ಭಾನುವಾರ, ಜನವರಿ 26, 2020
18 °C

ಕ್ಯಾಮೆರಾ ತಯಾರಿಕಾ ಸಂಸ್ಥೆ ಕೊಡಾಕ್ ದಿವಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಎಎಫ್ಪಿ): ಶತಮಾನದಿಂದ ಕ್ಯಾಮೆರಾ ಹಾಗೂ ಅದರ ಪರಿಕರಗಳ ತಯಾರಿಯಲ್ಲಿ ತೊಡಗಿಕೊಂಡಿದ್ದ ಅಮೆರಿಕ ಮೂಲದ ಕೊಡಾಕ್ ಕಂಪೆನಿಯು ದಿವಾಳಿಯಾಗಿರುವುದಾಗಿ ಗುರುವಾರ ಹೇಳಿಕೊಂಡಿದೆ.

ಕಂಪೆನಿಯ ಭವಿಷ್ಯದ ಹಿತದೃಷ್ಟಿಯಿಂದ ದಿವಾಳಿ ಘೋಷಣೆಯ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಕಂಪೆನಿಯ ನಿರ್ದೇಶಕರು ಹಾಗೂ ವ್ಯವಸ್ಥಾಪಕ ಮಂಡಳಿಯ ಹಿರಿಯ ಸದಸ್ಯರು ಅಭಿಪ್ರಾಯಕ್ಕೆ ಬಂದ ಬಳಿಕ  ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪೆನಿಯ ಸಿಇಒ ಆಂಟೋನಿಯೊ ಪೆರೆಜ್ ತಿಳಿಸಿದರು.

~ಕಂಪೆನಿಯ ನೌಕರರು, ನಿವೃತ್ತರು, ಸಾಲ ನೀಡಿದವರು ಹಾಗೂ ಪಿಂಚಣಿ ಟ್ರಸ್ಟಿಗಳನ್ನೊಳಗೊಂಡಂತೆ ನಮ್ಮ ಎಲ್ಲಾ ಪಾಲುದಾರರ ಮೌಲ್ಯಗಳನ್ನು ಎತ್ತಿ ಹಿಡಿಯುವುದು ನಮ್ಮ ಮುಂದಿರುವ ಗುರಿ. ಹೀಗಾಗಿ ಸಂಸ್ಥೆಯನ್ನು ಮುನ್ನಡೆಸುವ ಸಲುವಾಗಿ ಸಂಸ್ಥೆಯ ದಿವಾಳಿ ಕಾಯ್ದೆಯ 11ನೇ ಅಧ್ಯಾಯದ ಅಡಿಯಲ್ಲಿ ರಕ್ಷಣೆ ಕೋರಲಾಗಿದೆ~ ಎಂದು ಅವರು ಹೇಳಿದರು.

ಛಾಯಾಚಿತ್ರ ಕ್ಷೇತ್ರಕ್ಕೆ ಕಳೆದ ನೂರು ವರ್ಷಗಳಿಂದ ಪರಿಕರಗಳನ್ನು ನೀಡುತ್ತಾ ತನ್ನದೇ ಆದ ಸೇವೆ ಸಲ್ಲಿಸುತ್ತಾ ಬಂದಿರುವ ಕೊಡಾಕ್, ಡಿಜಿಟಲ್ ಯುಗದಲ್ಲಿ ತನ್ನ ಓಘವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿತ್ತು. 1980ರಲ್ಲಿ ಕಂಪೆನಿಯಲ್ಲಿ ಒಟ್ಟು 1.45 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಆದರೆ 2003ರಿಂದ ಈಗಾಗಲೇ 47 ಸಾವಿರ ನೌಕರರನ್ನು ವಜಾಗೊಳಿಸಿ 13 ತಯಾರಿಕಾ ಘಟಕಗಳನ್ನು ಮುಚ್ಚಿದೆ.

~ನಮ್ಮಲ್ಲಿರುವ ಆರ್ಥಿಕ ಸ್ಥಿತಿಗತಿ ಹಾಗೂ ಕಂಪೆನಿಯ ಬಳಿ ಇರುವ ಕೆಲವು ಯೋಜನೆಗಳನ್ನು ಇನ್ನಷ್ಟು ಹೊಸ ರೀತಿಯಲ್ಲಿ ಅಭಿವೃದ್ಧಿಗೊಳಿಸುವುದು ಕಂಪೆನಿಯ ಮುಂದಿರುವ ಸವಾಲುಗಳು. ಮುಂಬರುವ ದಿನಗಳನ್ನು ನಮ್ಮ ಪಾಲುದಾರರೊಂದಿಗೆ ಹೆಜ್ಜೆ ಹಾಕುತ್ತಾ, ವಿಶ್ವ ಶ್ರೇಣಿ, ಡಿಜಿಟಲ್ ಛಾಯಾಗ್ರಹಣದ ಹೊಸ ಆಯಾಮ ರಚಿಸಬೇಕಾಗಿದೆ~ ಎಂದು ಪೆರೆಜ್ ಹೇಳಿದರು.

ದಿವಾಳಿಯಾಗಿರುವ ಕೊಡಾಕ್ ಕಂಪೆನಿಯಲ್ಲಿ ಸಧ್ಯ ಉಳಿದ 19 ಸಾವಿರ ಉದ್ಯೋಗಿಗಳಿದ್ದು ಅವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಪ್ರತಿಕ್ರಿಯಿಸಿ (+)