ಕ್ಯಾನ್‌ವಾಸ್‌ನಲ್ಲಿ ಕಲಾವಿದರ ಪ್ರತಿಭಟನೆ

7
‘ಎತ್ತಿನ ಹೊಳೆ ಯೋಜನೆಯಿಂದ ಜಿಲ್ಲೆಗೆ ಬರಲಿದೆ ಬರ’

ಕ್ಯಾನ್‌ವಾಸ್‌ನಲ್ಲಿ ಕಲಾವಿದರ ಪ್ರತಿಭಟನೆ

Published:
Updated:

ಮಂಗಳೂರು:  ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಮೇಲೆ ಹಾನಿಯಾಗುವುದು ಮಾತ್ರವಲ್ಲದೆ ದಕ್ಷಿಣ ಕನ್ನಡದಲ್ಲಿ ಕುಡಿಯುವ ನೀರಿನ ಅಭಾವ ಕೂಡ ತಲೆದೋರಲಿದೆ ಎಂದು ಕುದುರೆಮುಖ ವನ್ಯಜೀವಿ ಪ್ರತಿಷ್ಠಾನದ ಸಂಚಾಲಕ ನಿರೇನ್‌ ಜೈನ್‌ ಹೇಳಿದರು.ಅವರು ಮಂಗಳವಾರ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮತ್ತು ಕರಾವಳಿ ಚಿತ್ರ ಕಲಾವಿದರ ಚಾವಡಿ ವತಿಯಿಂದ ನಡೆದ ‘ಜನ ಜಲ ಜಾಗೃತಿ’ ಕಾರ್ಯಕ್ರಮದಲ್ಲಿ ಎತ್ತಿನ ಹೊಳೆ ಯೋಜನೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿ ಮಾತನಾಡಿದರು.ಎತ್ತಿನ ಹೊಳೆ ಯೋಜನೆಯ ಪ್ರಕಾರ ಪಶ್ಚಿಮ ಘಟ್ಟದಲ್ಲಿ ನಡೆಯುವ ಕಾಮಗಾರಿಗಳು ಮತ್ತು ಅದರಿಂದ ಅಲ್ಲಿನ ಸೂಕ್ಷ್ಮ ಜೀವ ವೈವಿಧ್ಯಕ್ಕೆ ಧಕ್ಕೆಯಾಗುವ ಪ್ರಮಾಣವನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು. ಪಶ್ಚಿಮ ಘಟ್ಟದ ಶೋಲಾ ಕಾಡುಗಳು ನದಿ ಮೂಲಕ್ಕೆ ಎಷ್ಟು ಅಗತ್ಯ ಎಂಬುದನ್ನು ಪ್ರಾಸ್ತಾವಿಕ ಭಾಷಣದಲ್ಲಿ ಕಲಾವಿದ ದಿನೇಶ್‌ ಹೊಳ್ಳ ವಿವರಿಸಿದರು.ಕಾರ್ಯಕ್ರಮದಲ್ಲಿ ಅಲೋಶಿಯಸ್‌ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರೊ. ಸುರೇಶ್‌ನಾಥ್‌, ಡಾ. ಕೆ. ವಿ. ನಾಗಲಕ್ಷ್ಮಮ್ಮ ಉಪಸ್ಥಿತರಿದ್ದರು. ಈ ಸಂದಭರ್ದಲ್ಲಿ ಕಾಲೇಜು ಆವರಣದ ಹೊರಭಾಗದಲ್ಲಿ ಸುಮಾರು 50 ಮೀಟರ್‌ ಉದ್ದದ ಕ್ಯಾನ್‌ವಾಸ್‌ನಲ್ಲಿ ಕರಾವಳಿಯ 20ಕ್ಕೂ ಹೆಚ್ಚು ಕಲಾವಿದರು ‘ಪಶ್ಚಿಮ ಘಟ್ಟದ ಮಹತ್ವ–ನೇತ್ರಾವತಿಯ ಅಗತ್ಯ’ ಎಂಬ ವಿಷಯದ ಬಗ್ಗೆ ಚಿತ್ರಕಲಾಕೃತಿಗಳನ್ನು ರಚಿಸಿದರು. ಗಣೇಶ್‌ ಸೋಮಯಾಜಿ, ರಾಜೇಂದ್ರ ಕೇದಿಗೆ, ಹರೀಶ್‌ ಕೊಡಿಯಾಲ್‌ಬೈಲ್‌, ಸ್ವಪ್ನ ನೊರೊನ್ಹ, ವೀಣಾ ಶ್ರೀನಿವಾಸ್‌, ಹರೀಶ್‌ ಮರ್ಣೆ, ಪ್ರಾಣೇಶ್‌, ಅಜಯ್‌, ನವೀನ್‌ ಕೋಡಿಕಲ್‌, ಪುನೀಕ್‌, ಜಯಶ್ರೀ, ಸುಧಾ ನಾಯಕ್‌, ಅನಿಲ್‌ ದೇವಾಡಿಗ, ಪ್ರಮೋದ್‌ ರಾಜ್‌, ಜಾನ್‌ ಚಂದ್ರನ್‌, ಸಂತೋಷ್‌ ಅಂದ್ರಾದೆ, ನಾರಾಯಣ್‌, ಜೀವನ್‌ ಸಾಲಿಯಾನ್‌ ಕಲಾಕೃತಿಗಳನ್ನು ರಚಿಸಿದರು.ಕಾಲೇಜು ವಿದ್ಯಾರ್ಥಿಗಳು ಮತ್ತು ಕಲಾವಿದರು ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಬೃಹತ್‌ ಕ್ಯಾನ್‌ವಾಸ್‌ನಲ್ಲಿ ಸಹಿ ಹಾಕುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry