ಕೋಲಿ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಿ

7

ಕೋಲಿ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಿ

Published:
Updated:

ಯಾದಗಿರಿ: ಕೋಳಿ ಡೋರ, ಟೋಕರಿ ಕೋಲಿ ಜನಾಂಗದ ಪರ್ಯಾಯ ಪದಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲು ಕೈಕೊಂಡ ಕ್ರಮವನ್ನು ತೀವ್ರಗೊಳಿಸುವಂತೆ ಒತ್ತಾಯಿಸಿ ಶಾಸಕ ಬಾಬುರಾವ ಚಿಂಚನಸೂರ ನೇತೃತ್ವದಲ್ಲಿ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಕೋಳಿ ಡೋರ, ಟೋಕರಿ ಕೋಲಿ ಜಾತಿಗಳು ಭಾರತ ಸಂವಿಧಾನದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿವೆ. ಇದೇ ಜನಾಂಗವನ್ನು ಸ್ಥಳೀಯವಾಗಿ ಅಂಬಿಗ, ಕಬ್ಬಲಿಗ, ತಳವಾರ, ಕೋಳಿ, ಬೆಸ್ತ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದ್ದು, ಈ ಜಾತಿಗಳ ಹೆಸರು ಪ್ರವರ್ಗ-1ರಲ್ಲಿ ಉಳಿದುಕೊಂಡಿದೆ ಎಂದು ತಿಳಿಸಿದರು.ಹಿಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರ ನೇತೃತ್ವದ ಸಚಿವ ಸಂಪುಟದಲ್ಲಿ ಶಿಫಾರಸ್ಸು ಮಾಡಿ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಸರ್ಕಾರದ ಸಚಿವಾಲಯದ ವಲಯದಲ್ಲಿ ಪ್ರಸ್ತಾವನೆಯನ್ನು ಬಿಟ್ಟು ಹೋದ ಪರ್ಯಾಯ ಪದಗಳ ಸೇರ್ಪಡೆಗಾಗಿ ಎಂದು ಮೇಲೋಲೆಯಲ್ಲಿ ಬರೆಯುವ ಬದಲಾಗಿ ಬರೀ ಸೇರ್ಪಡೆ ಎಂದು ಬರೆದು ಕಳುಹಿಸಲಾಗಿತ್ತು.ಈ ರೀತಿ ಮಾಡಿದ್ದರಿಂದ ಹೊಸದಾಗಿ ಕೆಲ ಜಾತಿಗಳ ಸೇರ್ಪಡೆಗಾಗಿ ಬಂದ ಪ್ರಸ್ತಾವನೆ ಎಂಬ ಅರ್ಥದಲ್ಲಿ ಪರಿಗಣಿಸಿದ ಕೇಂದ್ರ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ವರದಿಗಾಗಿ ಹಿಂತಿರುಗಿ ಕಳುಹಿಸಿತು. ಕರ್ನಾಟಕ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ಪ್ರಸ್ತಾವನೆಯನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಒಪ್ಪಿಸಿತು.ಹಂಪಿ ಕನ್ನಡ ವಿಶ್ವವಿದ್ಯಾಲಯ ತಜ್ಞರ ತಂಡ ರಚಿಸಿ ವಿಶೇಷ ಅಧ್ಯಯನ ಮಾಡಿ, ಐತಿಹಾಸಿಕ ಸಾಂಸ್ಕೃತಿಕ ನೆಲೆಗಳನ್ನು ಅಭ್ಯಸಿಸಿ, ಕ್ಷೇತ್ರ ಅಧ್ಯಯನ ಕೈಕೊಂಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಈ ವರದಿಯನ್ನು ಬುಡಕಟ್ಟು ಸಂಶೋಧನಾ ಕೇಂದ್ರಕ್ಕೆ ಒಪ್ಪಿಸಿದ್ದು, ಅವರು ವರದಿಯ ಇಂಗ್ಲಿಷ್ ಭಾಷಾಂತರದ ಜೊತೆಗೆ ಇತರೆ ವಿಶ್ವವಿದ್ಯಾಲಯಗಳ ಅಭಿಪ್ರಾಯ ಪಡೆದುಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ವಿವರಿಸಿದರು.ಕೇಂದ್ರ ಸರ್ಕಾರದಿಂದ ಪ್ರಸ್ತಾವನೆ ಹಿಂತಿರುಗಿ ಬಂದು ಈಗಾಗಲೇ 15 ವರ್ಷ ಕಳೆದಿದ್ದು, ಇಷ್ಟೊಂದು ದೀರ್ಘ ಸಮಯದಿಂದ ನಮ್ಮ ಸಮಾಜದ ಸಾವಿರಾರು ವಿದ್ಯಾರ್ಥಿಗಳು ಸಂವಿಧಾನದಿಂದ ದೊರಕಬಹುದಾದ ಸವಲತ್ತಿನಿಂದ ವಂಚಿತರಾಗಿದ್ದಾರೆ. ಈಗಾಗಲೇ ವಿಳಂಬವಾಗಿದ್ದು, ಬುಡಕಟ್ಟು ಸಂಶೋಧನಾ ಕೇಂದ್ರದ ವರದಿಯನ್ನು ತರಿಸಿಕೊಂಡು ಕೋಳಿ ಡೋರ್ ಟೋಕರಿ ಕೋಳಿ ಪರಿಶಿಷ್ಟ ಜನಾಂಗಗಳ ಪರ್ಯಾಯ ಪದಗಳ ಸೇರ್ಪಡೆಗಾಗಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ, ಸುರೇಶ ಬಾಬು, ಯಲ್ಲಪ್ಪ ಬಾಗ್ಲಿ, ಪ್ರಭು ಕೋಡಾಲ, ಶಂಕರ ಗಣಪೂರ, ನಂದಪ್ಪಗೌಡ, ವೆಂಕಟೇಶ ದೇವಕರ್, ಬಸಲಿಂಗಪ್ಪ ನಾಯಕ, ಮಾರ್ತಾಂಡ ಮೈಲಾಪೂರ, ರಮೇಶ ಬಾಗ್ಲಿ, ನಿಜಶರಣ ಅಂಬಿಗರ ಚೌಡಯ್ಯನ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry