ಕೌಂಟರ್‌ನಲ್ಲಿ 6000 ಟಿಕೆಟ್ ಮಾರಾಟ

7

ಕೌಂಟರ್‌ನಲ್ಲಿ 6000 ಟಿಕೆಟ್ ಮಾರಾಟ

Published:
Updated:
ಕೌಂಟರ್‌ನಲ್ಲಿ 6000 ಟಿಕೆಟ್ ಮಾರಾಟ

ಬೆಂಗಳೂರು: ಸಾವಿರ ಟಿಕೆಟ್ ಕೂಡ ಕೌಂಟರ್‌ನಲ್ಲಿ ನೀಡಲಾಗಲಿಲ್ಲ ಎನ್ನುವ ಕ್ರಿಕೆಟ್ ಪ್ರೇಮಿಗಳ ದೂರನ್ನು ಅಲ್ಲಗಳೆದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಅವರು ‘6000 ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಯಿತು’ ಎಂದು ಸ್ಪಷ್ಟಪಡಿಸಿದ್ದಾರೆ.ಟಿಕೆಟ್‌ಗಳು ಸಿಗದೆ ಸಾಕಷ್ಟು ಜನರು ನಿರಾಸೆಗೊಂಡರು ಹಾಗೂ ಸರಿಯಾದ ಟಿಕೆಟ್ ಮಾರಾಟ ವ್ಯವಸ್ಥೆ ಇಲ್ಲದ ಕಾರಣ ನೂಕುನುಗ್ಗಲು ಉಂಟಾಯಿತು. ಈ ಕುರಿತು ಸುದ್ದಿಗಾರರು ತಮ್ಮತ್ತ ಎಸೆದ ಪ್ರಶ್ನೆಗಳಿಗೆ ಅವರು ‘ದೊಡ್ಡದೊಂದು ಕ್ರಿಕೆಟ್ ಪಂದ್ಯ ನೋಡುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಹಾಗಾಗಿ ಭಾರಿ ಸಂಖ್ಯೆಯಲ್ಲಿ ಜನರು ಸಾಲಿನಲ್ಲಿ ನಿಂತಿದ್ದು ಸಹಜ’ ಎಂದರು.

ಜನರಿಗೆ ಮೊದಲೇ ಲಭ್ಯ ಟಿಕೆಟ್‌ಗಳ ಮಾಹಿತಿ ನೀಡದಿರುವುದು ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಇಂಥ ಘಟನೆಗೆ ಕಾರಣವಾಯಿತು ಎನ್ನುವುದನ್ನು ಅಲ್ಲಗಳೆದ ಶ್ರೀನಾಥ್ ‘ಯಾವುದೇ ರೀತಿಯ ಗೊಂದಲ ಇರಲಿಲ್ಲ. ಎಲ್ಲ ಕೌಂಟರ್‌ಗಳಲ್ಲಿ ಸರಿಯಾದ ಮಾಹಿತಿ ನೀಡಲಾಗಿತ್ತು’ ಎಂದು ಹೇಳಿದರು.ಕೋಲ್ಕತ್ತದಿಂದ ಕೆಲವು ದಿನಗಳ ಹಿಂದೆಯಷ್ಟೇ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವು ಬೆಂಗಳೂರಿಗೆ ಸ್ಥಳಾಂತರ ಗೊಂಡಿತು. ಆದ್ದರಿಂದ ಟಿಕೆಟ್ ಮಾರಾಟಕ್ಕೆ ಸರಿಯಾದ ಯೋಜನೆ ರೂಪಿಸುವುದು ಕೂಡ ಸಾಧ್ಯವಾಗಲಿಲ್ಲ ಎಂದ ಅವರು ‘ನಮ್ಮಲ್ಲಿ ಲಭ್ಯವಿದ್ದ ಎಲ್ಲ ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ನೀಡಿದ್ದೇವೆ. ಇನ್ನು ಐಸಿಸಿ ಹಾಗೂ ಬಿಸಿಸಿಐಯಿಂದ ಕೆಲವು ಟಿಕೆಟ್‌ಗಳು ಬಂದರೆ ಅವುಗಳನ್ನು ಮತ್ತೆ ಮಾರಾಟ ಮಾಡುತ್ತೇವೆ’ ಎಂದರು.ಕೋಲ್ಕತ್ತದಲ್ಲಿ ನಡೆಯಬೇಕಿದ್ದ ಈ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ಮಾರಾಟವಾಗಿದೆ. ಆದರೆ ಪಂದ್ಯ ವರ್ಗಾವಣೆಯ ನಂತರ ಕೆಲವು ಟಿಕೆಟ್‌ಗಳನ್ನು ಈ ಮೊದಲು ಕೊಂಡವರು ಹಿಂದಿರುಗಿಸಬಹುದೆಂದು ನಿರೀಕ್ಷಿಸಲಾಗಿದೆ. ಆ ಬಗ್ಗೆ ಐಸಿಸಿಯಿಂದ ಸ್ಪಷ್ಟ ಮಾಹಿತಿ ಬಂದ ನಂತರ ಬಾಕಿ ಎಷ್ಟು ಸ್ಥಳಾವಕಾಶ ಕ್ರೀಡಾಂಗಣದಲ್ಲಿ ಉಳಿಯುತ್ತದೆಂದು ನೋಡಿಕೊಂಡು ಮತ್ತೆ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಅದೂ ಆನ್‌ಲೈನ್ ಮೂಲಕ ಮಾತ್ರ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry