ಕೌಮಾರ್ಯ ವಯಸ್ಸು ಇಳಿಕೆಗೆ ಸುಪ್ರೀಂಕೋರ್ಟ್ ನಕಾರ

ಬುಧವಾರ, ಜೂಲೈ 17, 2019
29 °C

ಕೌಮಾರ್ಯ ವಯಸ್ಸು ಇಳಿಕೆಗೆ ಸುಪ್ರೀಂಕೋರ್ಟ್ ನಕಾರ

Published:
Updated:

ನವದೆಹಲಿ (ಪಿಟಿಐ): ಎಳೆ ಹರೆಯದ (ಕೌಮಾರ್ಯ) ವಯಸ್ಸನ್ನು 18 ವರ್ಷದಿಂದ 16 ವರ್ಷಗಳಿಗೆ ಇಳಿಸಲು ಬುಧವಾರ ನಿರಾಕರಿಸಿದ ಸುಪ್ರೀಂಕೋರ್ಟ್ ಹೀನಾಯ ಅಪರಾಧಗಳಲ್ಲಿ ಷಾಮೀಲಾದ ಅಪ್ರಾಪ್ತ ವಯಸ್ಕರನ್ನು ಕಾನೂನಿನ ಅಡಿಯಲ್ಲಿ ರಕ್ಷಿಸಬಾರದು ಎಂಬ ಮನವಿಯನ್ನು ವಜಾ ಮಾಡಿತು.ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ಪೀಠವು ಬಾಲಾಪರಾಧ ನ್ಯಾಯ ಕಾಯ್ದೆಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳಿ, ಡಿಸೆಂಬರ್ 16ರಂದು ನಡೆದ ಅಮಾನುಷ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾ ಮಾಡಿತು. ಈ ಅಮಾನುಷ ಅತ್ಯಾಚಾರದ ಕ್ರೌರ್ಯದಲ್ಲಿ ಅಪ್ರಾಪ್ತ ವಯಸ್ಕನೂ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಹಲವಾರು ಮಂದಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು.'ನಾವು ಕಾಯ್ದೆಯ ವಿಧಿಗಳನ್ನು ಎತ್ತಿ ಹಿಡಿಯುತ್ತೇವೆ. ಕಾಯ್ದೆಯಲ್ಲಿ ಹಸ್ತಕ್ಷೇಪ ನಡೆಸಬೇಕಾದ ಅಗತ್ಯವಿಲ್ಲ'  ಎಂದು ತನ್ನ ತೀರ್ಪಿನ ಪ್ರಮುಖ ಭಾಗವನ್ನು ಓದುತ್ತಾ ಪೀಠವು ಸ್ಪಷ್ಟ ಪಡಿಸಿತು.ಡಿಸೆಂಬರ್ 16ರ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕನೊಬ್ಬ ಷಾಮೀಲಾಗಿದ್ದನೆಂಬ ಆರೋಪಗಳ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಭಾರಿ ಕೋಲಾಹಲ ಉಂಟಾಗಿತ್ತು. ಹಲವಾರು ಮಂದಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿ ಅಮಾನುಷ ಅಪರಾಧ ಕೃತ್ಯಗಳಲ್ಲಿ ಷಾಮೀಲಾಗುವ ಅಪ್ರಾಪ್ತ ವಯಸ್ಕರನ್ನು ಕಾನೂನಿನ ಅಡಿಯಲ್ಲಿ ರಕ್ಷಿಸದಂತೆ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಕೋರಿದ್ದರು.ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾದ ಈ ಅರ್ಜಿಗಳನ್ನು ದೆಹಲಿಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ  ಅಮೋದ್ ಕಾಂತ್ ಸೇರಿದಂತೆ ಹಲವಾರು ಮಕ್ಕಳ ಹಕ್ಕುಗಳ ಸಂರಕ್ಷಣಾ ಕಾರ್ಯಕರ್ತರು ವಿರೋಧಿಸಿದ್ದರು.ಕಳೆದ ವರ್ಷ ಡಿಸೆಂಬರ್ 16ರಂದು ದೆಹಲಿಯ ಚಲಿಸುತ್ತಿದ್ದ ಬಸ್ಸಿನಲ್ಲಿ ಒಬ್ಬ ಅಪ್ರಾಪ್ತ ವಯಸ್ಕ ಸೇರಿದಂತೆ 6 ಜನರ ಗುಂಪೊಂದು 23ರ ಹರೆಯದ ಯುವತಿಯೊಬ್ಬಳ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ ಭೀಕರವಾಗಿ ಆಕೆಯ ಮೇಲೆ ಹಲ್ಲೆ ನಡೆಸಿತ್ತು.ಅಪರಾಧ ಎಸಗಿದ ಅಪ್ರಾಪ್ತ ವಯಸ್ಕನ ವಿರುದ್ಧ ಬಾಲಾಪರಾಧ ನ್ಯಾಯ ಮಂಡಳಿಯಲ್ಲಿ ವಿಚಾರಣೆ ನಡೆಯುತ್ತಿದ್ದು ಮಂಡಳಿಯು ಜುಲೈ 25ರಂದು ತನ್ನ ತೀರ್ಪು ನೀಡಲಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿ ಜೀವನ್ಮರಣ ಹೋರಾಟದ ಬಳಿಕ ಡಿಸೆಂಬರ್ 29ರಂದು ಸಿಂಗಾಪುರ ಆಸ್ಪತ್ರೆಯಲ್ಲಿ ಗಾಯಗಳ ಪರಿಣಾಮವಾಗಿ ಮೃತಳಾಗಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry