ಕ್ಯಾಮರಾನ್ ಹೇಳಿಕೆಗೆ ಸ್ಪಷ್ಟನೆ ಕೇಳಿದ ಭಾರತ

7
ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆಗೆ ಬೆಂಬಲ

ಕ್ಯಾಮರಾನ್ ಹೇಳಿಕೆಗೆ ಸ್ಪಷ್ಟನೆ ಕೇಳಿದ ಭಾರತ

Published:
Updated:

ಲಂಡನ್/ನವದೆಹಲಿ (ಪಿಟಿಐ): ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಳ್ಳುವ ವಿಷಯದಲ್ಲಿ ಭಾರತದ ಬೆಂಬಲವೂ ಇದೆ ಎಂಬ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ನವದೆಹಲಿಯು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಈ ಬಗ್ಗೆ ಲಂಡನ್‌ನಿಂದ ಸ್ಪಷ್ಟನೆ ಬಯಸಿದೆ.ಕ್ಯಾಮರಾನ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತವು ಲಂಡನ್ನಿನಲ್ಲಿರುವ ತನ್ನ ಹೈಕಮಿಷನರ್‌ಗೆ ಮತ್ತು ನವದೆಹಲಿಯಲ್ಲಿರುವ ಬ್ರಿಟನ್ ದೂತಾವಾಸಕ್ಕೆ ಪತ್ರ ಬರೆದಿದೆ ಎಂದು ನವದೆಹಲಿ ಮೂಲಗಳು ಮಂಗಳವಾರ ತಿಳಿಸಿವೆ.ಅಚಾತುರ್ಯ- ಬ್ರಿಟನ್ ಸ್ಪಷ್ಟನೆ: ಈ ಮಧ್ಯೆ, `ಆ ಹೇಳಿಕೆಯು ಅಚಾತುರ್ಯದಿಂದ ಆಗಿದೆ ಎಂದು ಬ್ರಿಟನ್ ತಿಳಿಸಿದೆ' ಎಂದು ಮೂಲಗಳು ಹೇಳಿವೆ.`ಪ್ರಧಾನಿ ಅವರು ಸಂಸತ್‌ನಲ್ಲಿ ನೀಡಿದ ಪ್ರತಿಕ್ರಿಯೆಯಲ್ಲಿ ಪ್ರಮಾದವಶಾತ್‌ನಿಂದ ಈ ಹೇಳಿಕೆ ಸೇರಿಕೊಂಡಿದೆ. ಇದು ಹೇಳಿಕೆ ಸಿದ್ಧ ಪಡಿಸುವಾಗ ಆಗಿರುವ ದೋಷ. ಈ ಬಗ್ಗೆ ಪ್ರಧಾನಿ ಅವರ ಕಚೇರಿ ಪರಿಶೀಲಿಸಲಿದೆಯೆಂದು ಬ್ರಿಟನ್ ಹೇಳಿದೆ' ಎಂದೂ  ಮೂಲಗಳು ತಿಳಿಸಿವೆ.ಹಿನ್ನೆಲೆ: ಕಳೆದ ವಾರ ನಡೆದ ಬ್ರಿಟನ್ ಹೌಸ್ ಆಫ್ ಕಾಮನ್ಸ್‌ನ (ಸಂಸತ್ತಿನ ಕೆಳಮನೆ) ತುರ್ತು ಅಧಿವೇಶನದಲ್ಲಿ ಕ್ಯಾಮರಾನ್ ಈ ಹೇಳಿಕೆ ನೀಡಿದ್ದರು.ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಳ್ಳುವ ವಿಷಯವನ್ನು ವಿರೋಧಿಸಿ ಲೇಬರ್ ಪಕ್ಷ ಮಂಡಿಸಿದ್ದ ಗೊತ್ತುವಳಿ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಕ್ಯಾಮರಾನ್, ಸಿರಿಯಾ ವಿರುದ್ಧ ಅಮೆರಿಕ ತಳೆದಿರುವ ನಿಲುವಿಗೆ ಬ್ರಿಟನ್ ಕೂಡ ಕೈಜೋಡಿಸುವ ಅಗತ್ಯವಿದೆ ಎಂದು ಸಂಸದರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು. ಆಗ ಅವರು ಸಿರಿಯಾ ವಿರುದ್ಧ ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿರುವ ರಾಷ್ಟ್ರಗಳ ಪೈಕಿ ಭಾರತವೂ ಸೇರಿದೆ ಎಂದಿದ್ದರು.ಈ ವಿವಾದಾತ್ಮಕ ಹೇಳಿಕೆಯನ್ನು ನೇರವಾಗಿ ಆಕ್ಷೇಪಿಸಿದ ಭಾರತ, `ಸಿರಿಯಾದ ಬಿಕ್ಕಟ್ಟಿಗೆ ಸೇನಾ ಕಾರ್ಯಾಚರಣೆ ಪರಿಹಾರವಲ್ಲ' ಎಂದು ತತಕ್ಷಣದಲ್ಲೇ ಪ್ರತಿಕ್ರಿಯಿಸಿತ್ತು.ಲೇಬರ್ ಪಕ್ಷ ಮಂಡಿಸಿದ್ದ ಗೊತ್ತುವಳಿಯ ಮೇಲೆ ನಡೆದ ಮತದಾನದಲ್ಲಿ ಸರ್ಕಾರಕ್ಕೆ ಹಿನ್ನಡೆ ಕೂಡ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry