ಕೋಲಾಹಲ: ಮಸೂದೆ ಮಂಡನೆ ಮುಂದೂಡಿಕೆ

7

ಕೋಲಾಹಲ: ಮಸೂದೆ ಮಂಡನೆ ಮುಂದೂಡಿಕೆ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಜಾನುವಾರು ಹತ್ಯೆ ನಿಷೇಧಕ್ಕೆ ಸಂಬಂಧಿಸಿದ `ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ (ತಿದ್ದುಪಡಿ) ಮಸೂದೆ (2012)' ಮಂಡನೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ, ಆ ಮಸೂದೆಯನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯವಾಗಲಿಲ್ಲ. ಇದು ಪ್ರತಿಪಕ್ಷ ಮತ್ತು ಆಡಳಿತಾರೂಢ ಬಿಜೆಪಿ ಸದಸ್ಯರ ನಡುವೆ ಕೋಲಾಹಲ, ಗದ್ದಲಕ್ಕೆ ಕಾರಣವಾಯಿತು.



ಪಶು ಸಂಗೋಪನಾ ಸಚಿವ ರೇವು ನಾಯಕ ಬೆಳಮಗಿ ಅವರು ಮಸೂದೆ ಮಂಡನೆಗೆ ಎದ್ದು ನಿಂತ ತಕ್ಷಣ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಗದ್ದಲ ಎಬ್ಬಿಸಿದರು. `ಇದು ಜನವಿರೋಧಿ ಮಸೂದೆ. ಸದನದಲ್ಲಿ ಮಂಡಿಸಬಾರದು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಪಟ್ಟುಹಿಡಿದರು. ಇದಕ್ಕೆ ಪಕ್ಷೇತರ ಸದಸ್ಯರು ಸೇರಿದಂತೆ ಎರಡೂ ಪಕ್ಷಗಳ ಸದಸ್ಯರು ಒಟ್ಟಾಗಿ ಬೆಂಬಲ ನೀಡಿದರು.



`ಯಾವುದೋ ಒಂದು ಸಮುದಾಯವನ್ನು ಗಮನದಲ್ಲಿ ಇಟ್ಟುಕೊಂಡು ಈ ಮಸೂದೆ ರೂಪಿಸಲಾಗಿದೆ. ಈ ಹಿಂದೆ ನಮ್ಮೆಲ್ಲರ ವಿರೋಧದ ನಡುವೆಯೇ ಈ ಮಸೂದೆಯನ್ನು ಅಂಗೀಕರಿಸಿ, ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅದು ಇನ್ನೂ ರಾಷ್ಟ್ರಪತಿಗಳ ಮುಂದೆ ಇದೆ. ಅದೇ ಮಸೂದೆಯನ್ನು ಪುನಃ ಬೇರೆ ರೂಪದಲ್ಲಿ ಮಂಡಿಸುತ್ತಿರುವುದು ಸರಿಯಲ್ಲ' ಎಂದು ಸಿದ್ದರಾಮಯ್ಯ ಆಕ್ಷೇಪ ಎತ್ತಿದರು.



ಈ ವಿಷಯ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದಕ್ಕೆ ದಾರಿ ತೆಗೆಯಿತು. `ಈ ಮಸೂದೆಯನ್ನು `ಗೋ ಸಮುದಾಯ'ವನ್ನು ಗಮನದಲ್ಲಿ ಇಟ್ಟುಕೊಂಡು ತರಲಾಗಿದೆ. ಇದರಲ್ಲಿ ದುರುದ್ದೇಶ ಏನೂ ಇಲ್ಲ. ಸಂವಿಧಾನದಲ್ಲೇ ಗೋಹತ್ಯೆ ನಿಷೇಧಕ್ಕೆ ಅವಕಾಶ ಇದೆ. ಅದರ ಆಧಾರದ ಮೇಲೆ ಕೆಲವು ತಿದ್ದುಪಡಿಗಳನ್ನು ತರಲಾಗಿದೆ. ಇದರ ಮಂಡನೆಗೆ ಅವಕಾಶ ನೀಡಿ' ಎಂದು ಕಾನೂನು ಸಚಿವ ಎಸ್.ಸುರೇಶಕುಮಾರ್ ಅವರು ಪ್ರತಿಪಕ್ಷಗಳ ಮುಖಂಡರಲ್ಲಿ ಮನವಿ ಮಾಡಿದರು.



ಇದಕ್ಕೆ ಪ್ರತಿಪಕ್ಷಗಳ ಸದಸ್ಯರು ಅವಕಾಶ ನೀಡಲಿಲ್ಲ. ಎಲ್ಲರೂ ಎದ್ದುನಿಂತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಗದ್ದಲ, ಕೋಲಾಹಲದ ನಡುವೆಯೇ ಸಚಿವ ಬೆಳಮಗಿ ಅವರು ಮಸೂದೆ ಮಂಡಿಸಲು ಮುಂದಾದರು. ಆಗ ಪ್ರತಿಪಕ್ಷಗಳ ಸದಸ್ಯರು ಮಸೂದೆಯ ಪ್ರತಿಯನ್ನು ಹರಿದು ಬಿಸಾಡಿದರು. ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ತೆರಳಿ ಧರಣಿ ನಡೆಸಿದರು.



ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸದನ ಪ್ರವೇಶಿಸಿದರು. ಅವರು ಕೂಡ ಪ್ರತಿಪಕ್ಷಗಳ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು. `ವೋಟ್ ಬ್ಯಾಂಕ್ ರಾಜಕಾರಣ ಸಲುವಾಗಿ ಈ ಮಸೂದೆಯನ್ನು ವಿರೋಧಿಸಲಾಗುತ್ತಿದೆ ಎಂದು ಟೀಕಿಸಿದರು. ಮಹಾತ್ಮ ಗಾಂಧಿ, ನೆಹರೂ ಸೇರಿದಂತೆ ಎಲ್ಲರೂ ಗೋಹತ್ಯೆ ನಿಷೇಧದ ಪರ ಇದ್ದರು. ನೀವೆಲ್ಲ ಅದರ ವಿರುದ್ಧ ಇದ್ದೀರಿ. ನಾವೇನು ಪಾಕಿಸ್ತಾನದಲ್ಲಿ ಇದ್ದೇವೆಯೇ? ಮಸೂದೆಯನ್ನು ಮಂಡಿಸುತ್ತೇವೆ' ಎಂದು ಸವಾಲು ಹಾಕಿದರು.



ಮಸೂದೆ ಮಂಡನೆ ಮತ್ತು ಅಂಗೀಕಾರಕ್ಕೆ ಅವಕಾಶ ನೀಡುವುದಿಲ್ಲ. ಎಂತಹದ್ದೇ ಪರಿಸ್ಥಿತಿ ಬಂದರೂ ಆ ಮಸೂದೆಯನ್ನು ಮಂಡಿಸಬಾರದು ಎಂದು ಸಿದ್ದರಾಮಯ್ಯ ಆಗ್ರಹಪಡಿಸಿದರು. ಒಂದು ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಮಸೂದೆ ಪರ ಎದ್ದು ನಿಂತು ಘೋಷಣೆ ಕೂಗುತ್ತಿದ್ದಾಗ, ಸಿದ್ದರಾಮಯ್ಯ ಅವರು ಆ ಎಲ್ಲ ಸದಸ್ಯರನ್ನು ಉದ್ದೇಶಿಸಿ `ನೀವೆಲ್ಲ ಕೆಜೆಪಿ ಜತೆ ಗುರುತಿಸಿಕೊಂಡಿದ್ದು, ಮುಂದಿನ ಬಾರಿ ಚುನಾವಣೆಗೆ ಹೋದರೆ ಅಲ್ಪಸಂಖ್ಯಾತರ ಮತ ಬರುವುದಿಲ್ಲ. ಹೀಗಾಗಿ ಮಸೂದೆಗೆ ಬೆಂಬಲಿಸಬೇಡಿ' ಎಂದು ಮನವಿ ಮಾಡಿದರು.



ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, `ಮಸೂದೆ ಮಂಡನೆಯನ್ನು ವಿರೋಧಿಸುವುದು ಬೇಡ. ಮಂಡನೆ ನಂತರ ಅದರ ಬಗ್ಗೆ ಸಮಗ್ರವಾಗಿ ಚರ್ಚೆ ಆಗಲಿ. ಆ ಸಂದರ್ಭದಲ್ಲಿ ಬೇಕಿದ್ದರೆ ತಮ್ಮ ವಿರೋಧವನ್ನು ದಾಖಲು ಮಾಡಬಹುದು' ಎಂದು ಸಲಹೆ ಮಾಡಿದರು. ಇದನ್ನು ಪ್ರತಿಪಕ್ಷಗಳ ಸದಸ್ಯರು ಒಪ್ಪಲಿಲ್ಲ.



`ಆರ್‌ಎಸ್‌ಎಸ್‌ನ ಕಾರ್ಯಸೂಚಿಯನ್ನು ಈ ಮಸೂದೆ ಮೂಲಕ ಜಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ' ಎಂದು ಸಿದ್ದರಾಮಯ್ಯ ಮತ್ತು ಜಯಚಂದ್ರ ಅವರು ಸರ್ಕಾರದ ವಿರುದ್ಧ ಟೀಕಾಸ್ತ್ರ ಬಿಟ್ಟರು. ಸಚಿವ ಸುರೇಶಕುಮಾರ್ ಮಧ್ಯಪ್ರವೇಶಿಸಿ, `ಇದು ಆರ್‌ಎಸ್‌ಎಸ್ ಕಾರ್ಯಸೂಚಿ ಮತ್ತು ಇಟಾಲಿಯನ್ ಕಾರ್ಯಸೂಚಿಗಳ ನಡುವಿನ ಗುದ್ದಾಟ' ಎಂದು ವ್ಯಂಗ್ಯವಾಡಿದರು.



ಹೀಗೆ ವಾದ ವಿವಾದ ನಡೆಯುತ್ತಿದ್ದಾಗ ಕಾಂಗ್ರೆಸ್‌ನ ಡಾ.ಶರಣ ಪ್ರಕಾಶ್ ಪಾಟೀಲ ಅವರು ಮಸೂದೆಯಲ್ಲಿನ ದೋಷವನ್ನು ಎತ್ತಿ ಹಿಡಿದರು. `ಮಸೂದೆಯ ಕನ್ನಡ ಪ್ರತಿಯಲ್ಲಿ `2012' ಬದಲಿಗೆ `2011' ಎಂದು ಮುದ್ರಿಸಲಾಗಿದೆ. ಹೀಗೇ ಅದನ್ನು ಸದನದಲ್ಲಿ ಮಂಡಿಸಿದರೆ ತಪ್ಪಾಗುತ್ತದೆ' ಎಂದರು. ಇದನ್ನು ಗಮನಿಸಿದ ಸ್ಪೀಕರ್ ಬೋಪಯ್ಯ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.



`ತಪ್ಪಾಗಿ ಮಸೂದೆ ಮುದ್ರಿಸಿದ್ದು ಏಕೆ' ಎಂದು ಆಕ್ಷೇಪ ತೆಗೆದರು. ಎಷ್ಟೇ ಪ್ರಯತ್ನಿಸಿದರೂ ಮಸೂದೆ ಮಂಡನೆಗೆ ಅವಕಾಶವಾಗಲಿಲ್ಲ. ಮಸೂದೆಯನ್ನು ಸರ್ಕಾರ ಗುರುವಾರ ಪುನಃ ಮಂಡಿಸಲು ಯತ್ನಿಸಲಿದೆ ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry