ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಜಿ.ಪಂ ಸಿಇಒ ಶಾಂತಪ್ಪ ಸೂಚನೆ.ಪರಿಶಿಷ್ಟರ ಕಾಲೊನಿಗೆ ಸಿಗದ ಸೌಕರ್ಯ: ಅಸಮಾಧಾನ

7

ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಜಿ.ಪಂ ಸಿಇಒ ಶಾಂತಪ್ಪ ಸೂಚನೆ.ಪರಿಶಿಷ್ಟರ ಕಾಲೊನಿಗೆ ಸಿಗದ ಸೌಕರ್ಯ: ಅಸಮಾಧಾನ

Published:
Updated:

ಕೋಲಾರ: ಜಿಲ್ಲೆಯ ಪರಿಶಿಷ್ಟ ಕಾಲೊನಿಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಹಣವನ್ನು ಸಮರ್ಪಕವಾಗಿ ಬಳಸದಿರುವ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕಚೇರಿ ವ್ಯವಸ್ಥಾಪಕ ಸಿದ್ಧರಾಜು ಎಂಬುವರನ್ನು ತರಾಟೆಗೆ ತೆಗೆದುಕೊಂಡರು.ಜಿಲ್ಲೆಯಲ್ಲಿರುವ ಪರಿಶಿಷ್ಟ ಕಾಲೊನಿಗಳಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಪೂರ್ತಿ ಬಿಡುಗಡೆಯಾಗಿದೆ. ಆದರೆ ಯಾವ ಅಧಿಕಾರಿಯೂ ಅದರ ಬಳಕೆ ಕಡೆಗೆ ಗಮನವನ್ನೆ ಹರಿಸಿಲ್ಲ ಎಂದು ಹೇಳಿದರು.ಬಿಡುಗಡೆಯಾಗಿರುವ ಹಣ ಮತ್ತು ಬಳಕೆ ಬಗ್ಗೆ ಎಲ್ಲ ತಾಲ್ಲೂಕಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಮತ್ತು ತಾಲ್ಲೂಕು ಪಂಚಾಯಿತಿ ಇಒಗಳು ಕೂಡಲೇ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.ಅಧಿಕಾರಿ ಗೈರು
: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಸಭೆಗೆ ಬಾರದಿರುವ ಕುರಿತು ಶಾಂತಪ್ಪ ಕೋಪ ವ್ಯಕ್ತಪಡಿಸಿದರು. ಜಿಲ್ಲಾ ನಿರ್ವಹಣಾ ಘಟಕದ ಸಭೆಗೂ ಅವರು ಬರಲಿಲ್ಲ. ಉದ್ದೇಶಪೂರ್ವಕವಾಗಿ ಸಭೆಗೆ ಹಾಜರಾಗದಿರುವ ಪರಿಪಾಠ ಮುಂದುವರಿಸುತ್ತಿದ್ದಾರೆ. ಕೂಡಲೇ ಅವರಿಗೆ ನನ್ನನ್ನು ಭೇಟಿ ಮಾಡಬೇಕು ಎಂದು ತಿಳಿಸಿ. ಅವರ ಗೈರುಹಾಜರಿ ಬಗ್ಗೆ ಸಭೆಯ ನಡಾವಳಿ ಪುಸ್ತಕದಲ್ಲಿ ದಾಖಲಿಸಲಾಗುವುದು ಎಂದು ನಿಗಮದ ಪ್ರತಿನಿಧಿಗೆ ಸೂಚಿಸಿದರು.‘ಅಧಿಕಾರಿ ದುರುದ್ದೇಶದಿಂದಲೇ ರಜೆ ಪಡೆಯುತ್ತಾರೆ. ನಿಗಮದ ಘಟಕ ವೆಚ್ಚವನ್ನು ಹೆಚ್ಚು ಮಾಡಬೇಕು ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದ್ದಾರೆ. ಆದರೆ ಆ ಕುರಿತು ಚರ್ಚಿಸೋಣ ಎಂದರೇ ಅಧಿಕಾರಿ ಸಿಗುವುದೇ ಇಲ್ಲ. ಯೋಜನೆಗಳ ಜಾರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವರು ಮಾಹಿತಿ ನೀಡಿಲ್ಲ. ಉಸ್ತುವಾರಿ ಸಚಿವರು ಸಮಾಜ ಕಲ್ಯಾಣ ಇಲಾಖೆ ಸಚಿವರೂ ಆಗಿರುವುದರಿಂದ, ಅವರ ನೆರವು ಪಡೆದು, ಜಿಲ್ಲೆಯಲ್ಲಿ ಆಗಬೇಕಾದ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುವುದು ಜಾಣತನ’ ಎಂದು ಸಲಹೆ ನೀಡಿದರು.‘ಯೋಜನೆಗಳಿಗೆ ಸಂಬಂಧಿಸಿದ ಪ್ರಸ್ತಾವನೆ ಕಳಿಸಿಕೊಡಲಾಗಿದೆ’ ಎಂಬ ಪ್ರತಿನಿಧಿಯ ಮಾತಿಗೆ ಪ್ರತಿಕ್ರಿಯಿಸಿದ ಶಾಂತಪ್ಪ, ಕಳಿಸಿದ್ದೀರಿ ಸರಿ. ಆದರೆ, ಕೂಡಲೇ ಕೆಲಸವಾಗಲು ಇದೇನೂ ರಾಮರಾಜ್ಯವಲ್ಲ. ಕಳಿಸಿದ ಕಡತಗಳ ಬಗ್ಗೆ ಸಚಿವರಿಗೆ ವಿವರಣೆ ನೀಡುವುದೂ ಅಗತ್ಯ’ ಎಂದರು.ಹಿಂದುಳಿದ ವರ್ಗಗಳ ಇಲಾಖೆ ಕೂಡ ಅನುದಾನ ಬಳಸಿಕೊಳ್ಳುವಲ್ಲಿ ಹಿಂದೆ ಉಳಿದಿದೆ ಎಂದು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ನೀರಿಗೆ ಆದ್ಯತೆ:
ಜಿಲ್ಲೆಯಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ, ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಸಂದರ್ಭದಲ್ಲಿ ಕುಡಿಯುವ ನೀರಿನ ಸಂಪರ್ಕಗಳಿಗೆ ಆದ್ಯತೆ ನೀಡಬೇಕು. ನಂತರ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ, ಆ ನಂತರ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸಲಹೆ ನೀಡಿದರು.ಜಿ.ಪಂ. ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಜಿ.ಸೋಮಶೇಖರ್, ಮುಖ್ಯ ಲೆಕ್ಕಾಧಿಕಾರಿ ಗಂಗಣ್ಣ, ಯೋಜನಾಧಿಕಾರಿ ಲಕ್ಷ್ಮಿನಾರಾಯಣ ವೇದಿಕೆಯಲ್ಲಿದ್ದರು. ಸಭೆಗೂ ಮುನ್ನ, ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರಿಗಳು ತಮ್ಮ ಹಾಗೂ ಇಲಾಖೆಯ ಪರಿಚಯ ಮಾಡಿಕೊಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry