ಮಂಗಳವಾರ, ಆಗಸ್ಟ್ 20, 2019
25 °C

ಕೌನ್ಸಿಲ್ ಸಭೆಗೆ ಸರ್ಕಾರದ ಅನುಮತಿ ಕಡ್ಡಾಯ

Published:
Updated:

ಬೆಂಗಳೂರು: `ಬಿಬಿಎಂಪಿಗೆ ನೂತನ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಹೊಸ ಅಧ್ಯಕ್ಷರ ಆಯ್ಕೆ ನಡೆಯುವವರೆಗೆ ಈಗಿರುವ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರೇ ಆ ಸ್ಥಾನಗಳಲ್ಲಿ ಮುಂದುವರೆಯಲು ಕರ್ನಾಟಕ ಮುನ್ಸಿಪಲ್ ಕಾಯ್ದೆಯಲ್ಲಿ ಅವಕಾಶವಿದೆ. ಆದರೆ, ಕಾಯ್ದೆಯ ಪ್ರಕಾರ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರಿಗೆ ಯಾವುದೇ ಅಧಿಕಾರವಿಲ್ಲ' ಎಂದು ಹಿರಿಯ ವಕೀಲ ಅಶೋಕ ಹಾರನಹಳ್ಳಿ ತಿಳಿಸಿದ್ದಾರೆ.ಹೀಗಾಗಿ ಸೋಮವಾರ ನಡೆಸಲು ಉದ್ದೇಶಿಸಿದ್ದ ಬಿಬಿಎಂಪಿ ಕೌನ್ಸಿಲ್ ಸಭೆ ನಡೆಯುವುದು ಬಹುತೇಕ ಅನುಮಾನ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಅನುಮೋದನೆಗೆ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಲು ಮೇಯರ್ ಡಿ.ವೆಂಕಟೇಶಮೂರ್ತಿ ಸೋಮವಾರ ಕೌನ್ಸಿಲ್ ಸಭೆ ಕರೆಯಲು ಆಯುಕ್ತರಿಗೆ ತಿಳಿಸಿದ್ದರು.ಕೌನ್ಸಿಲ್ ಸಭೆ ಕರೆಯಲು ಹಾಗೂ ಕಡತ ವಿಲೇವಾರಿ ಮಾಡಲು ಮೇಯರ್ ಅವರಿಗೆ ಅಧಿಕಾರವಿದೆಯೇ? ಎಂಬ ಬಗ್ಗೆ ಬಿಬಿಎಂಪಿಯ ಕಾನೂನು ವಿಭಾಗವು ಅಶೋಕ ಹಾರನಹಳ್ಳಿ ಅವರ ಕಾನೂನು ಸಲಹೆ ಕೇಳಿತ್ತು.`ಬಿಬಿಎಂಪಿ ಬಜೆಟ್ ಮಂಡಿಸಲು ರಾಜ್ಯ ಸರ್ಕಾರ ಮೇಯರ್ ಅವರಿಗೆ ವಿಶೇಷ ಅನುಮತಿ ನೀಡಿತ್ತು. ಆದರೆ, ವಿವಿಧ ಸ್ಥಾಯಿ ಸಮಿತಿಗಳ ಅನುಮೋದನೆಗೆ ಬಾಕಿ ಇರುವ ಕಡತಗಳ ವಿಲೇವಾರಿಗೆ ಮೇಯರ್ ಅವರಿಗೆ ಅಧಿಕಾರವಿಲ್ಲ. ಸರ್ಕಾರದ ಅನುಮತಿ ಇಲ್ಲದ ಹೊರತು ಈ ಕಡತಗಳನ್ನು ನೇರವಾಗಿ ಕೌನ್ಸಿಲ್ ಸಭೆಗೆ ತರಲು ಸಾಧ್ಯವಿಲ್ಲ. ಸರ್ಕಾರ ಒಪ್ಪಿಗೆ ಕೊಡದೇ ಇದ್ದಲ್ಲಿ ಸೋಮವಾರ ಕೌನ್ಸಿಲ್ ಸಭೆ ನಡೆಯುವುದಿಲ್ಲ' ಎಂದು ಪಾಲಿಕೆಯ ಆಯುಕ್ತ ಎಂ.ಲಕ್ಷ್ಮೀನಾರಾಯಣ `ಪ್ರಜಾವಾಣಿ'ಗೆ ತಿಳಿಸಿದರು.ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯು ಏಪ್ರಿಲ್ 24ಕ್ಕೆ ಮುಗಿದಿದೆ. ಆದರೆ, ಮೇಯರ್ ಆಯ್ಕೆ ವಿಚಾರ ಹೈಕೋರ್ಟ್‌ನಲ್ಲಿರುವುದರಿಂದ ಸ್ಥಾಯಿ ಸಮಿತಿಗಳಿಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಯೂ ನಡೆದಿಲ್ಲ.

Post Comments (+)