ಕೋಲಾರ ನಗರಸಭೆಗೆ ಉಳಿತಾಯ ಬಜೆಟ್

7

ಕೋಲಾರ ನಗರಸಭೆಗೆ ಉಳಿತಾಯ ಬಜೆಟ್

Published:
Updated:

ಕೋಲಾರ: ನಗರಸಭೆಯ ಪ್ರಸಕ್ತ ಸಾಲಿನಲ್ಲಿ 27,35,353 ರೂಪಾಯಿ ಉಳಿತಾಯ ಆಯವ್ಯಯವನ್ನು ಬುಧವಾರ ನಡೆದ ಸಭೆಯಲ್ಲಿ ಮಂಡಿಸಲಾಯಿತು.ನಗರಸಭೆಯ ಒಟ್ಟು ನಿರೀಕ್ಷಿತ ಆದಾಯ 88,80,01,566 ರೂಪಾಯಿಗಳಾಗಿದ್ದು, ಖರ್ಚು ಸುಮಾರು 88,52,66,213 ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಆಯವ್ಯಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಚರ್ಚೆಗೆ ಒಳಗಾಗದೆ ಸದಸ್ಯರ ಸಮ್ಮತಿ ಪಡೆಯಲಾಯಿತು.ಈ ಮುನ್ನ ನಡೆದ ಸಭೆ ಕಲಾಪದಲ್ಲಿ ನಗರದಲ್ಲಿ ಮೂಲ ಸೌಕರ್ಯ ಕೊರತೆ ಹಾಗೂ ನಗರಸಭೆ ಸಿಬ್ಬಂದಿ ಅಸಹಕಾರದ ಬಗ್ಗೆ ಬಹುತೇಕ ಸದಸ್ಯರು ಆರೋಪಿಸಿದರು.

 

ನಗರದ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಇದೆ. ರಾತ್ರಿ ಹೊತ್ತು ಕತ್ತಲಲ್ಲಿ ಜನ ನಡೆಯಬೇಕಾಗಿದೆ. ಮೂಲ ಸೌಕರ್ಯ ಒದಗಿಸಲು ಕಳೆದ ತಿಂಗಳು ವಿಶೇಷ ಸಭೆ ಕರೆದು ನಿರ್ಣಯ ಅಂಗೀಕರಿಸಲಾಗಿತ್ತು. ಇದುವರೆವಿಗೂ ಯಾವುದೇ ಪ್ರಗತಿಯಾಗಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಸಚಿವ ವರ್ತೂರು ಪ್ರಕಾಶ್ ಈ ಸಂದರ್ಭ ಮಾತನಾಡಿ, ನಾಲ್ಕೈದು ದಿನದಲ್ಲಿ ಇಪ್ಪತ್ತು ವಾರ್ಡುಗಳಿಗೆ ನೀರು ಸರಬರಾಜು ಮಾಡಲಾಗುವುದು. ಉಳಿದ ವಾರ್ಡುಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ತಿಂಗಳೊಳಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಸಚಿವರ ಅಣತಿಯಂತೆ ನಗರಸಭೆ ಸದಸ್ಯರ ಗಮನಕ್ಕೆ ಬಾರದೆ ವಾರ್ಡುಗಳಲ್ಲಿ ಕೊಳವೆಬಾವಿ ಕೊರೆಯಲಾಗುತ್ತಿದೆ ಎಂದು ಹಲವು ಸದಸ್ಯರು ಸಚಿವರ ಮೇಲೆ ಆರೋಪ ಮಾಡಿದರು. ಸದಸ್ಯರ ಮಾತನ್ನು ಪುಷ್ಟೀಕರಿಸಿದ ಅಧ್ಯಕ್ಷೆ ನಾಜಿಯ, ತಮ್ಮ ವಾರ್ಡಿನಲ್ಲಿ ಸಹ ಕೊರೆಯಲಾದ ಕೊಳವೆಬಾವಿ ನನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವರೊಡನೆ ವಾಗ್ವಾದಕ್ಕೆ ಇಳಿದರು. ಈ ಬಾರಿ ತಪ್ಪಾಗಿದೆ. ಮುಂದೆ ಈ ರೀತಿ ಆಗುವುದಿಲ್ಲ ಎಂದು ವರ್ತೂರು ಭರವಸೆ ನೀಡಿದರು.ನೀರಿನ ಸಮಸ್ಯೆ ನೀಗಲು ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದೆ. ಪಕ್ಷ ಭೇದ ಮರೆತು ಎಲ್ಲ ವಾರ್ಡುಗಳಲ್ಲಿ ಕೊಳವೆಬಾವಿ ಕೊರೆಯಲಾಗುವುದು. ಸದಸ್ಯರ ಉಪಸ್ಥಿತಿಯಲ್ಲಿಯೇ ಕಾಮಗಾರಿ ನಡೆಸಲು ಸಚಿವರು ಸೂಚನೆ ನೀಡಿದರು. ಜಿಲ್ಲೆಯ ಹಲವಾರು ಪುರಸಭೆಗಳು ಸಕ್ಕಿಂಗ್ ಯಂತ್ರಗಳನ್ನು ಈಗಾಗಲೇ ಪಡೆದುಕೊಂಡಿವೆ. ಆದರೆ ನಗರಸಭೆ ಮಾತ್ರ ಈ ದಿಸೆಯಲ್ಲಿ ವಿಫಲವಾಗಿದೆ. ಇಷ್ಟು ದಿನ ಜಿಲ್ಲಾಡಳಿತ ಚುರುಕಾಗಿರಲಿಲ್ಲ. ಹೊಸದಾಗಿ ಬರುವ ಜಿಲ್ಲಾಧಿಕಾರಿ ಎಲ್ಲ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.ನಗರದ ರೆವಿನ್ಯೂ ಜಾಗದಲ್ಲಿ ಕಟ್ಟಲಾಗಿರುವ ಕಟ್ಟಡಗಳಿಗೆ ಅಭಿವೃದ್ಧಿ ಶುಲ್ಕ ಪಡೆದು ಅವುಗಳಿಗೆ ಖಾತೆ ಮಾಡಲು ಸಭೆ ಒಪ್ಪಿಗೆ ನೀಡಿತು. ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕರ್ತವ್ಯಲೋಪ ಮಾಡುತ್ತಿದ್ದಾರೆ. ಅವರಿಗೆ ನೀಡಲಾಗಿದ್ದ ಮೌಖಿಕ ಸೂಚನೆ ಪಾಲಿಸದ ಕಾರಣ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಆಯುಕ್ತೆ ಶಾಲಿನಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry