ಗುರುವಾರ , ಫೆಬ್ರವರಿ 25, 2021
20 °C
ಕಲಾಪ

ಕ್ಯಾಮೆರಾ ಕಣ್ಣಲ್ಲಿ ರೈತರ ಬದುಕು

ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಕ್ಯಾಮೆರಾ ಕಣ್ಣಲ್ಲಿ ರೈತರ ಬದುಕು

ಬಾನೆತ್ತರಕ್ಕೆ ದೃಷ್ಟಿ ನೆಟ್ಟ ರೈತನ ಕಣ್ಣಲ್ಲಿ ಇಂದಾದರೂ ಮಳೆ ಹನಿ ಭೂಮಿಯ ಒಡಲು ಸೋಕಬಹುದೆಂಬ ಆಶಾಭಾವ. ಕಡೆಗೋಲು ಹಿಡಿದು ಕೂತ ಮಹಿಳೆ ಮನದಲ್ಲಿ ಹೊಲದ ಕಳೆಕಿತ್ತು ಬೆಳೆ ಬೆಳೆಯುವ ಹಂಬಲ. ಬಾಗಿದ ಬೆನ್ನಿನ ಮೇಲೆ ಕೈ ಇರಿಸಿ, ಬಾಗಿಲ ಸಂದಿಯಲಿ ಇಣುಕುವ  ಅಜ್ಜಿಗೆ ಶಾಲೆಗೆ ಹೋದ ಮೊಮ್ಮಗ ಇನ್ನೂ ಬರಲಿಲ್ಲ ಎಂಬ ಚಿಂತೆ.ನೇಗಿಲಿನೊಂದಿಗೆ ಹೊಲದಲ್ಲಿ ನಿಂತ ರೈತ.... ಹಳ್ಳಿಗಾಡಿನ ಈ ಎಲ್ಲಾ ಸುಂದರ ಚಿತ್ರಗಳು ಕಂಡು ಬಂದಿದ್ದು ಎಂ.ಜಿ.ರಸ್ತೆಯಲ್ಲಿರುವ ಮೆಟ್ರೋ ರಂಗೋಲಿ ಆರ್ಟ್ ಗ್ಯಾಲರಿಯಲ್ಲಿ.ರಂಗ್‌ದೇ ಸಂಸ್ಥೆಯು ಆಯೋಜಿಸಿದ್ದ ‘ಮಟ್ಟಿಮನುಶುಲು: ಪೀಪಲ್ ಆಫ್ ದಿ ಸಾಯಿಲ್‌(ಮಣ್ಣಿನ ಮಕ್ಕಳು)’ ಎಂಬ ಹೆಸರಿನ ಈ ಛಾಯಾಚಿತ್ರ ಪ್ರದರ್ಶನದಲ್ಲಿ ಏಳು ಮಂದಿ ಛಾಯಾಗ್ರಾಹಕರು ತಾವು ತೆಗೆದ ಚಿತ್ರವನ್ನು ಪ್ರದರ್ಶಿಸಿದ್ದಾರೆ.ಬೇಸಾಯವನ್ನೇ ಕಸುಬಾಗಿಸಿಕೊಂಡು ಬದುಕುತ್ತಿರುವ ತೆಲಂಗಾಣ ಹಾಗೂ ಮೆಹಬೂಬ್ ನಗರದ ಜನರ ನೈಜ ಬದುಕಿನ ಚಿತ್ರಣವನ್ನು ಇಲ್ಲಿ ನೋಡಬಹುದಾಗಿದೆ.ಈ ಪ್ರದರ್ಶನದಲ್ಲಿ ಸೌರಭ್‌ ಚಟರ್ಜಿ, ಅಭಿನವ್ ಚಟರ್ಜಿ, ಜಾನ್‌ ರಡ್ಕ್ತೆ, ನರೇಶ್ ಕುಮಾರ್ ಮನಿ, ಸರ್ವನ್‌ಪಾಸ್ತಾ, ರಾಮಚಂದಿರನ್‌, ಮುಧುಲಿಕಾ ಜೆ. ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಹಳ್ಳಿ ಜೀವನದ ನೋವು, ನಲಿವು ಸೊಗಡಿನ ಚಿತ್ರಗಳು ಪ್ರದರ್ಶಿತಗೊಂಡಿವೆ.ಈ ಛಾಯಾಚಿತ್ರ ಪ್ರದರ್ಶನದಲ್ಲಿ ಕಂಡುಬಂದ ಚಿತ್ರಗಳೆಲ್ಲವೂ ತೆಲಂಗಾಣದಲ್ಲಿ  ಕಳೆದ ಜೂನ್ 20ರಂದು ನಡೆದ ಛಾಯಾಚಿತ್ರ ಕಾರ್ಯಾಗಾರವೊಂದರಲ್ಲಿ ತೆಗೆದ ಚಿತ್ರಗಳಾಗಿವೆ.  ಈ ಪ್ರದರ್ಶನದ ಇನ್ನೊಂದು ವಿಶೇಷವೆಂದರೆ ಈ ಎಲ್ಲ ಚಿತ್ರಗಳೂ ಕೂಡ ಒಂದೇ ದಿನದಲ್ಲಿ ಸೆರೆ ಹಿಡಿಯಲಾಗಿದೆ. ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಈ ಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದು, ಇಲ್ಲಿ ಮಾರಾಟವಾದ ಚಿತ್ರಗಳ ಹಣವನ್ನು ರೈತ ಉತ್ಪನ್ನ ಕಂಪೆನಿಗಳಿಗೆ ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ‘ಮೊದಲಿನಿಂದಲೂ ನನಗೆ ಜನರ ಮನಸ್ಸಿನಲ್ಲಿ ಬದಲಾವಣೆ ತರುವಂಥ ಚಿತ್ರವನ್ನೂ ತೆಗೆಯಲು ಇಷ್ಟ, ಮನಸ್ಸು ಮುಟ್ಟುವ ಚಿತ್ರಗಳು ಬದಲಾವಣೆಗೆ ದಾರಿಯಾಗಬಹುದು.ಛಾಯಾಚಿತ್ರಗಳು ಮನುಷ್ಯನ ಬದುಕಿನ ರೂಪವನ್ನು ಕಟ್ಟಿಕೊಡುವಂತಿರಬೇಕು. ಆ ಕಾರಣಕ್ಕಾಗಿ ಈ ಬಾರಿ ತೆಲಂಗಾಣದ ರೈತ ಸಮುದಾಯದ ಚಿತ್ರವನ್ನು ಸೆರೆ ಹಿಡಿದಿದ್ದೆ.ಅಲ್ಲದೇ ಇದೇ ಮೊದಲ ಬಾರಿ ರೈತರೊಂದಿಗೆ ಒಡನಾಡಿ ಚಿತ್ರಗಳನ್ನು ಸೆರೆ ಹಿಡಿದಿದ್ದೇನೆ’ ಎಂದು ವೃತ್ತಿ ಛಾಯಾಗ್ರಾಹಕ ಆಗಿರುವ ಸೌರಭ್‌ ಚಟರ್ಜಿ ತಮ್ಮ ಚಿತ್ರದ ಕುರಿತು  ಹೇಳುತ್ತಾರೆ.‘ಛಾಯಾಚಿತ್ರಗಳ ಮೂಲಕ ನೊಂದವರಿಗೆ ಸಮಾಧಾನ ಹೇಳಬೇಕು, ಅಲ್ಲದೇ ನಮ್ಮಿಂದಾದ ಸಹಾಯ ಮಾಡಬೇಕು. ಆ ಕಾರಣಕ್ಕಾಗಿ ನಾನು ಈ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದು. ಇದೇ ಮೊದಲ ಬಾರಿ ನಾನು ರೈತರೊಂದಿಗೆ ಒಡನಾಡಿ ಅವರ ಚಿತ್ರಗಳನ್ನು ತೆಗೆದಿದ್ದು, ನಮ್ಮ ತಂಡದ ಪ್ರತಿಯೊಬ್ಬರು ಕೂಡ ಹಳ್ಳಿ ಜೀವನದ ಪ್ರತಿ ಸೆಲೆಯನ್ನು ಕೂಡ ಚಿತ್ರಿಸಲು ಪ್ರಯತ್ನಿಸಿದ್ದಾರೆ’ ಎನ್ನುತ್ತಾರೆ ಅವರು.ಈ ಪ್ರದರ್ಶನದಲ್ಲಿ ಪ್ರತಿಯೊಂದು ಚಿತ್ರಗಳು ಹಳ್ಳಿಯ ಹಾಗೂ ಬೇಸಾಯಗಾರರ ಜೀವನವನ್ನು ಕಣ್ಣೆದುರು ಕಟ್ಟಿದಂತೆ ಇವೆ. ಎತ್ತುಗಳೊಂದಿಗೆ ಹೊಲ ಊಳುವ ರೈತನ ಮುಖದಲ್ಲಿ ಸಂತಸದ ಹೊನಲು, ಕುರಿ ಮೇಯಿಸುವ ಹೆಂಗಸಿಗೆ ಪೋಟೊಗೆ ಫೋಸು ನೀಡುವ ಖುಷಿ, ಶಾಲೆಯ ಸಮವಸ್ತ್ರದಲ್ಲಿ ಸೈಕಲ್‌ಗೆ ಒರಗಿ ನಿಂತ ಬಾಲಕನಿಗೆ ಇಂದೇನೋ ಶಾಲೆ ಮುಗಿಯಿತು, ನಾಳೆ ಮತ್ತೆ ಹೋಗಬೇಕು ಎಂಬ ಭಾವ, ಬೀದಿಯ ಬದಿಯೊಂದರಲ್ಲಿ ಕುಳಿತ ಮಹಿಳೆಯರ ಗುಂಪೊಂದು ಸದ್ದಿಲ್ಲದೇ ಚರ್ಚೆಯಲ್ಲಿ ತೊಡಗಿತ್ತು. ಅಲ್ಲಿನ ಮಹಿಳೆಯರ ಮುಖದಲ್ಲಿನ  ಭಾವವನ್ನು ಕ್ಯಾಮೆರಾ ಕಣ್ಣಲ್ಲಿ ಭಿನ್ನವಾಗಿ ಸೆರೆ ಹಿಡಿದಿದ್ದಾರೆ.ಪ್ರದರ್ಶನದ ವಿವರ

ಸ್ಥಳ: ಮೆಟ್ರೋ ರಂಗೋಲಿ ಆರ್ಟ್  ಸೆಂಟರ್,

ಎಂ.ಜಿ. ರಸ್ತೆ.

ಸಮಯ: ಬೆಳಿಗ್ಗೆ 10ರಿಂದ 7ರವರೆಗೆ ಈ ಪ್ರದರ್ಶನವು ಆಗಸ್ಟ್‌ 21ರವರೆಗೆ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.