ಕ್ಯಾನ್ಸರ್ ತಡೆಗೆ ಆರಂಭದ ತಪಾಸಣೆ

7

ಕ್ಯಾನ್ಸರ್ ತಡೆಗೆ ಆರಂಭದ ತಪಾಸಣೆ

Published:
Updated:

ಕ್ಯಾನ್ಸರ್ ತಡೆಗಟ್ಟಲು ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ ದೇಶದ ಯಶಸ್ವಿ ಕಾರ್ಯಕ್ರಮವಾಗಿದೆ. ಇದಕ್ಕಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕ್ಯಾನ್ಸರ್ ಹೊಡೆದೋಡಿಸಲು ಆರು ಅಂಶಗಳ ಸೂತ್ರವನ್ನು ಸಿದ್ಧಪಡಿಸಲಾಗಿದೆ.

 

ತಡೆಗಟ್ಟುವುದು, ಆರಂಭಿಕ ಪತ್ತೆ, ತಪಾಸಣೆ, ಚಿಕಿತ್ಸೆ ಮತ್ತು ಉಪಶಮನ ಹಾಗೂ ಈ ಐದು ಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಆರನೇ ಸೂತ್ರವಾಗಿದೆ.ಕ್ಯಾನ್ಸರ್ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಪರಿಣಾಮಕಾರಿ ಮತ್ತು ದೀರ್ಘಕಾಲಿಕ ಹಾಗೂ ಹೆಚ್ಚು ವೆಚ್ಚವಿಲ್ಲದೆ ಅಳವಡಿಸಿಕೊಳ್ಳುವ ಸರ್ವಕಾಲಿಕ ಸ್ವಯಂ ನಿಯಂತ್ರಣ ತಂತ್ರವಾಗಿದೆ. ಹಾಗೆಯೇ, ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಬದಲಾವಣೆಗಳು ಸಹ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ತಂಬಾಕು: ತಂಬಾಕಿನ ಬಳಕೆ ಅಪಾಯಕಾರಿ ಕ್ಯಾನ್ಸರ್‌ಗೆ ಸ್ವತಃ ಆಮಂತ್ರಣ ನೀಡಿದಂತೆ. ವಿಶ್ವದಾದ್ಯಂತ ಪ್ರತಿ ವರ್ಷ ಕ್ಯಾನ್ಸರ್‌ನಿಂದ ಸಾವನ್ನಪ್ಪುವ ಪೈಕಿ ಶೇ. 22ರಷ್ಟು ತಂಬಾಕು ಸಂಬಂಧಿತ ಕ್ಯಾನ್ಸರ್ ಆಗಿರುತ್ತವೆ.

 

ಧೂಮಪಾನದಿಂದ ಶ್ವಾಸಕೋಶ, ಅನ್ನನಾಳ, ಧ್ವನಿಪೆಟ್ಟಿಗೆ, ಬಾಯಿ, ಗಂಟಲು,  ಮೂತ್ರಪಿಂಡ (ಕಿಡ್ನಿ), ಮೂತ್ರಕೋಶ, ಮೇದೋಜೀರಕ ಗ್ರಂಥಿ, ಹೊಟ್ಟೆ ಮತ್ತು ಗರ್ಭಕೊರಳು ಸೇರಿದಂತೆ ಹಲವಾರು ಅಂಗಗಳಿಗೆ ಕ್ಯಾನ್ಸರ್ ಹರಡಲು ಕಾರಣವಾಗುತ್ತದೆ. ಧೂಮಪಾನ ಮಾಡದಿದ್ದರೂ, ಇತರರು ಹೊರಬಿಡುವ ಧೂಮವನ್ನು ಸೇವಿಸುವವರಲ್ಲೂ ಶ್ವಾಸಕೋಶ ಸಂಬಂಧಿತ ಕ್ಯಾನ್ಸರ್ ಬರುತ್ತದೆ.ಹೊಗೆಯಾಡದ ತಂಬಾಕಿನಿಂದ ಅಂದರೆ, ಬಾಯಿ ಇಲ್ಲವೆ ಮೂಗಿನ ಮೂಲಕ ತೆಗೆದುಕೊಳ್ಳುವ, ಜಿಗಿಯುವ ತಂಬಾಕು ಅಥವಾ ನಶ್ಯ ಬಾಯಿ, ಅನ್ನನಾಳ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಆಹಾರದ ಅಂಶಗಳು,  ಅಧಿಕ ತೂಕ: ಸಮತೋಲಿತ ಮತ್ತು ಪಥ್ಯದಿಂದ ಕೂಡಿರುವ ಆಹಾರ ಸೇವನೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಧಿಕ ಆಹಾರ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ. ಇದು ಕೊನೆಗೆ ಬೊಜ್ಜಿಗೆ ಮೂಲವಾಗುತ್ತದೆ.ಇದರಿಂದ ಅನ್ನನಾಳ, ಸ್ತನ, ಹೊಟ್ಟೆ ಮತ್ತು ಮೂತ್ರಪಿಂಡ ಸಂಬಂಧಿತ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆಹಾರದಲ್ಲಿ ಅಧಿಕ ಪ್ರಮಾಣದಲ್ಲಿ ತರಕಾರಿ ಮತ್ತು ಹಣ್ಣು ಸೇವಿಸುವುದರಿಂದ ಬಹುತೇಕ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.ನಿಯಮಿತ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ದೇಹ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಆರೋಗ್ಯಕರ ಆಹಾರ ಸೇವನೆಯಿಂದ ಕ್ಯಾನ್ಸರ್ ತಗಲುವ ಸಂಭವನೀಯ ಸಾಧ್ಯತೆಗಳನ್ನು ನಿಯಂತ್ರಿಸಿಕೊಳ್ಳಬಹುದು.

ಮದ್ಯದ ಬಳಕೆ: ಮದ್ಯಪಾನದಿಂದ ಕ್ಯಾನ್ಸರ್‌ನ ಸಾಧ್ಯತೆ ದ್ವಿಗುಣಗೊಳ್ಳುತ್ತದೆ. ಕಂಠನಾಳ, ಧ್ವನಿಪೆಟ್ಟಿಗೆ, ಅನ್ನನಾಳ, ಪಿತ್ತಜನಕಾಂಗ ಮತ್ತು ಸ್ತನ ಕ್ಯಾನ್ಸರ್‌ನ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

 

ಸೋಂಕು: ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಕ್ಯಾನ್ಸರ್ ಸಂಬಂಧಿತ ಸಾವಿನ ಪೈಕಿ ಶೇ 22ರಷ್ಟು ಸೋಂಕಿನಿಂದ ಸಂಭವಿಸುತ್ತವೆ. ಔದ್ಯೋಗಿಕ ರಾಷ್ಟ್ರಗಳಲ್ಲಿ ಈ ಪ್ರಮಾಣ ಶೇ 6ರಷ್ಟಿದೆ. ವೈರಲ್ ಹೆಪಟೈಟಿಸ್ ಬಿ ಮತ್ತು ಯಕೃತ್ತಿನ ಸಿ ಹಾಗೂ ಮಾನವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸೋಂಕು ಗರ್ಭಕೊರಳಿನ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಸೋಂಕು ತಗಲದಂತೆ ಕಾಪಾಡಿಕೊಳ್ಳುವುದು ಮತ್ತು ಲಸಿಕೆಗಳನ್ನು ಪಡೆದುಕೊಳ್ಳುವುದು ಇದರ ನಿಯಂತ್ರಣಕ್ಕೆ ಸಮಂಜಸ ಪರಿಹಾರವೆನಿಸಿದೆ.

ವಿಕಿರಣ ಮತ್ತು ಪರಿಸರ ಮಾಲಿನ್ಯ:

ಅತಿ ನೇರಳೆ (ಯುವಿ) ವಿಕಿರಣ ಮತ್ತು ಅದರಲ್ಲೂ ನಿರ್ದಿಷ್ಟವಾಗಿ ಸೌರ ವಿಕಿರಣ (ಸೋಲಾರ್ ರೇಡಿಯೇಷನ್) ಮಾನವರಿಗೆ ಅಪಾಯಕಾರಿ ಎನಿಸಿವೆ. ಇದರಿಂದ ಚರ್ಮ ಸಂಬಂಧಿತ ಬಹುತೇಕ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಬಾಸಲ್ ಸೆಲ್ ಕಾರ್ಸಿನೋಮ (ಬಿಸಿಸಿ) ಮತ್ತು ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಮತ್ತು ಮೆಲನೋಮ ಚರ್ಮದ ಕ್ಯಾನ್ಸರ್‌ಗೆ ಮೂಲಕಾರಣ.ಇವುಗಳಿಗೆ ರಕ್ಷಣೆ ಪಡೆದುಕೊಳ್ಳುವುದು ಇದರ ನಿವಾರಣೆಯಲ್ಲಿ ಮಹತ್ವದ್ದಾಗಿದೆ. ಹಾಗೆಯೇ, ಪರಿಸರ ಮಾಲಿನ್ಯ ಮತ್ತು ಆಹಾರ ಕಲಬೆರಕೆ ಸಹ ಹಲವು ರೀತಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಕ್ಯಾನ್ಸರ್ ಆರಂಭಿಕ ಪತ್ತೆ: ಆರಂಭದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿದಲ್ಲಿ ಅದು ಯಶಸ್ವಿ ಚಿಕಿತ್ಸೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್‌ನ ನಿವಾರಣೆಯಲ್ಲಿ ಎರಡು ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಒಂದು ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಹಚ್ಚುವುದು ಮತ್ತು ನಿಯಮಿತ ತಪಾಸಣೆಗೆ ಒಳಗಾಗಿ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು.ಕ್ಯಾನ್ಸರ್‌ನ ಕೆಲವೊಂದು ಸಾಮಾನ್ಯ ಲಕ್ಷಣಗಳೆಂದರೆ, ಗಂಟುಗಳು, ಹುಣ್ಣುಗಳು ಬೇಗನೆ ಮಾಯದಿರುವುದು, ಅಸಹಜ ರಕ್ತಸ್ರಾವ, ಮರುಕಳಿಸುವ ಅಜೀರ್ಣ ಮತ್ತು ದೇಹದ ಮೇಲುಭಾಗ ದೀರ್ಘಕಾಲ ಒರಟಾಗಿರುವುದು ಸೇರಿವೆ. ಸ್ತನ, ಗರ್ಭಕೊರಳು, ಬಾಯಿ, ಧ್ವನಿಪೆಟ್ಟಿಗೆ, ಕರುಳು ಮತ್ತು ಗುದನಾಳ ಹಾಗೂ ಚರ್ಮದ ಕ್ಯಾನ್ಸರ್ ಆರಂಭದಲ್ಲೇ ಪತ್ತೆಯಾದಲ್ಲಿ ಚಿಕಿತ್ಸೆಯೂ ಪರಿಣಾಮಕಾರಿಯಾಗಿರುತ್ತದೆ.

ತಪಾಸಣೆ: ಕೆಲವೊಂದು ಬಗೆಯ ಕ್ಯಾನ್ಸರ್‌ಗಳನ್ನು ಸ್ವಯಂ ಪರೀಕ್ಷೆಯಿಂದಲೇ ಅರಿತುಕೊಳ್ಳಬಹುದು, ಆದರೆ, ರೋಗ ಲಕ್ಷಣಗಳೇ ಇಲ್ಲದಿದ್ದಾಗ, ಅದಕ್ಕಾಗಿ ವೈದ್ಯರ ಬಳಿ ತೆರಳುವುದು ಅನಿವಾರ್ಯ ಮತ್ತು ಅಗತ್ಯ.

 

ಸ್ತನ ಕ್ಯಾನ್ಸರ್‌ನ ಪತ್ತೆಗಾಗಿ ಮ್ಯೋಮೋಗ್ರಫಿ ಮತ್ತು ಗರ್ಭಕೊರಳಿನ ಕ್ಯಾನ್ಸರ್‌ನ ಪತ್ತೆಗಾಗಿ ಸೈಟಾಲಜಿ ಸ್ಕ್ರೀನಿಂಗ್ ಮತ್ತು ಪ್ಯಾಪ್ ಸ್ಮಿಯರ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ.

ಕ್ಯಾನ್ಸರ್ ಚಿಕಿತ್ಸೆ: ಯಾವುದೇ ರೀತಿಯ ಕ್ಯಾನ್ಸರ್ ಆಗಿರಲಿ ಅದು ಪತ್ತೆಯಾದ ತಕ್ಷಣ ಅದರ ನಿವಾರಣೆಗಾಗಿ ಚಿಕಿತ್ಸೆಯನ್ನು ಪ್ರಾರಂಭಿಸುವುದು ಇಲ್ಲವೇ ಇನ್ನೂ ಹೆಚ್ಚು ದಿನ ವ್ಯಕ್ತಿ ಬದುಕುವಂತೆ ಮಾಡುವುದು ಚಿಕಿತ್ಸೆಯ ಪ್ರಧಾನ ಗುರಿಯಾಗಿರುತ್ತದೆ.ಕ್ಯಾನ್ಸರ್‌ನ ಪರಿಣಾಮಕಾರಿ ಮತ್ತು ದಕ್ಷ ಚಿಕಿತ್ಸೆಗಾಗಿ ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

* ಚಿಕಿತ್ಸೆಯನ್ನು ನಿರಂತರವಾಗಿ ಸಮಾನ ರೀತಿಯಲ್ಲಿ ಒದಗಿಸುವುದು.  ಇದು ಆರಂಭದಲ್ಲೇ ಪತ್ತೆ ಹಚ್ಚುವುದಕ್ಕೆ ಜೋಡಣೆಗೊಂಡಿರುತ್ತವೆ.* ಗುಣಮಟ್ಟದ ಮತ್ತು ಬಹುವಿಧಾನದ ಚಿಕಿತ್ಸೆ. ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾಗದಿದ್ದ ಪಕ್ಷದಲ್ಲಿ ಈ ಮಾದರಿಯ ಚಿಕಿತ್ಸೆಯು ಸೂಕ್ತವೆನಿಸುತ್ತದೆ. ಆದರೆ, ಮಕ್ಕಳಲ್ಲಿ ಕಂಡು ಬರುವ ತೀವ್ರ ಸ್ವರೂಪದ ಲ್ಯುಕೇಮಿಯಾ ಇದ್ದ ಪಕ್ಷದಲ್ಲಿ ಅಧಿಕ ಕಾಲ ಮಕ್ಕಳು ಬದುಕುವಂತೆ ಮಾಡಲು ಪ್ರಯತ್ನಿಸಲಾಗುವುದು.ತೀವ್ರತೆಯನ್ನು ಕಡಿಮೆ ಮಾಡುವ ವಿಧಾನ

ಕ್ಯಾನ್ಸರ್‌ನ ನಿಯಂತ್ರಣದಲ್ಲಿ ಕುಟುಂಬದವರ ಕಾಳಜಿ ಅತ್ಯಂತ ಅವಶ್ಯಕ ಭಾಗವಾಗಿರುತ್ತದೆ. ಇದನ್ನು ಸರಳವಾಗಿ ಅಧಿಕ ಖರ್ಚಿಲ್ಲದೆ ಒದಗಿಸಬಹುದು. ಭಾರತದಲ್ಲಿ ರೋಗಿಯ ಕಾಳಜಿಯಲ್ಲಿ ಕುಟುಂಬದ ಪಾತ್ರ ಮಹತ್ವದ್ದಾಗಿರುತ್ತದೆ.ದಿನ ನಿತ್ಯ ವ್ಯಾಯಾಮದಿಂದ ಕೂಡಿದ ಲವಲವಿಕೆ ಜೀವನ ಮತ್ತು ಹೆಚ್ಚು ಹಣ್ಣು ತರಕಾರಿಗಳಿಂದ ಕೂಡಿರುವ ಸಮತೋಲಿತ ಆಹಾರ ಮತ್ತು ಧೂಮಪಾನ, ಮದ್ಯ ಮತ್ತು ತಂಬಾಕು ಇವುಗಳನ್ನು ಬಿಟ್ಟು ಸ್ವಸ್ಥ್ಯ ಜೀವನ ನಡೆಸುವುದರಿಂದ ಕ್ಯಾನ್ಸರ್‌ನ ಸಾಧ್ಯತೆಗಳನ್ನು ನಿಮ್ಮಿಂದ ದೂರವಿಡಬಹುದು.

(ಸರ್ಜಿಕಲ್ ಆಂಕಾಲಜಿಸ್ಟ್. ಸಂಪರ್ಕ ಸಂಖ್ಯೆ:  1800 425 6626)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry