ಕ್ರಯೋಜೆನಿಕ್ ಎಂಜಿನ್ ಪರೀಕ್ಷಾರ್ಥ ಪ್ರಯೋಗ ಇಂದು

7

ಕ್ರಯೋಜೆನಿಕ್ ಎಂಜಿನ್ ಪರೀಕ್ಷಾರ್ಥ ಪ್ರಯೋಗ ಇಂದು

Published:
Updated:
ಕ್ರಯೋಜೆನಿಕ್ ಎಂಜಿನ್ ಪರೀಕ್ಷಾರ್ಥ ಪ್ರಯೋಗ ಇಂದು

ಬೆಂಗಳೂರು: ಭೂಸ್ಥಿರ ಉಪಗ್ರಹ ಉಡಾವಣಾ ವಾಹನದಲ್ಲಿ (ಜಿಎಸ್‌ಎಲ್‌ವಿ) ಬಳಸುವ ಉದ್ದೇಶದಿಂದ ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾದ ಕ್ರಯೋಜೆನಿಕ್ ಎಂಜಿನ್‌ನ ಪ್ರಥಮ ಪರೀಕ್ಷಾರ್ಥ ಪ್ರಯೋಗವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ತಮಿಳುನಾಡಿನ ಮಹೇಂದ್ರಗಿರಿಯಲ್ಲಿ ಶನಿವಾರ ನಡೆಸಲಿದೆ.ಇಸ್ರೊದ ಇಲ್ಲಿನ ಉಪಗ್ರಹ ನಿಯಂತ್ರಣ ಕೇಂದ್ರದ 40ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಇಸ್ರೊ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ಈ ವಿಷಯ ತಿಳಿಸಿದರು.ಕ್ರಯೋಜೆನಿಕ್ ಎಂಜಿನ್ ಅನ್ನು ಹೊಂದಲಿರುವ ಜಿಎಸ್‌ಎಲ್‌ವಿ 1000 ಡಿಗ್ರಿ ಸೆಲ್ಷಿಯಸ್‌ನಷ್ಟು ಉಷ್ಣತೆಯಲ್ಲಿ ಎಷ್ಟು ದಕ್ಷವಾಗಿ ಕೆಲಸ ಮಾಡಬಲ್ಲದು ಎಂಬ ಪರೀಕ್ಷೆಯೂ ನಡೆಯಲಿದೆ. ನಂತರ, ನಿರ್ವಾತ ಸ್ಥಿತಿಯಲ್ಲಿ ಈ ವಾಹಕದ ಕ್ಷಮತೆ ಎಷ್ಟು ಎಂಬುದು ಪರೀಕ್ಷೆಗೆ ಒಳಗಾಗಲಿದೆ. ಈ ಪರೀಕ್ಷೆಗಳು ಮುಗಿದ ನಂತರ, ಜಿಸ್ಯಾಟ್-14 ಉಪಗ್ರಹವನ್ನು ಉಡಾವಣೆ ಮಾಡ ಲಾಗುವುದು ಎಂದು ತಿಳಿಸಿದರು.ಜಿಎಸ್‌ಎಲ್‌ವಿ ಮಾಕ್ 3 ವಾಹನದ ಪರೀಕ್ಷೆಯನ್ನೂ ಶೀಘ್ರದಲ್ಲೇ ನಡೆಸಲಾಗುವುದು. ಇಷ್ಟೇ ಅಲ್ಲ, ಮುಂದಿನ ಎರಡು ವರ್ಷಗಳಲ್ಲಿ ಒಟ್ಟು 24 ಉಪಗ್ರಹಗಳನ್ನು `ಇಸ್ರೊ~ ನಭಕ್ಕೆ ಹಾರಿಬಿಡಲಿದೆ. ಆರು ಸಾವಿರ ಕಿಲೋ ಗ್ರಾಂ ತೂಕದ, 60 ಟ್ರಾನ್ಸ್‌ಪಾಂಡರ್‌ಗಳನ್ನು ಹೊತ್ತೊಯ್ಯುವ ಉಪಗ್ರಹವೂ ಇದರಲ್ಲಿ ಸೇರಿದೆ ಎಂದು ಹೇಳಿದರು.

ಸಂಸ್ಥೆಯು ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಕಂಪೆನಿಗಳ ಉಪಗ್ರಹಗಳನ್ನು ಹಾರಿ ಬಿಡುವ ಕುರಿತೂ ಒಪ್ಪಂದ ಮಾಡಿಕೊಂಡಿದೆ ಎಂದರು.

ಉಪಗ್ರಹ ಕೇಂದ್ರದ 40ನೇ ಸಂಸ್ಥಾಪನಾ ದಿನಾಚರಣೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಲ್ಲಿನ ಉಪಗ್ರಹ ನಿಯಂತ್ರಣ ಕೇಂದ್ರದ 40ನೇ ಸಂಸ್ಥಾಪನಾ ದಿನವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.ಇಸ್ರೊದ ಹಿಂದಿನ ಅಧ್ಯಕ್ಷರಾದ ಡಾ.ಯು.ಆರ್. ರಾವ್, ಡಾ.ಕೆ. ಕಸ್ತೂರಿ ರಂಗನ್ ಮತ್ತಿತರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆದರೆ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜಿ. ಮಾಧವನ್ ನಾಯರ್ ಅವರು ಈ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಕೇಂದ್ರದ ನಿರ್ದೇಶಕ ಟಿ.ಕೆ. ಅಲೆಕ್ಸ್ ಅವರು ತಮ್ಮ ಭಾಷಣದಲ್ಲಿ ನಾಯರ್ ಕುರಿತು ಮಾಡಿದ ಕಿರು ಪ್ರಸ್ತಾಪವನ್ನು ಹೊರತುಪಡಿಸಿದರೆ, ಬೇರೆ ಯಾರೂ ಅವರ ಕುರಿತು ಮಾತನಾಡಲಿಲ್ಲ.ನಾಯರ್ ಅವರ ಗೈರುಹಾಜರಿ ಕುರಿತು ಪ್ರಶ್ನಿಸಿದಾಗ, ಸಂಸ್ಥೆಯ ಅಧ್ಯಕ್ಷ ಕೆ. ರಾಧಾಕೃಷ್ಣನ್, `ಅವರು  (ನಾಯರ್) ಬೆಂಗಳೂರಿನಲ್ಲಿಲ್ಲ. ಹಾಗಾಗಿ ಕಾರ್ಯಕ್ರಮಕ್ಕೂ ಬಂದಿಲ್ಲ~ ಎಂದು ಉತ್ತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ವಿಜ್ಞಾನಿಗಳು, ಮಾಜಿ ಅಧ್ಯಕ್ಷರು, ಸಂಸ್ಥೆಯ ಏರಿಳಿತಗಳ ಕುರಿತು ಮೆಲುಕು ಹಾಕಿದರು.1972ರಲ್ಲಿ ಪೀಣ್ಯದಲ್ಲಿ ಆರಂಭವಾದ ಕೇಂದ್ರ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಈಗಿನ ಕಟ್ಟಡಕ್ಕೆ 1980ರಲ್ಲಿ ಸ್ಥಳಾಂತರಗೊಂಡಿತು.ಇತ್ತೀಚೆಗೆ ಉಡಾವಣೆ ಮಾಡಲಾದ ರಿಸ್ಯಾಟ್ ಉಪಗ್ರಹ ಕಳುಹಿಸಿದ ಛಾಯಾಚಿತ್ರಗಳನ್ನೂ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ರಾಧಾಕೃಷ್ಣನ್, `ರಿಸ್ಯಾಟ್ ಉಪಗ್ರಹದ ನಿಜವಾದ ಪ್ರಯೋಜನ ಖಾರಿಫ್ ಹಂಗಾಮಿನಲ್ಲಿ ತಿಳಿಯಲಿದೆ. ಮೋಡ ಕವಿದ ವಾತಾವರಣದಲ್ಲೂ ಈ ಉಪಗ್ರಹ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಬಲ್ಲದು~ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry