ಕೋ. ಚೆನ್ನಬಸಪ್ಪ ಪರ – ವಿರೋಧ ಪ್ರತಿಭಟನೆ

7

ಕೋ. ಚೆನ್ನಬಸಪ್ಪ ಪರ – ವಿರೋಧ ಪ್ರತಿಭಟನೆ

Published:
Updated:

ಮಡಿಕೇರಿ: ಸಾಹಿತಿ ಕೋ. ಚೆನ್ನಬಸಪ್ಪ ಅವರ ಪರ ಹಾಗೂ ಅವರ ವಿರುದ್ಧ ಶನಿವಾರ ನಡೆದ ಪ್ರತಿಭಟನೆಯು ಶಾಂತಿ­ಯುತವಾಗಿತ್ತು. ಯಾವುದೇ ಅವಘಡಗಳು ಸಂಭವಿಸಿಲ್ಲ.‘ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್‌’ ಪುಸ್ತಕ ದಲ್ಲಿ ಕೊಡವರು ಸ್ಥಳೀಯರಲ್ಲ ಎಂದು ಬರೆಯುವ ಮೂಲಕ ಸಾಹಿತಿ ಕೋ. ಚೆನ್ನಬಸಪ್ಪ ಕೊಡವರನ್ನು ಅವಮಾ­ನಿಸಿ­ದ್ದಾರೆ ಎಂದು ಟಿಪ್ಪು ವೈಭವೀಕರಣ ವಿರೋಧಿ ಸಮಿತಿಯು ರಸ್ತೆ ತಡೆಗೆ ಕರೆ ನೀಡಿತ್ತು. ಇದಕ್ಕೆ ಕೊಡವ ಸಮಾಜ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ತು ಹಾಗೂ ಜಿಲ್ಲಾ ಬಿಜೆಪಿ ಘಟಕದ ಪ್ರಮುಖರು ಬೆಂಬಲ ಸೂಚಿಸಿದ್ದರು.ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಗೋಣಿ­ಕೊಪ್ಪಲು, ಚೆಟ್ಟಳ್ಳಿ, ನಾಪೋಕ್ಲು, ಸಂಪಾಜೆ ಸೇರಿದಂತೆ ಜಿಲ್ಲೆ­ಯಾದ್ಯಂತ ಬೆಳಿಗ್ಗೆ ಕೆಲ ಹೊತ್ತು ರಸ್ತೆ ತಡೆ ನಡೆಸಲಾಯಿತು. ಕೊಡವರ ಕ್ಷಮೆ ಕೇಳದಿದ್ದರೆ ಜ. 7ರಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅವಹೇಳನಕಾರಿ ಲೇಖನಗಳನ್ನು ಬರೆದ ಕೋ.ಚೆ. ಹಾಗೂ ಈ ಪುಸ್ತಕವನ್ನು ಪ್ರಕಟಿಸಿದ ಪ್ರಕಾಶ­ಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಡವ ಸಮಾ­ಜದ ಹಿರಿಯ ಮುಖಂಡ ಎಂ.ಬಿ. ದೇವಯ್ಯ ಅವರು ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕೋ.ಚೆ ಪರ ಬೆಂಬಲ: ಸಾಹಿತಿ ಕೋ.ಚೆ. ಅವರು ಇತಿಹಾಸದ ದಾಖಲೆಗಳನ್ನು ಆಧರಿಸಿ ಟಿಪ್ಪು ಸುಲ್ತಾನ್‌ ಕುರಿತಾದ ಲೇಖನಗಳನ್ನು ಬರೆದಿದ್ದಾರೆ. ಇದರಲ್ಲಿ ಯಾವುದೇ ರೀತಿಯಲ್ಲಿ ಟಿಪ್ಪು ಅವರ ವೈಭವೀಕರಣ ಆಗಿಲ್ಲ.ಕೋ.ಚೆ. ಅವರು ಸಮ್ಮೇಳನಕ್ಕೆ ಬಂದರೆ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಅವರ ವಿರುದ್ಧ ಹೋರಾಟ ಮಾಡುತ್ತಿರುವವರನ್ನು ಗಡಿಪಾರು ಮಾಡಬೇಕೆಂದು ಟಿಪ್ಪು ಸುಲ್ತಾನ್‌ ಹೋರಾಟ ಸಮಿತಿ ಸದಸ್ಯರು ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.  ನಗರದ ಎ.ವಿ. ಶಾಲೆಯಿಂದ ಮೆರವಣಿಗೆ ಹೊರಟ ಸದಸ್ಯರು, ಕೋಟೆ ಆವರಣದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಉಪವಿಭಾಗಾಧಿಕಾರಿ ಅಭಿರಾಮ ಶಂಕರ್‌ ಅವರಿಗೆ ಮನವಿಪತ್ರ ನೀಡಿದರು.ಹಿಂದೂಪರ ಸಂಘಟನೆಗಳಿಂದ ಅವಮಾನ: ಖಂಡನೆ

ಬೆಂಗಳೂರು:
ಸಾಹಿತಿ ಕೋ.ಚೆನ್ನಬಸಪ್ಪನವರಿಗೆ ಮಡಿಕೇರಿ ಅಖಿಲ ಭಾರತ 80 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ­ ಹತ್ತಲು ಬಿಡುವುದಿಲ್ಲ ಎಂದು ಹೇಳಿರುವ ಮಡಿ­ಕೇರಿಯ ಹಿಂದುಪರ ಸಂಘಟನೆಗಳ ಕನ್ನಡ ವಿರೋಧಿ ನೀತಿ­ಯನ್ನು ಕರ್ನಾಟಕ ನವನಿರ್ಮಾಣ ಸೇನೆಯು ಖಂಡಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ಅಧ್ಯಕ್ಷ ಭೀಮಾಶಂಕರ ಪಾಟೀಲ ಅವರು, ಕೋ.ಚೆನ್ನಬಸಪ್ಪನವರು ‘ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್‌’ ಎಂಬ ಪುಸ್ತಕದಲ್ಲಿ ಎಲ್ಲಿಯೂ ಕೊಡವರನ್ನು ಟೀಕಿಸುವಂತಹ ಶಬ್ದಗಳನ್ನು ಬಳಸಿಲ್ಲ. ಟಿಪ್ಪುವಿನ ಬಗೆಗೆ ದಾಖಲೆಗಳನ್ನು ಇಟ್ಟುಕೊಂಡೇ ಪುಸ್ತಕವನ್ನು ಬರೆದಿದ್ದಾರೆ ಎಂದರು.‘ಟಿಪ್ಪುವಿನ ಬಗೆಗೆ ಬಹಿರಂಗ ಚರ್ಚೆಗೆ ಬರಲಿ. ಆದರೆ, ಕೀಳು ಪ್ರಚಾರಕ್ಕಾಗಿ ಸಾಹಿತ್ಯ ಸಮ್ಮೇಳನದಂತಹ ವೇದಿಕೆಗಳಲ್ಲಿ ಕೋ.ಚೆನ್ನಬಸಪ್ಪನವರನ್ನು ಅವಮಾನಿಸಲು ಹೊರಟಿರುವುದು ಸರಿಯಲ್ಲ’ ಎಂದು ಖಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry