಡಿ ಮುಚ್ಚಲಾಗಿರುವ ಕೋಲಾರ ಚಿನ್ನದ ಗಣಿಯನ್ನು ಕೇಂದ್ರ ಸರ್ಕಾರ ಪುನರಾರಂಭಿಸಬೇಕು. ಸಹಸ್ರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದು, ಅವರಿಗೆ ಪರಿಹಾರವನ್ನು ನೀಡಬೇಕು. ಚಿನ್ನದ ಗಣಿ ಪುನರಾಂಭಿಸುವ ಮೂಲಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಸಿಪಿಎಂ 20ನೇ ರಾಜ್ಯ ಸಮ್ಮೇಳನ ಒತ್ತಾಯಿಸಿದೆ.ನಗರದಲ್ಲಿ ಬುಧವಾರ ಕೊನೆಗೊಂಡ ಸಿಪಿಎಂ 20ನೇ ರಾಜ್ಯ ಸಮ್ಮೇಳನವು ಈ ನಿರ್ಣಯ ಕೈಗೊಳ್ಳುವುದರ ಜೊತೆಗೆ ಕೋಮುವಾದವನ್ನು ಹಿಮ್ಮೆಟ್ಟಿಸಲು ಹೋರಾಟ ಕೈಗೊಳ್ಳಲು ಮತ್ತು ಬೆಲೆ ಏರಿಕೆಯನ್ನು ವಿರೋಧಿಸಿ ಫೆಬ್ರುವರಿ 28ರಂದು ದೇಶವ್ಯಾಪಿ ಮುಷ್ಕರ ನಡೆಸಲು ತೀರ್ಮಾನಿಸಿದೆ.`ಸುಮಾರು 25 ವರ್ಷಗಳಿಂದ ಕೋಲಾರ ಚಿನ್ನದ ಗಣಿಯನ್ನು ಮುಚ್ಚಲ್ಪಟ್ಟಿದ್ದು, ಉದ್ಯೋಗ ಕಳೆದುಕೊಂಡಿರುವ ಕಾರ್ಮಿಕರಿಗೆ ಶೇ 50ರಷ್ಟು ಮಾತ್ರವೇ ಪರಿಹಾರ ನೀಡಲಾಗಿದೆ. ನ್ಯಾಯವಾಗಿ ಸಿಗಬೇಕಾದ ಪರಿಹಾರವು ಕೂಡ ಬಹುತೇಕ ಮಂದಿಗೆ ದೊರೆತಿಲ್ಲ.

 

ಚಿನ್ನದ ಗಣಿಯನ್ನು ಪುನಾರಂಭಿಸುವ ಬಗ್ಗೆ ನ್ಯಾಯಾಲಯವು ಸೂಚನೆ ನೀಡಿದೆಯಾದರೂ ಈವರೆಗೆ ಕ್ರಮ ಕೈಗೊಳ್ಳಲಾಗಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಆಸಕ್ತಿ ತೋರಿ ಚಿನ್ನದ ಗಣಿಯನ್ನು ಪುನರಾರಂಭಿಸಬೇಕು~ ಎಂದು ಸಮ್ಮೇಳನ ಆಗ್ರಹಿಸಿದೆ.ಕೋಲಾರ ಚಿನ್ನದ ಗಣಿ ಕುರಿತ ವಿಷಯವನ್ನು ಮಂಡಿಸಿದ ಗಾಂಧಿನಗರ ನಾರಾಯಣಸ್ವಾಮಿ, `ಕಾರ್ಮಿಕರ ಜೀವನದ ಹಿತದೃಷ್ಟಿಯಿಂದ ಚಿನ್ನದ ಗಣಿ ಪುನರಾಂಭಿಸಬೇಕು ಎಂದು ಸಿಐಟಿಯು ಸಂಘಟನೆಯು ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಚಿನ್ನದ ಗಣಿಯನ್ನು ಪುನರಾರಂಭಿಸಬೇಕು ಎಂದು 2010ರ ಫೆಬ್ರುವರಿಯಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಚಿನ್ನದ ಗಣಿ ಪುನರಾರಂಭಕ್ಕೆ ಒತ್ತಾಯಿಸಿ ಎರಡು ಲಕ್ಷ ಜನರಿಂದ ಸಹಿ ಸಂಗ್ರಹಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು~ ಎಂದರು.`ಕೋಲಾರ ಜಿಲ್ಲೆಯಲ್ಲಿ ಚಿನ್ನದ ಗಣಿ ಮತ್ತು ಬಿಇಎಂಎಲ್ ಕಾರ್ಖಾನೆ ಹೊರತುಪಡಿಸಿದರೆ ಬೇರೆ ಯಾವುದೆ ದೊಡ್ಡ ಕಾರ್ಖಾನೆಯಿಲ್ಲ. ಜಿಲ್ಲೆಯ ಕೃಷಿಕ್ಷೇತ್ರ ತೀವ್ರ ಬಿಕ್ಕಟ್ಟಿನಲ್ಲಿರುವ ಕಾರಣ ಜಿಲ್ಲೆಯ ಜನರು ವಲಸೆ ಹೋಗುತ್ತಿದ್ದಾರೆ.ಉದ್ಯೋಗಾವಕಾಶ ವಿಲ್ಲದೇ ಬಹುತೇಕ ಮಂದಿ ಬೆಂಗಳೂರು ಮುಂತಾದ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಚಿನ್ನದ ಗಣಿಯನ್ನು ಖಾಸಗಿಯವರಿಗೆ ಹಸ್ತಾಂತರ ಮಾಡದೇ ಹೈಕೋರ್ಟ್ ತೀರ್ಪಿನಂತೆ ಕೇಂದ್ರ ಸರ್ಕಾರವೇ ನಡೆಸಬೇಕು~ ಎಂದು ಅವರು ಹೇಳಿದರು.`ಫ್ಯಾಸಿಸ್ಟ್ ಮಾದರಿಯಲ್ಲಿ ಹಿಂದುತ್ವದ ಆಧಾರದಲ್ಲಿ ಜನತೆಯನ್ನು ವಿಭಜಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ತೀವ್ರ ಸ್ವರೂಪದಲ್ಲಿ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಕೋಮುವಾದಿ ಶಕ್ತಿಗಳು ಬೆಳೆಯದಂತೆ ತಡೆಯಲು ಪ್ರಗತಿಪರ, ಜಾತ್ಯತೀತ ಶಕ್ತಿಗಳು ತೀವ್ರ ಪ್ರತಿರೋಧ ಒಡ್ಡಬೇಕು~ ಎಂದು ಅವರು ತಿಳಿಸಿದರು.`2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಮತ್ತು 2009ರಲ್ಲಿ ಲೋಕಸಭಾ ಚುನಾವಣೆಗೆ ಮೊದಲು ಸಂಘಪರಿವಾರವು ವ್ಯಾಪಕ ಕೋಮು ಗಲಭೆ ನಡೆಸಿತು. ಕರ್ನಾಟಕವನ್ನು ಮೋದಿಯ ಗುಜರಾತ್‌ವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ.ಜನರ ಗಮನವನ್ನು ಬೇರೆಡೆ ಸೆಳೆಯಲು ಮತ್ತು ಕೋಮುವಾದಿ ವಿಭಜನೆಯ ಮೂಲಕ ರಾಜಕೀಯ ಬಲ ಮರು ಕ್ರೋಢೀಕರಿಸಲು ಯತ್ನಿಸಲಾಗುತ್ತಿದೆ. ಈ ಎಲ್ಲದರ ಹಿಂದೆ ಆರ್‌ಎಸ್‌ಎಸ್, ಬಜರಂಗದಳ, ವಿಶ್ವಹಿಂದೂ ಪರಿಷತ್ ಮುಂತಾದ ಸಂಘಪರಿವಾರದ ಸಂಘಟನೆಗಳು ಭಾಗಿಯಾಗಿವೆ. ಈ ಎಲ್ಲದಕ್ಕೂ ಕಡಿವಾಣ ಹಾಕಬೇಕಿದೆ~ ಎಂದು ಅವರು ತಿಳಿಸಿದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)