ಕ್ರಮಕ್ಕೆ ಕೋಲಾ ಕಾರ್ಮಿಕರ ಒತ್ತಾಯ

7

ಕ್ರಮಕ್ಕೆ ಕೋಲಾ ಕಾರ್ಮಿಕರ ಒತ್ತಾಯ

Published:
Updated:

ಕೊಪ್ಪಳ: ಕಾರ್ಮಿಕರಿಗೆ ಪದೇಪದೇ ಕಿರುಕುಳ ನೀಡುವುದು ಹಾಗೂ ಕೆಲಸಕ್ಕೆ ಹಾಜರಾಗಲು ಬಿಡದಿರುವ ಗುತ್ತಿಗೆದಾರ ಧರ್ಮರಾಜ್ ಎಂಬುವವರ ಗುತ್ತಿಗೆಯನ್ನು ರದ್ದುಗೊಳಿಸುವಂತೆ ತಾಲ್ಲೂಕಿನ ಹಿರೇಬಗನಾಳ ಗ್ರಾಮದ ಹಿಂದೂಸ್ತಾನ ಕೊಕಾಕೋಲಾ ಬೆವರೇಜಸ್‌ನ ಕಾಂಟ್ರಾಕ್ಟ್ ವರ್ಕ್‌ರ್ಸ್ ಯೂನಿಯನ್ ಸದಸ್ಯರು ಒತ್ತಾಯಿಸಿದ್ದಾರೆ.ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿ.ಯು.ಸಿ.ಐ) ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ, ಖಜಾಂಚಿ ಕೆ.ಬಿ.ಗೋನಾಳ, ಜಿಲ್ಲಾ ಅಧ್ಯಕ್ಷ ಬಸವರಾಜ ನರೇಗಲ್ ನೇತೃತ್ವದ ನಿಯೋಗ ಗುರುವಾರ ಕಾರ್ಮಿಕ ಅಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿತು.ಕಳೆದ ತಿಂಗಳು ಹಿಂದೆ ನಡೆಸಿದ ಹೋರಾಟದ ಫಲವಾಗಿ ಅನಸೀಜನ್ ಅವಧಿಯಲ್ಲಿ 150 ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಕಂಪನಿ ಆಡಳಿತ ಮಂಡಳಿ ಒಪ್ಪಿತ್ತು. ಸದರಿ ಒಪ್ಪಂದದಂತೆ ಫೆ. 9ರಂದು 12 ಜನರು ಕೆಲಸಕ್ಕೆ ಹೋದಾಗ ಅಚ್ಚರಿ ಕಾದಿತ್ತು. ಗುತ್ತಿಗೆದಾರ ಧರ್ಮರಾಜ್ ಹಾಗೂ ಆತನ ಬೆಂಬಲಿಗರು ಕಾರ್ಮಿಕರನ್ನು ಕಾರ್ಖಾನೆ ಒಳಗೆ ಬಿಡದೇ ಮುಖ್ಯದ್ವಾರದ ಹೊರಗಡೆ ನಿಲ್ಲಿಸಿದರು. ಅಲ್ಲದೇ, ನೀವು ಸಂಘ ಕಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಲು ಬಿಡುವುದಿಲ್ಲ ಎಂಬುದಾಗಿಯೂ ಹೇಳಿದರು ಎಂದು ನಿಯೋಗ ಕಾರ್ಮಿಕ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಿದೆ.ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಧರ್ಮರಾಜ್ ನಡೆಸುವ ಏಜೆನ್ಸಿಯನ್ನು ಕೂಡಲೇ ರದ್ದುಗೊಳಿಸಬೇಕು. ಹಳೆ ಕಾರ್ಮಿಕರನ್ನು ಜ್ಯೇಷ್ಠತೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಈ ಬೇಡಿಕೆಗಳು ಈಡೇರದಿದ್ದರೆ ಕೆಲಸದಿಂದ ಹೊರಗೆ ಉಳಿದಿರುವ ಹಳೆಕಾರ್ಮಿಕರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಯೂನಿಯನ್ ಅಧ್ಯಕ್ಷ ಚೆನ್ನವೀರಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ಉಮೇಶ ಗಣಪಾ, ಉಪಾಧ್ಯಕ್ಷ ನಿಂಗಯ್ಯ ಶಶಿಮಠ, ಪದಾಧಿಕಾರಿಗಳಾದ ಎನ್.ರಾಘವೇಂದ್ರ, ಪದ್ದಮ್ಮ ಗಿಣಿಗೇರಿ, ಮಲ್ಲಮ್ಮ ಗಿಣಿಗೇರಿ ಹಾಗೂ ಇತರರು ಈ ನಿಯೋಗದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry