ಬುಧವಾರ, ಮೇ 25, 2022
30 °C

ಕೌದಿ ಪೂಜೆ ಮೂಲಕ ಶಿವರಾತ್ರಿ ಉತ್ಸವಕ್ಕೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರದ ಕಬೀರಾನಂದ ಆಶ್ರಮದಲ್ಲಿ ಗುರುವಾರ ಬ್ರಾಹ್ಮೀ ಮುಹೂರ್ತದಲ್ಲಿ ವಿಭೂತಿ ಸ್ನಾನ ಹಾಗೂ ಸನ್ಯಾಸ ವಿಧಿಯಂತೆ ಕೌದಿಪೂಜೆ ಆಚರಣೆ ಮೂಲಕ 81ನೇ ಮಹಾ ಶಿವರಾತ್ರಿ ಮಹೋತ್ಸವ ತೆರೆ ಕಂಡಿತು.ಕೌದಿ ಪೂಜೆ: ಚಿಂದಿ ಬಟ್ಟೆಯನ್ನು ಒಟ್ಟಿಗೆ ಜೋಡಿಸಿರುವ ಬಟ್ಟೆ, ರುದ್ರಾಕ್ಷಿ ಮಾಲೆ ಹಾಗೂ ತಂಕಟೆ ಹೂವಿನ ಹಾರವನ್ನು ಧರಿಸಿದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಠದಲ್ಲಿನ ಶಿವನಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೌದಿ ಪೂಜೆ ನೆರವೇರಿಸಿದರು. ಮಠದಲ್ಲಿಯೇ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಸ್ವಾಮೀಜಿ ಕೈಯಲ್ಲಿ ಮಣ್ಣಿನತಟ್ಟೆ ಹಿಡಿದು ಭಿಕ್ಷಾಟನೆ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತರು ತಟ್ಟೆಯಲ್ಲಿ ಹಣ ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು.  ಮಹಾ ಶಿವರಾತ್ರಿ ಮಹೋತ್ಸವ ಅಂಗವಾಗಿ ಫೆ. 26ರಿಂದ ಕಬೀರಾನಂದ ಆಶ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪದ್ಮಭೂಷಣ ಬಾಲಗಂಗಾಧರ ನಾಥ ಸ್ವಾಮೀಜಿ ಅವರಿಗೆ ‘ಆರೂಢ ಶ್ರೀ’ ಪ್ರಶಸ್ತಿ ಪ್ರದಾನ, ಸಾಮಾಜಿಕ, ಧಾರ್ಮಿಕ ಹಾಗೂ ವೈಚಾರಿಕತೆ ಕುರಿತ ಚಿಂತನಾ ಕಾರ್ಯಕ್ರಮಗಳು ನಡೆದವು. ರಾಜ್ಯದ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಶಿವಲಿಂಗಾನಂದ ಸ್ವಾಮೀಜಿ ಅವರ ಪಲ್ಲಕ್ಕಿ ಉತ್ಸವ ಮತ್ತು ವಿವಿಧ ಜಾನಪದ ತಂಡಗಳು ನಡೆಸಿಕೊಟ್ಟ ಜಾನಪದ ಉತ್ಸವ ಜನಮನ ಸೆಳೆಯಿತು. ನಾಟ್ಯರಂಜಿನಿ ಕಲಾ ಕೇಂದ್ರ, ಕಬೀರಾನಂದ ಸ್ವಾಮಿ ವಿದ್ಯಾಪೀಠ, ಮಾತೃಶ್ರೀ ವಿದ್ಯಾಸಂಸ್ಥೆ ಹಾಗೂ ಅಂಜನಾ ನೃತ್ಯ ಕಲಾಕೇಂದ್ರದ ಮಕ್ಕಳು ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಇಂದು ಶಿವರಾತ್ರಿ ಉತ್ಸವ

ಹಿರಿಯೂರು ತಾಲ್ಲೂಕು ರಂಗೇನಹಳ್ಳಿಯ ಕರಿಬಸವೇಶ್ವರ(ಅಜ್ಜಯ್ಯ)ಸ್ವಾಮಿ ಆತ್ಮಜ್ಯೋತಿ ಮಂದಿರದಲ್ಲಿ ಮಾರ್ಚ್ 4ರಿಂದ 12ರವರೆಗೆ 2ನೇ ವರ್ಷದ ಮಹಾಶಿವರಾತ್ರಿ ಉತ್ಸವದ ವಿವಿಧ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಸಂಜೆ ಆಧ್ಯಾತ್ಮಿಕ ಉಪನ್ಯಾಸ ಹಾಗೂ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ನಾಳೆ ‘ಮಾನವ ಹಕ್ಕು’ ವಿಚಾರ ಸಂಕಿರಣ

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಹಾಗೂ ಎಸ್‌ಜೆಎಂ ಕಾನೂನು ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 5ರಂದು ಬೆಳಿಗ್ಗೆ 9ಕ್ಕೆ ನಗರದ ಎಸ್‌ಜೆಎಂ ಬಸವೇಶ್ವರ ಆಡಿಟೋರಿಯಂ ‘ಮಾನವ ಹಕ್ಕುಗಳು’ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 11ಕ್ಕೆ ಭಾರತದಲ್ಲಿ ಮಾನವ ಹಕ್ಕುಗಳು ಆವಿಷ್ಕಾರಗೊಳಿಸುವ ಪರಿಕ್ರಮಗಳು ಮತ್ತು ಮಾನವ ಹಕ್ಕುಗಳನ್ನು ಜಾರಿಗೊಳಿಸುವ ವಿಧಾನಗಳು. ಮಧ್ಯಾಹ್ನ 2.30ಕ್ಕೆ ಮಾನವ ಹಕ್ಕುಗಳು ಮತ್ತು ತಂತ್ರಜ್ಞಾನ ಹಾಗೂ ಅಪರಾಧಿಕ ನ್ಯಾಯ ವಿತರಣೆಯಲ್ಲಿ ವೈದ್ಯಕೀಯ ವಿಜ್ಞಾನ ಬಳಕೆ ಮತ್ತು ಮಾನವ ಹಕ್ಕುಗಳು ವಿಷಯಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ.ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಜೆ.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.