`ಕ್ಯೂರಿಯಾಸಿಟಿ' ರೋವರ್ ಮಂಗಳನ ಮೇಲೆ ಸ್ವತಂತ್ರ ಯಾನ

7

`ಕ್ಯೂರಿಯಾಸಿಟಿ' ರೋವರ್ ಮಂಗಳನ ಮೇಲೆ ಸ್ವತಂತ್ರ ಯಾನ

Published:
Updated:

ವಾಷಿಂಗ್ಟನ್ (ಪಿಟಿಐ): ಮಂಗಳ ಗ್ರಹದ ಮೇಲ್ಮೈ ಅಧ್ಯಯನಕ್ಕಾಗಿ ನಾಸಾ ಕಳುಹಿಸಿರುವ `ಕ್ಯೂರಿಯಾಸಿಟಿ' ರೋವರ್ ಮೊದಲ ಬಾರಿಗೆ ಕೆಂಪು ಗ್ರಹದ ಮೇಲೆ ಸ್ವತಂತ್ರ ಯಾನ ಆರಂಭಿಸಿದೆ.ಕೆಂಪು ಗ್ರಹದ ಮೇಲೆ ಸುರಕ್ಷಿತ ಯಾನವನ್ನು ಕೈಗೊಳ್ಳುವುದರ ಬಗ್ಗೆ ಸ್ವತಂತ್ರ ತೀರ್ಮಾನವನ್ನು ಸ್ವತಃ ರೋವರ್ ತೆಗೆದುಕೊಳ್ಳಲಿದೆ. ಮಂಗಳದ ಮೇಲೆ ಇನ್ನಷ್ಟೇ ಪ್ರಯಾಣ ಕಂಡುಕೊಳ್ಳಬೇಕಾದ ಮಾರ್ಗದತ್ತ ಇದು ತೆರಳಿದೆ. ಇದರಿಂದಾಗಿ ಶತಮಾನಗಳ ಹಿಂದೆ ಮಂಗಳನ ಪರಿಸರದಲ್ಲಿ ಉಂಟಾದ ಬದಲಾವಣೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ ಎಂದು ನಾಸಾ ತಿಳಿಸಿದೆ.ಕೆಂಪು ಗ್ರಹದ ಮೇಲೆ ಈಗಲೂ ಕ್ರಿಯಾಶೀಲವಾಗಿರುವ ನಾಸಾದ ರೋವರ್ `ಅಪರ್ಚ್ಯುನಿಟಿ'ಗೆ ಅಳವಡಿಸಿದ ತಂತ್ರಾಂಶವನ್ನೆ ಗಾತ್ರದಲ್ಲಿ ಬೃಹತ್ತಾಗಿರುವ ಮತ್ತು ಅಷ್ಟೇ ಸೂಕ್ಷ್ಮವಾಗಿರುವ `ಕ್ಯೂರಿಯಾಸಿಟಿ' ರೋವರ್‌ಗೆ ಎಂಜಿನಿಯರ್‌ಗಳು ಅಳವಡಿಸಿಕೊಂಡಿದ್ದಾರೆ.ಸ್ವತಂತ್ರವಾಗಿ ಸುರಕ್ಷಿತ ಯಾನ ಕೈಗೊಳ್ಳುವುದರ ಜೊತೆಗೆ ಛಾಯಾಚಿತ್ರಗಳನ್ನು ತೆಗೆದು ಅದರ ಬಗ್ಗೆ ವಿಶ್ಲೇಷಿಸಲಿದೆ. ಮನುಷ್ಯ ನಿಯಂತ್ರಣದಿಂದ ಚಲಿಸುವ ರೋವರ್‌ಗಳಷ್ಟೇ ಸುರಕ್ಷಿತವಾಗಿ ಪ್ರಯಾಣ ಮುಂದುವರೆಸಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.`ಆಗಸ್ಟ್ 27ರಿಂದ `ಕ್ಯೂರಿಯಾಸಿಟಿ' ರೋವರ್ ಯಶಸ್ವಿಯಾಗಿ ಯಾನ ಆರಂಭಿಸಿದೆ. ದುರ್ಗಮ ಸ್ಥಳಗಳಲ್ಲಿ ಸುರಕ್ಷಿತವಾಗಿ ಚಲಿಸುತ್ತಿರುವುದರ ಜೊತೆಗೆ ಅಲ್ಲಿನ ಛಾಯಾಚಿತ್ರಗಳನ್ನು ರವಾನಿಸಿದೆ' ಎಂದು ಕ್ಯಾಲಿಫೋರ್ನಿಯಾ ಪಸೆಡೇನಾ ನಾಸಾ ಕೇಂದ್ರದ ಎಂಜಿನಿಯರ್ ಮಾರ್ಕ್ ಮೈಮೋನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry