ಕ್ಯಾಂಪಸ್ ಸೆಲೆಕ್ಷನ್ ಅದೃಷ್ಟವೇ? ಅಲ್ಲವೇ?

7

ಕ್ಯಾಂಪಸ್ ಸೆಲೆಕ್ಷನ್ ಅದೃಷ್ಟವೇ? ಅಲ್ಲವೇ?

Published:
Updated:
ಕ್ಯಾಂಪಸ್ ಸೆಲೆಕ್ಷನ್ ಅದೃಷ್ಟವೇ? ಅಲ್ಲವೇ?

ಉನ್ನತ ಶಿಕ್ಷಣ ಪಡೆಯುತ್ತಿದ್ದರೂ ಉದ್ಯೋಗ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗುವ ವಿದ್ಯಾರ್ಥಿಗಳ ಪಾಲಿಗೆ `ಕ್ಯಾಂಪಸ್ ಸೆಲೆಕ್ಷನ್' ಎಂಬುದು ವರದಾನವೇ. ಆದರೆ ಈಚೆಗೆ, `ಕ್ಯಾಂಪಸ್ ಸೆಲೆಕ್ಷನ್'ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಓದು ಮುಗಿಸಿ ತಿಂಗಳಾನುಗಟ್ಟಲೆ ಕಳೆದರೂ ಕೆಲಸದ ಆದೇಶ ಪತ್ರ ಕೈಗೆ ಬರದೆ ಆತಂಕಕ್ಕೆ ಒಳಗಾಗುವ ಸ್ಥಿತಿ ಕಂಡುಬರುತ್ತಿದೆ.

                              -------------

`ಕೊನೆಗೂ ಅದೃಷ್ಟ ಎಂಬುದು ಬೇರೆಯೇ ಇರುತ್ತದೆ' ಎಂಬ ಸರ್ವಾನುಮತದ ನಿಟ್ಟುಸಿರಿನೊಂದಿಗೆ ನಮ್ಮ ಸಂಭಾಷಣೆ ಮುಗಿಯಿತು. ಕಮಲಾಗೆ ಉದ್ಯೋಗ ದೊರೆಯದ ಬಗ್ಗೆ ನಾವು ಮಾತನಾಡುತ್ತಿದ್ದೆವು. ಎಂಜಿನಿಯರಿಂಗ್‌ನಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದ ಅವಳು `ಕ್ಯಾಂಪಸ್ ಸೆಲೆಕ್ಷನ್'ನಲ್ಲಿ ಒಂದು ಕಂಪೆನಿಗೆ ಆಯ್ಕೆಯಾಗಿದ್ದಳು. ಹಾಗಾಗಿ ಬೇರೆಲ್ಲೂ ಕೆಲಸಕ್ಕೆ ಯತ್ನಿಸಿರಲಿಲ್ಲ.

ಆದರೆ ಆ ಕಂಪೆನಿಯವರು ಇದೀಗ ನೇಮಕಾತಿ ದಿನಾಂಕವನ್ನು ಮುಂದೂಡುತ್ತಲೇ ಇದ್ದಾರೆ. ಇಷ್ಟರಲ್ಲೇ, ಆಕೆಗಿಂತ ಕಲಿಕೆಯಲ್ಲಿ ತುಂಬಾ ಹಿಂದೆ ಇದ್ದವರೂ ಏನೋ ಹೇಗೋ ಯತ್ನಿಸಿ ಉದ್ಯೋಗ ಗಳಿಸಿಕೊಂಡಿದ್ದಾರೆ. ಇನ್ನು ತನಗೆ ಯಾವಾಗ ಕೆಲಸಕ್ಕೆ ಕರೆ ಬರುತ್ತದೋ ಏನೋ ಎಂಬ ತೀವ್ರ ಒತ್ತಡಕ್ಕೆ ಕಮಲಾ ಒಳಗಾಗಿದ್ದಾಳೆ.

ಆಕೆಯನ್ನು ಸಂತೈಸಿ ಮೊಗದಲ್ಲಿ ನಗು ಮೂಡಿಸಿದರೂ ನನಗೆ ಉಳಿದ ಪ್ರಶ್ನೆಯೆಂದರೆ `ಕ್ಯಾಂಪಸ್ ಸೆಲೆಕ್ಷನ್' ಎಂಬುದು ಅದೃಷ್ಟವೋ ಅಥವಾ ಅಭ್ಯರ್ಥಿಗಳ ಪಾಶವೋ?

ಎಂಜಿನಿಯರಿಂಗ್ ಕಲಿಯುವ ಉನ್ನತ ಶ್ರೇಣಿಯ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿ ಬಂದದ್ದು `ಕ್ಯಾಂಪಸ್ ಸೆಲೆಕ್ಷನ್'.

ಇದು ಪ್ರಸಿದ್ಧ ಬಹುರಾಷ್ಟ್ರೀಯ ಕಂಪೆನಿಗಳು ಖರ್ಚಿಲ್ಲದೆ ಲಾಭ ಪಡೆಯುವ ಉಪಾಯವಾಗಿದೆ. ಪತ್ರಿಕಾ ಜಾಹಿರಾತು, ಅಭ್ಯರ್ಥಿಗಳ ಅರ್ಜಿ ಸಂಗ್ರಹ, ಅವುಗಳ ವರ್ಗೀಕರಣ, ಸಂದರ್ಶನಕ್ಕೆ ಅರ್ಹವೆನಿಸುವ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಣೆ, ಅವರಿಗೆ ಮಾಹಿತಿ ತಿಳಿಸುವುದು, ಅನೇಕ ದಿನಗಳಲ್ಲಿ ಮತ್ತು ಹಂತಗಳಲ್ಲಿ ನಡೆಯುವ ಸಂದರ್ಶನ, ಅರ್ಹ ಅಭ್ಯರ್ಥಿಗಳನ್ನು ಮತ್ತೆ ಮತ್ತೆ ಸೋಸುವುದು, ಬಸಿಯುವುದು...

ಹೀಗೆ ಮಾಡಿ ಕೊನೆಗೆ ಆಯ್ದ ಅಭ್ಯರ್ಥಿಗಳು ಕೆಲಸಕ್ಕೆ ಸೇರ್ಪಡೆ ಆಗುವವರೆಗೆ ಸಾಕಷ್ಟು ಸಮಯ, ಶ್ರಮ ಮತ್ತು ಸಂಪನ್ಮೂಲ ವ್ಯಯವಾಗುತ್ತದೆ. ಆಮೇಲೂ ಆಯ್ಕೆಯಾದವರೆಲ್ಲ ಕೆಲಸಕ್ಕೆ ಬಂದೇ ಬರುತ್ತಾರೆಂಬ ವಿಶ್ವಾಸ ಇರುವುದಿಲ್ಲ. ಆಗ ಎರಡನೇ ಪಟ್ಟಿಯಲ್ಲಿ ಆದ್ಯತೆ ಇದ್ದವರಿಗೆ ತಿಳಿಸಬೇಕು. ಹೀಗೆ ಕಂಪೆನಿಗಳ ಈ ಒಟ್ಟು ಪ್ರಕ್ರಿಯೆಯ ಎಲ್ಲ ಸಂಕಷ್ಟವನ್ನೂ ನಿವಾರಿಸಿದ್ದು `ಕ್ಯಾಂಪಸ್ ಸೆಲೆಕ್ಷನ್'.

ಇದು ಪ್ರಸಿದ್ಧ ಎಂಜಿನಿಯರಿಂಗ್ ಕಾಲೇಜುಗಳ ಕಿರೀಟಕ್ಕೆ ಮತ್ತೊಂದು ಗರಿಯಾಯಿತು. ತಮ್ಮ  ಕಾಲೇಜಿಗೆ ದೊಡ್ಡ ದೊಡ್ಡ ಕಂಪೆನಿಗಳು ಕ್ಯಾಂಪಸ್ ಸೆಲೆಕ್ಷನ್‌ಗೆ ಬರುತ್ತವೆ ಎಂಬುದೂ ಆ ಕಾಲೇಜುಗಳ ಆಕರ್ಷಣೆಗೆ ಕಾರಣವಾಯಿತು. ಪಿ.ಯು.ಸಿ.ಯಲ್ಲಿ ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಪ್ರಥಮ ಆಯ್ಕೆಯ ಕಾಲೇಜುಗಳಿಗೆ ಪ್ರಸಿದ್ಧ ಕಂಪೆನಿಗಳು ಮೊದಲು ಲಗ್ಗೆ ಇಟ್ಟವು.

ಅವರು ಒಂದಷ್ಟು ವಿದ್ಯಾರ್ಥಿಗಳನ್ನು `ಬುಟ್ಟಿಗೆ' ಹಾಕಿಕೊಂಡ ಬಳಿಕ ಇತರ ಕಂಪೆನಿಗಳು ಸಹ ಅದೇ ದಾರಿ ಹಿಡಿದವು. ಇದರಿಂದಾಗಿ ಅದೃಷ್ಟ ಉಳ್ಳವರು ಮೊದಲು ಆಯ್ಕೆಯಾಗಿ ಬೀಗಿದರೆ ಎರಡನೇ ಅದೃಷ್ಟದವರು, ಮೂರನೇ ಅದೃಷ್ಟದವರು ಎಂಬ ಸ್ಥರ ಭೇದಗಳಲ್ಲಿ ವಿದ್ಯಾರ್ಥಿಗಳ ಹೊಸ ಗುಂಪುಗಳು ರೂಪುಗೊಳ್ಳತೊಡಗಿದವು.ಕ್ಯಾಂಪಸ್‌ನಲ್ಲಿ ಆಯ್ಕೆಯ ಅವಕಾಶ ಪಡೆಯದವರಂತೂ ನತದೃಷ್ಟರೆಂದು ಪರಿಗಣಿತವಾದರು. ಅಂತಹವರಲ್ಲಿ ಕೆಲವರು ತಾವೇ ಕಲಿತ ಕಾಲೇಜುಗಳಲ್ಲಿ ಉಪನ್ಯಾಸಕರಾದರು.

ಮುಂದೆ ಕಂಪೆನಿಗಳು ತಮ್ಮ ಆಡಳಿತಾತ್ಮಕ ಕಚೇರಿಯ ಹುದ್ದೆಗಳಿಗೂ ಬಿ.ಎ, ಬಿ.ಕಾಂ ಮಾಡಿದ ವಿದ್ಯಾರ್ಥಿಗಳನ್ನು `ಕ್ಯಾಂಪಸ್ ಸೆಲೆಕ್ಷನ್' ಮೂಲಕವೇ ಆಯ್ಕೆ ಮಾಡಿಕೊಳ್ಳತೊಡಗಿದವು. ಆದರೆ ಇಲ್ಲಿ ಅವು ಗ್ರಾಮೀಣ ಕಾಲೇಜುಗಳಿಗೆ ಆದ್ಯತೆ ನೀಡಿದವು. ಏಕೆಂದರೆ ಹಳ್ಳಿಯಿಂದ ಬಂದವರೇ ನಿಷ್ಠೆಯಿಂದ ಕೆಲಸ ಮಾಡುವವರು ಎಂಬುದು ಅವುಗಳ ಸ್ವಾನುಭವವಾಗಿತ್ತು.

ಇದೆಲ್ಲ ಮುಂದುವರಿದು ಇಂದು `ಉದ್ಯೋಗ ಮೇಳ'ಗಳೇ ನಡೆಯುತ್ತಿವೆ. ಸರ್ಕಾರವೂ ಇದಕ್ಕೆ ಪ್ರಾಯೋಜನೆ ನೀಡುತ್ತಿದೆ. ಹೀಗೆ `ಕ್ಯಾಂಪಸ್ ಸೆಲೆಕ್ಷನ್' ಅನೇಕರಿಗೆ ಬದುಕಿನ ಮಾರ್ಗ ಕಂಡುಕೊಳ್ಳಲು ಸುಲಭದ ಹಾದಿಯಾದರೆ, ಇನ್ನು ಅನೇಕರನ್ನು ಆಸೆಯ ಮಜಲಿನ ಅಂಚಿಗೆ ತಂದು ನಿಲ್ಲಿಸುತ್ತದೆ. ಇನ್ನುಳಿದವರ ಪಾಲಿಗೆ ನಿರಾಸೆಯ ಕಾರ್ಮೋಡ ಕವಿದಿರುತ್ತದೆ.

ಕಳೆದ ಹತ್ತಾರು ವರ್ಷಗಳಿಂದ ತೊಡಗಿ ಇತ್ತೀಚಿನ ವರ್ಷಗಳವರೆಗೂ ಈ ಪ್ರಕ್ರಿಯೆ ಚೆನ್ನಾಗಿಯೇ ಸಾಗಿತ್ತು. ಈಗಲೂ `ಕ್ಯಾಂಪಸ್ ಸೆಲೆಕ್ಷನ್' ನಡೆಯುತ್ತದೆ. ಮೊದಲು ಬಂದ ದೊಡ್ಡ ಕಂಪೆನಿಗಳಿಗೆ ಆಯ್ಕೆಯಾದವರು ನಿರಾಳರಾಗುತ್ತಾರೆ. ನಂತರ ಬಂದ ಕಂಪೆನಿಗಳು ಇನ್ನು ಕೆಲವರ ಪಾಲಿಗೆ ಆಸರೆಯ ಭರವಸೆಯನ್ನು ನೀಡುತ್ತವೆ. ಅಂತಿಮ ಪರೀಕ್ಷೆ ಮುಗಿದ ಬಳಿಕ ಕೆಲಸಕ್ಕೆ ಅಥವಾ ತರಬೇತಿಗೆ ಸೇರುವ ದಿನಾಂಕ ತಿಳಿಸುವುದಾಗಿ ಕಂಪೆನಿಗಳು ಹೇಳಿರುತ್ತವೆ.

ಆದರೆ ಈಗ ಈ ದಿನಾಂಕಗಳು ಮುಂದೆ ಹೋಗುತ್ತಲೇ ಇವೆ. `ಕ್ಯಾಂಪಸ್ ಸೆಲೆಕ್ಷನ್'ನಲ್ಲಿ ಆಯ್ಕೆಯಾಗದವರು ಬೇರೆಲ್ಲೋ ಯತ್ನಿಸಿ ಉದ್ಯೋಗ ಸೇರಿ ಖುಷಿಯಾಗಿದ್ದರೆ, ಸೇರ್ಪಡೆ  ದಿನಾಂಕಕ್ಕೆ ಕಾಯುವವರ ಬೇಗುದಿಯ ಬಿಸಿ ಏರುತ್ತಲೇ ಇರುತ್ತದೆ. ಕಳೆದ ಜುಲೈನಲ್ಲಿ ಸೇರುವ ದಿನಾಂಕ ಪಡೆದವರು ಅಕ್ಟೋಬರ್ ಕಳೆದು ಮುಂದಿನ ಮೇ ತಿಂಗಳವರೆಗೂ ಕಾಯಬೇಕೆಂಬ ಸೂಚನೆ ಬಂದರೆ ಹೇಗನ್ನಿಸಬಹುದು? ಬಹುತೇಕರು ಬೇರೆಡೆಯೂ ಕೆಲಸಕ್ಕೆ ಯತ್ನಿಸದಿರುವುದರಿಂದ ಅವರಿಗೆ ಕಾಯದೇ ನಿರ್ವಾಹವಿರದು.

`ಕ್ಯಾಂಪಸ್ ಸೆಲೆಕ್ಷನ್' ಆದ ಬಳಿಕ ಸಾಮಾನ್ಯವಾಗಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಆಸೆಯನ್ನೂ ಬಿಟ್ಟಿರುತ್ತಾರೆ. ಹಾಗಾಗಿ ಅವರ ಕಲಿಕೆಯ ನಿರ್ವಹಣೆಯ ಮಟ್ಟ ಸ್ಥಿರವಾಗುತ್ತದೆ ಅಥವಾ ಇಳಿಯುತ್ತದೆ. ಸ್ಪರ್ಧಾತ್ಮಕ ಕಲಿಕೆಯ ಗುಣ ಮುಂದುವರಿಯುವುದಿಲ್ಲ. ಹೀಗಾಗಿ ಅಂತಿಮ ಪರೀಕ್ಷೆ ಕಳೆದು ಕೆಲಸದ `ಆದೇಶ ಪತ್ರ' ಬರುವ ನಡುವಿನ ದಿನಗಳು ಬಹುತೇಕರಿಗೆ ಸುಮ್ಮನೆ ಕಾಲ ಕಳೆಯುವ ಅಥವಾ `ಮಜಾ ಉಡಾಯಿಸುವ' ದಿನಗಳಾಗಿ ಕಾಣುತ್ತವೆ.ನೆಂಟರಿಷ್ಟರಲ್ಲಿಗೆ ಹೋಗಿ ಬರುವುದು, ಪ್ರವಾಸ ತೆರಳುವುದು, ಸಿನಿಮಾ- ಟಿ.ವಿ, ಕಂಪ್ಯೂಟರ್ ನೋಡಿಕೊಂಡು ಸಮಯ ಕಳೆಯುವುದು ನಡೆದಿರುತ್ತದೆ. ಹೀಗೆ ಕೈಯಿಂದ ಜಾರಿ ಹೋಗುತ್ತಿರುವ  ಸಮಯ ತಾವು ಕಳೆದುಕೊಳ್ಳುತ್ತಿರುವ ಅವಕಾಶಗಳಿಗೆ ಸಮನಾಗುತ್ತದೆ. ಎಂ.ಟೆಕ್ ಮಾಡದ ವಿನಾ ಕಾಲೇಜು ಉಪನ್ಯಾಸಕರಾಗುವುದೂ ಉಪಯೋಗಕ್ಕೆ ಬಾರದು.

ಮಾನಸಿಕ ಒತ್ತಡಕ್ಕೆ ಒಳಗಾಗಲು, ಉದ್ಯೋಗಕ್ಕೆ ಆಯ್ಕೆಯಾಗಿಯೂ ನಿರುದ್ಯೋಗಿಯಾಗಿ ಕುಳಿತುಕೊಳ್ಳುವುದಕ್ಕಿಂತ ಬೇರೆ ಕಾರಣ ಬೇಕೆ? ಅಂತಹವರ ಪಾಲಿಗೆ `ಕ್ಯಾಂಪಸ್ ಸೆಲೆಕ್ಷನ್' ಎಂಬುದೊಂದು ಪಾಶ ಎನಿಸುವುದಿಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry