ಕೋಸ್ಟ್‌ಗಾರ್ಡ್‌ಗೆ ಭೂಮಿ: ವಿರೋಧ

7

ಕೋಸ್ಟ್‌ಗಾರ್ಡ್‌ಗೆ ಭೂಮಿ: ವಿರೋಧ

Published:
Updated:

ಕಾರವಾರ: ಇಲ್ಲಿಯ ಕಡಲತೀರದಲ್ಲಿ ತಟ ರಕ್ಷಣಾ ಪಡೆ (ಕೋಸ್ಟ್‌ಗಾರ್ಡ್) ಕಚೇರಿ ಹಾಗೂ ಹೆಲಿಪ್ಯಾಡ್ ನಿರ್ಮಿಸಲು ಜಿಲ್ಲಾಡಳಿತ ಅನುಮತಿ ನೀಡಿದ್ದನ್ನು ಖಂಡಿಸಿ ಮೀನುಗಾರರು ಸೋಮವಾರ ಮೀನುಗಾರಿಕಾ ಚಟುವಟಿಕೆ ಸ್ಥಗಿತಗೊಳಿಸಿ ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಗರದಲ್ಲಿ ಮೌನ ಮೆರವಣಿಗೆ ನಡೆಸಿದರು. ಇಲ್ಲಿಯ ಮಿತ್ರ ಸಮಾಜದ ಮೈದಾನದಿಂದ ಪ್ರಾರಂಭವಾದ ಮೌನ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡಿತು.ಈ ಸಂದರ್ಭದಲ್ಲಿ ಮೀನುಗಾರರು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯರಿಗೆ  ಮನವಿ ಸಲ್ಲಿಸಿದರು. ಸಾಂಪ್ರದಾಯಿಕ ಮೀನುಗಾರರ ಬದುಕು ಕೇವಲ ಸಮುದ್ರತೀರವನ್ನೇ ಅವಲಂಬಿಸಿದೆ. ಸ್ವಂತ ಪರಿಶ್ರಮದಿಂದ ಮೀನುಗಾರರು ಸ್ವಾವಲಂಬಿಯಾಗಿ ಜೀವಿಸುತ್ತಿದ್ದಾರೆ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳ ಕುತಂತ್ರದಿಂದಾಗಿ ಕಡಲತೀರದ ಮೇಲೆ ಬೃಹತ್ ಯೋಜನೆಗಳು ಬರುತ್ತಿದ್ದು ಮೀನುಗಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಸೀಬರ್ಡ್ ನಿರಾಶ್ರಿತರಿಂದ ಹಿಡಿದು ಸ್ಥಳೀಯ ಸಾಂಪ್ರದಾಯಿಕ ಮೀನುಗಾರು ಮೀನು ಹಿಡಿಯಲು ಈ ಕಡಲತೀರವನ್ನೇ ನಂಬಿದ್ದಾರೆ. ಸುಮಾರು 13 ಎಕರೆ ಜಮೀನು ಕೋಸ್ಟಲ್ ಗಾರ್ಡ್‌ನವರಿಗೆ ಮಂಜೂರು ಮಾಡಿರುವುದರಿಂದ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರ ಬದುಕು ಅತಂತ್ರವಾಗುವ ಭೀತಿ ಆವರಿಸಿದೆ. ತಟ ರಕ್ಷಣಾ ಪಡೆಯ ಕಚೇರಿ ಕಟ್ಟಡ ಕಟ್ಟುವ ಪೂರ್ವದಲ್ಲಿಯೇ ನಿರ್ಬಂಧಿತ ವಲಯ ಎಂದು ನಾಮಫಲಕ ಹಾಕಿರುವುದರಿಂದ ಮೀನುಗಾರರ ಜೀವನದ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಮೀನುಗಾರರ ಮುಖಂಡ ಪಿ.ಎಮ್.ತಾಂಡೇಲ್, ಪ್ರಸಾದ ಕಾರವಾರಕರ್, ಗಜಾ ಸುರಂಗೇಕರ್, ಸುಶೀಲಾ ಹರಿಕಂತ್ರ, ಕಮಲಾ ಮಾಳ್ಸೇಕರ್, ಜಯಾ ಅಂಬಿಗ ಅಯೋಧ್ಯಾ, ರವೀಂದ್ರ ಪವಾರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry