ಗುರುವಾರ , ಅಕ್ಟೋಬರ್ 17, 2019
22 °C

ಕ್ಯಾಟ್ ಪರೀಕ್ಷೆ ಫಲಿತಾಂಶ ಪ್ರಕಟ

Published:
Updated:

ಬೆಂಗಳೂರು: ಭಾರತೀಯ ನಿರ್ವಹಣಾ ಸಂಸ್ಥೆಗಳ (ಐಐಎಂ) ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಕ್ಯಾಟ್) ಒಟ್ಟು ಒಂಬತ್ತು ವಿದ್ಯಾರ್ಥಿಗಳು ಶೇಕಡ 100ರಷ್ಟು ಅಂಕ ಗಳಿಸಿದ್ದಾರೆ. ಆದರೆ ಬೆಂಗಳೂರಿನ ಯಾವುದೇ ವಿದ್ಯಾರ್ಥಿ ಈ ಸಾಧನೆ ಮಾಡಿಲ್ಲ. ಒಟ್ಟು 1,800 ವಿದ್ಯಾರ್ಥಿಗಳು ಶೇಕಡ 90 ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದಾರೆ.13 ಐಐಎಂಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಕಳೆದ ಅಕ್ಟೋಬರ್ 22ರಿಂದ ನವೆಂಬರ್ 18ರವರೆಗೆ ದೇಶದಾದ್ಯಂತ 36 ಕೇಂದ್ರಗಳಲ್ಲಿ ಕ್ಯಾಟ್ ಪರೀಕ್ಷೆ ನಡೆದಿತ್ತು. ನೋಂದಾಯಿಸಿಕೊಂಡಿದ್ದ 2.06 ಲಕ್ಷ ವಿದ್ಯಾರ್ಥಿಗಳ ಪೈಕಿ 1.85 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಪರೀಕ್ಷೆಯ ಸಂಚಾಲಕರಾದ ಪ್ರೊ. ಜಾನಕಿರಾಮನ್ ಮೂರ್ತಿ ತಿಳಿಸಿದರು. ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ.ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನಗಳು ಇನ್ನಷ್ಟೇ ನಡೆಯಬೇಕಿವೆ. ಪ್ರತಿಯೊಂದು ಐಐಎಂ ಕೂಡ ತನ್ನದೇ ಆದ ಪ್ರವೇಶ ಪ್ರಕ್ರಿಯೆ ಅಳವಡಿಸಿಕೊಂಡಿದ್ದು, ಇವು ಮಾರ್ಚ್ ಅಂತ್ಯದ ವೇಳೆಗೆ ಮುಗಿಯುವ ನಿರೀಕ್ಷೆ ಇದೆ.ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅರಿತ್ರ ಚಕ್ರವರ್ತಿ ಅವರು ಶೇಕಡ 99.7ರಷ್ಟು ಅಂಕ ಗಳಿಸಿದ್ದಾರೆ.

Post Comments (+)