ಕೌಶಲ್ಯ ವೃದ್ಧಿ: ಕಾಸಿಯಾಗೆ ಸ್ಥಾನ

7

ಕೌಶಲ್ಯ ವೃದ್ಧಿ: ಕಾಸಿಯಾಗೆ ಸ್ಥಾನ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ `ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ~ಕ್ಕೆ (ಕಾಸಿಯಾ) ಪಾಲುದಾರ ಸಂಸ್ಥೆಯ ಸ್ಥಾನ ನೀಡಲು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ಮುಂದಾಗಿದೆ.ಬೆಂಗಳೂರಿನಲ್ಲಿ ಗುರುವಾರ ಕಾಸಿಯಾ ಆಡಳಿತ ನಿರ್ವಹಣೆ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ವೀರಭದ್ರ ಸಿಂಗ್ ಈ ವಿಷಯ ಪ್ರಕಟಿಸಿದರು.`ಈ ಕ್ರಮದಿಂದ ಕಾಸಿಯಾಕ್ಕೆ ಕೇಂದ್ರದಿಂದ ಹಣಕಾಸಿನ ನೆರವೂ ಲಭಿಸಲಿದೆ. 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ 40 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಜವಾಬ್ದಾರಿ ನನ್ನ ಇಲಾಖೆಗಿದೆ. 2022ರ ವೇಳೆಗೆ 1.5 ಕೋಟಿ ಯುವಕರಿಗೆ ತರಬೇತಿ ನೀಡಬೇಕಾದ ಹೊಣೆ ಇದೆ~ ಎಂದು ಸಚಿವರು ತಿಳಿಸಿದರು.ಕೃಷಿಯನ್ನು ಹೊರತುಪಡಿಸಿದರೆ ದೇಶದಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ನೀಡಿರುವುದು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರ. 6.5 ಕೋಟಿ ಕಾರ್ಮಿಕರು ಈ ಕ್ಷೇತ್ರದಲ್ಲಿದ್ದಾರೆ. ದೇಶದ ಒಟ್ಟು ಕೈಗಾರಿಕಾ ಉತ್ಪನ್ನ ಮತ್ತು ಒಟ್ಟು ಕೈಗಾರಿಕಾ ರಫ್ತಿನ ಶೇಕಡ 45ರಷ್ಟು ಪಾಲು ಈ ಕ್ಷೇತ್ರದ್ದು ಎಂದು ಹೇಳಿದರು.ನಾಡಿನ ಆರ್ಥಿಕ ಅಭಿವೃದ್ಧಿಗೆ ತಡೆಯಾಗಿರುವುದು ಬಂಡವಾಳದ ಕೊರತೆ, ಕಾರ್ಮಿಕರ ಅಲಭ್ಯತೆ ಅಥವಾ ಕೈಗಾರಿಕಾ ಭೂಮಿಯ ಕೊರತೆ ಅಲ್ಲ. ಉತ್ಸಾಹಿ ಉದ್ಯಮಿಗಳ ಅಭಾವವೇ ಇದಕ್ಕೆ ಕಾರಣ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದ ವಿಸ್ತರಣೆ ಸರ್ಕಾರದ ಪ್ರಸ್ತುತ ಗುರಿಯಾಗಿದೆ ಎಂದರು.ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆಯನ್ನು (ಪಿಎಂಇಜಿಪಿ) ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ. ಇದರ ಮೂಲಕ ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಯುವಕರಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಉದ್ದೇಶ ಎಂದು ತಿಳಿಸಿದರು.`ನಮ್ಮ ಸಂಸ್ಥೆ ಈಗಾಗಲೇ ಎರಡು ಸಾವಿರಕ್ಕೂ ಅಧಿಕ ವೃತ್ತಿಪರರಿಗೆ ಕೌಶಲ್ಯ ತರಬೇತಿ ನೀಡಿದೆ. ನೂತನ ಕಾಲೇಜಿನ ಪಠ್ಯಕ್ರಮವನ್ನು ಕಾಲಕ್ಕೆ ತಕ್ಕಂತೆ ಮಾರ್ಪಡಿಸಲಾಗುವುದು~ ಎಂದು ಕಾಸಿಯಾ ಆಡಳಿತ ನಿರ್ವಹಣೆ ಕಾಲೇಜಿನ ಪಾಲುದಾರ ಸಂಸ್ಥೆ ಐಸಿಬಿಎಂಎಸ್‌ನ ಮುಖ್ಯಸ್ಥ ಎ. ಚಂದ್ರಶೇಖರನ್ ಹೇಳಿದರು.ಕಾಸಿಯಾ ಅಧ್ಯಕ್ಷ ಪ್ರಕಾಶ್ ಎನ್. ರಾಯ್ಕರ್, ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಆರ್.ಕೆ. ಮಾಥುರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry