ಗುರುವಾರ , ಮೇ 13, 2021
32 °C

ಕೌಶಿಕ್ ಹೇಳಿಕೆ ವಿವಾದ: ರಾಜಕೀಯ ಸಂಘರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಮುಂದಿನ ಸಂಸತ್ ಚುನಾವಣೆಗೆ ಮುನ್ನ ದೇಶದಲ್ಲಿ ಮಹತ್ವದ ಸುಧಾರಣೆಗಳು ಆಗುವ ಸಾಧ್ಯತೆ ಇಲ್ಲ ಎಂದು ಪ್ರಧಾನಿ ಅವರ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರು ಅಮೆರಿಕದಲ್ಲಿ ನೀಡಿದ ಹೇಳಿಕೆಯು ಇದೀಗ ಸರ್ಕಾರ ಹಾಗೂ ವಿರೋಧ ಪಕ್ಷಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.`2014ರ ನಂತರ ದೇಶದಲ್ಲಿ ಮಹತ್ವದ ಸುಧಾರಣೆಗಳು ಆಗುತ್ತವೆ. 2015ರ ಬಳಿಕ ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ರಾಷ್ಟ್ರವಾಗಲಿದೆ~ ಎಂದೂ ಬಸು, ವಾಷಿಂಗ್ಟನ್‌ನಲ್ಲಿ ನಡೆದ ಅಂತರ ರಾಷ್ಟ್ರೀಯ ಶಾಂತಿ ಸಭೆಯಲ್ಲಿ ಹೇಳಿದ್ದರು.ಈ ಹಿನ್ನೆಲೆಯಲ್ಲಿ `ಸರ್ಕಾರದ ಕಾರ್ಯನೀತಿ ನಿಷ್ಕ್ರಿಯವಾಗಿದೆ~ ಎಂದು ಬಿಜೆಪಿ ಟೀಕಿಸಿದರೆ, ಹಿರಿಯ ಸಚಿವರೊಬ್ಬರು ಇದಕ್ಕೆ ತಿರುಗೇಟು ನೀಡುತ್ತಾ `ವಿರೋಧ ಪಕ್ಷಗಳ ಅಸಹಕಾರದಿಂದ ಮಸೂದೆಗಳು ಅಂಗೀಕಾರವಾಗಿಲ್ಲ~ ಎಂದು ಆರೋಪಿಸಿದ್ದಾರೆ. ಆರ್ಥಿಕ ಸುಧಾರಣೆಗಳ ಬಗ್ಗೆ ಸಿಪಿಎಂ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆರ್ಥಿಕತೆಯ ದೋಷಗಳನ್ನು ಸರಿಪಡಿಸಬೇಕಾಗಿದೆ ಎಂದು ಬಿಜೆಪಿ ಹಾಗೂ ಜೆಡಿಯು ಪಕ್ಷಗಳು ಹೇಳಿವೆ.ಹಗರಣ ಪೀಡಿತ ಸರ್ಕಾರವು ತನ್ನ ಮಿತ್ರಪಕ್ಷಗಳ ವಿಶ್ವಾಸ ಕಳೆದುಕೊಂಡಿದೆ. ಯುಪಿಎ ಎರಡನೇ ಅವಧಿಯಲ್ಲಿ ಸುಧಾರಣೆಗಳು ಆಗುವುದಿಲ್ಲ ಎನ್ನುವುದನ್ನು ಬಸು ಹೇಳಿಕೆಯು ಸೂಚಿಸುತ್ತದೆ. ಈ ಹೇಳಿಕೆ ಬಗ್ಗೆ ಪ್ರಧಾನಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಆಗ್ರಹಿಸಿದ್ದಾರೆ.`ಪ್ರಮುಖ ಮಸೂದೆ ಬಗ್ಗೆ ಸರ್ಕಾರ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ~ ಎಂದು ಪಕ್ಷದ ವಕ್ತಾರೆ ನಿರ್ಮಲಾ ಸೀತಾರಾಂ ಹೇಳಿದ್ದಾರೆ. `ಜಗತ್ತಿನ ಕೆಲವು ಕಡೆ ಆರ್ಥಿಕ ಹಿಂಜರಿತದ ಮಧ್ಯೆಯೂ ದೇಶವು ಸುಮಾರು ಶೇ 7ರಷ್ಟು ಅಭಿವೃದ್ಧಿ ಸಾಧಿಸಿದೆ. ಕೃಷಿ ಉತ್ಪನ್ನ ಉತ್ತಮವಾಗಿದೆ. ಸೇವಾ ಕ್ಷೇತ್ರ ಕೂಡ ಚೆನ್ನಾಗಿದೆ~ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಹೇಳಿದ್ದಾರೆ.`ಸುಧಾರಣೆ ಏಕಾಏಕಿ ಆಗಲು ಸಾಧ್ಯವಿಲ್ಲ. ಬದಲಾವಣೆ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ~ ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.