ಕೌಲಗಿ, ರಾವ್‌ಗೆ ‘ದಾಸಿಮಯ್ಯ’ ಪ್ರಶಸ್ತಿ

7

ಕೌಲಗಿ, ರಾವ್‌ಗೆ ‘ದಾಸಿಮಯ್ಯ’ ಪ್ರಶಸ್ತಿ

Published:
Updated:
ಕೌಲಗಿ, ರಾವ್‌ಗೆ ‘ದಾಸಿಮಯ್ಯ’ ಪ್ರಶಸ್ತಿ

ಬೆಂಗಳೂರು: ಕೈಮಗ್ಗ ಕ್ಷೇತ್ರದ ಗಣನೀಯ ಸೇವೆಗಾಗಿ ದೇಸಿ ಸಂಸ್ಥೆ­ಯಿಂದ ನೀಡ­ಲಾಗುವ ‘ದಾಸಿಮಯ್ಯ ರಾಷ್ಟ್ರೀಯ ಪ್ರಶಸ್ತಿ’ಗೆ 2011–12ನೇ ಸಾಲಿನಲ್ಲಿ ಮೇಲುಕೋಟೆಯ ಸುರೇಂದ್ರ ಕೌಲಗಿ, ಆಂಧ್ರಪ್ರದೇಶದ ಮಾಚರ್ಲ ಮೋಹನ್‌­ರಾವ್‌ ಸೇರಿದಂತೆ ಎರಡು ಸಹಕಾರಿ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ  ಈ ಕುರಿತು ದೇಸಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಸನ್ನ ಮಾಹಿತಿ ನೀಡಿದರು.‘ವೈಯಕ್ತಿಕ ಪ್ರಶಸ್ತಿಗಳ ಜತೆಗೆ ಸಾಂಸ್ಥಿಕ ಪ್ರಶಸ್ತಿಗಳನ್ನು ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕುರುಬರ ಉಣ್ಣೆಯ ಔದ್ಯೋಗಿಕ ಬೆಳವಣಿಗೆಯ ಸಹಕಾರ ಸಂಘ ಮತ್ತು ಬಾಗಲಕೋಟೆ ಜಿಲ್ಲೆ ಕುಂದರಗಿಯ ಕುರುಬರ ಉಣ್ಣೆಯ ಉತ್ಪಾದಕ ಸಹಕಾರ ಸಂಘಕ್ಕೆ ನೀಡಲಾಗುವುದು’ ಎಂದು ಅವರು ತಿಳಿಸಿದರು. ‘ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್‌ 2ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ವಿಧಾನ­ಸಭಾ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ದೇವನೂರ ಮಹಾದೇವ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜವಳಿ  ಆಯುಕ್ತ ಡಿ.ಎ.ವೆಂಕಟೇಶ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸ­ಲಿದ್ದಾರೆ’ ಎಂದರು.‘ಪ್ರಶಸ್ತಿಯು ಐವತ್ತು ಸಾವಿರ ನಗದು, ಕಲಾವಿದ ವೆಂಕಟಾಚಲಪತಿ ಅವರು ನಿರ್ಮಿಸಿರುವ ಗಾಂಧೀಜಿಯವರ ಕಂಚಿನ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ’ ಎಂದರು.‘1999ರಲ್ಲಿ ಒಂದೇ ಒಂದು ಅಂಗಡಿಯೊಂದಿಗೆ ಆರಂಭವಾದ ದೇಸಿ  ಸಂಸ್ಥೆ ಇಂದು ರಾಜ್ಯದಾದ್ಯಂತ ಹದಿನಾಲ್ಕು ಮಳಿಗೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಐದು, ಮೈಸೂರು, ಧಾರವಾಡ, ಶಿವಮೊಗ್ಗ, ಮಂಗಳೂರು, ಸಾಗರ, ಸಿದ್ದಾಪುರ ಹಾಗೂ ಹೆಗ್ಗೋಡಿ­ನಲ್ಲಿ ಒಂದೊಂದು ಮಾರಾಟ ಮಳಿಗೆ­ಗಳನ್ನು ಹೊಂದಿದೆ. ಬೆಳಗಾವಿಯಲ್ಲಿ ಮುಂದಿನ ತಿಂಗಳು ಹೊಸ ದೇಸಿ ಮಳಿಗೆ ಆರಂಭವಾಗಲಿದೆ’ ಎಂದು ಹೇಳಿದರು.‘2000–01 ರಲ್ಲಿ ₨ 28.40 ಲಕ್ಷವಿದ್ದ ದೇಸಿ ವಾರ್ಷಿಕ ವಹಿವಾಟು ಇಂದು ₨ 5 ಕೋಟಿಯಷ್ಟಾಗಿದೆ. ದೇಸಿ ಅಂಗಡಿಗಳಿಂದಾಗಿ ಕೈಮಗ್ಗದ ಪದಾರ್ಥಗಳಿಗೆ ಬೇಡಿಕೆಯು ಗಣನೀಯವಾಗಿ ಹೆಚ್ಚುತ್ತಿದೆ. ನೈಸರ್ಗಿಕ ಬಣ್ಣ ಹಾಕಿದ ಉತ್ತಮ ದರ್ಜೆಯ ಕೈಮಗ್ಗದ ಸಿದ್ಧ ಉಡುಪುಗಳು ದೇಸಿಯ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry