ಶನಿವಾರ, ಆಗಸ್ಟ್ 24, 2019
21 °C

ಕ್ಯೂರಿಯಾಸಿಟಿ `ವರ್ಷಾಚರಣೆ'ಗೆ ಅಣಿ

Published:
Updated:

ವಾಷಿಂಗ್ಟನ್ (ಪಿಟಿಐ): ಅಧ್ಯಯನದ ಉದ್ದೇಶದಿಂದ ಮಂಗಳ ಗ್ರಹಕ್ಕೆ ಪದಾರ್ಪಣೆ ಮಾಡಿದ್ದ ನಾಸಾದ `ಕ್ಯೂರಿಯಾಸಿಟಿ ರೋವರ್' ಕೆಂಪು ಗ್ರಹದಲ್ಲಿ ವರ್ಷಾಚರಣೆಗೆ ಅಣಿಯಾಗಿದೆ.ಕಳೆದ ಆಗಸ್ಟ್ 6, 2012ರಂದು ಮಂಗಳ ಗ್ರಹದಲ್ಲಿ ಇಳಿದಿದ್ದ ಕ್ಯೂರಿಯಾಸಿಟಿ ರೋವರ್‌ನ ಮಂಗಳ ಪರ್ಯಟನೆಗೆ ಮಂಗಳವಾರ ಒಂದು ವರ್ಷ ತುಂಬಲಿದೆ.`ವರ್ಷದ ಹಿಂದೆ ಮಂಗಳ ತಲುಪಿದ್ದ ಕ್ಯೂರಿಯಾಸಿಟಿ, ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ಅನೇಕ ಆವಿಷ್ಕಾರಗಳನ್ನು ಯಶಸ್ವಿಯಾಗಿ ಮಾಡಿದೆ. ಈ ಸಾಧನೆ ಮುಂದೆ ಮಂಗಳ ಮತ್ತು ಕ್ಷುದ್ರಗ್ರಹಗಳಿಗೆ ಮಾನವನನ್ನು ಕಳುಹಿಸುವುದು ಸೇರಿದಂತೆ ಅನೇಕ ಸಂಶೋಧನೆಗಳಿಗೆ ಪ್ರೇರಣೆಯಾಗಿದೆ' ಎಂದು ನಾಸಾ ಆಡಳಿತಾಧಿಕಾರಿ ಚಾರ್ಲ್ಸ್ ಬೊಲ್ಡನ್ ತಿಳಿಸಿದ್ದಾರೆ.ಮಂಗಳನಲ್ಲಿ ಬೀಡುಬಿಟ್ಟಿರುವ ಕ್ಯೂರಿಯಾಸಿಟಿ ರೋವರ್, ಇಲ್ಲಿಯವರೆಗೆ 190 ಗಿಗಾಬೈಟ್‌ಗೂ ಹೆಚ್ಚು ದತ್ತಾಂಶ, 36,700ಕ್ಕೂ ಹೆಚ್ಚು ಪೂರ್ಣ ಪ್ರಮಾಣದ ಚಿತ್ರಗಳು, 35 ಸಾವಿರ ಸಂಕ್ಷೇಪ ಚಿತ್ರಗಳು ಹಾಗೂ ಉದ್ದೇಶಿತ ಸಂಶೋಧನೆಗೆ ನೆರವಾಗಬಲ್ಲ 75 ಸಾವಿರ ಲೇಸರ್ ಚಿತ್ರಗಳನ್ನು ಒದಗಿಸಿದೆ.1.6 ಕಿಲೋಮೀಟರ್‌ಗೂ ಹೆಚ್ಚು ದೂರ ಚಲಿಸಿರುವ ಕಾರಿನ ಗಾತ್ರದ ಕ್ಯೂರಿಯಾಸಿಟಿ, ವಿಶ್ಲೇಷಣೆಗಾಗಿ ಮಂಗಳನ ಎರಡು ಶಿಲೆಗಳ ಮಾದರಿಯನ್ನು ಸಂಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಕ್ಯೂರಿಯಾಸಿಟಿಯ ಮಂಗಳ ಯಾತ್ರೆಗೆ ಒಂದು ವರ್ಷ ತುಂಬುತ್ತಿರುವ ಬೆನ್ನಲ್ಲೇ, ಇಲ್ಲಿನ ಪ್ರಯೋಗಾಲಯದಲ್ಲಿ ಕ್ಯೂರಿಯಾಸಿಟಿಯ ಮುಂದಿನ ಯೋಜನೆಗಳ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.

Post Comments (+)