ಕ್ರಾಂತಿಯ ದಿನಗಳು...

7

ಕ್ರಾಂತಿಯ ದಿನಗಳು...

Published:
Updated:
ಕ್ರಾಂತಿಯ ದಿನಗಳು...

ನನ್ನ ಕನಸಿನ ಕೂಸು `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ~ ಎಂದರು ನಿರ್ದೇಶಕ ನಾಗಣ್ಣ. ಆ ಕೂಸು ಜನ್ಮ ಪಡೆಯಲು ಸತತ ಒಂದು ದಶಕ ಹಿಡಿದಿದೆ. ಕತೆ ಸಿದ್ಧಪಡಿಸಲೆಂದೇ ಸುಮಾರು ಅರ್ಧದಷ್ಟು ಕಾಲ ವ್ಯಯವಾಗಿದೆ. ಈ ಹತ್ತು ವರ್ಷಗಳಲ್ಲಿ ಚಿತ್ರ ಬೆಳೆದ ಬಗೆಯನ್ನು ಬೆರಗಿನಿಂದ ವಿವರಿಸಿದರು. ಆಧುನಿಕ ಕಾಲದಲ್ಲಿಯೂ ಚರಿತ್ರೆಯ ಕತೆಯನ್ನು ಸರಾಗವಾಗಿ ಹೇಳಲು ಈ ಸುದೀರ್ಘ ಪರಿಶ್ರಮವೇ ಕಾರಣ ಎಂಬುದನ್ನು ಬಲವಾಗಿ ಸಮರ್ಥಿಸಿಕೊಂಡರು.ಕಿತ್ತೂರಿನ ಚರಿತೆಯನ್ನು ಮೂರು ಭಾಗವಾಗಿ ಹೇಳುವ ಯತ್ನ ಚಿತ್ರದಲ್ಲಿ ನಡೆದಿದೆ. ಚೆನ್ನಮ್ಮನ ಗೆಲುವು, ಎರಡನೇ ಯುದ್ಧದಲ್ಲಿ ಆಕೆ ಸೋಲುವ ಪರಿ ಹಾಗೂ ನಂತರದ ಸ್ಥಿತಿಯೇ `...ರಾಯಣ್ಣ~ನ ಕಥಾಹಂದರ. ಕತೆಯಲ್ಲಿ ವಿವಾದದ ಸೋಂಕು ತಗುಲದಂತೆ ಚಿತ್ರತಂಡ ಸಾಕಷ್ಟು ಎಚ್ಚರ ವಹಿಸಿತ್ತು.ಇತಿಹಾಸಕಾರರು, ಸಂಶೋಧಕರನ್ನು ಸಂಧಿಸಿ ಕೇಶವಾದಿತ್ಯ ಕತೆಗೆ ಅಂತಿಮ ರೂಪ ನೀಡಿದರು. ಆದರೂ ವಿವಾದಗಳಿಂದ ಚಿತ್ರ ದೂರ ಉಳಿಯಲಿಲ್ಲ. ಮುಖ್ಯವಾಗಿ ಯುಗಳ ಗೀತೆಯೊಂದರ ಕುರಿತು ಆಕ್ಷೇಪ ವ್ಯಕ್ತವಾಗಿತ್ತು. ಅವುಗಳಿಂದ ದೂರವಿರಲಷ್ಟೇ ನಾಗಣ್ಣ ಬಯಸುತ್ತಾರಂತೆ. ರಾಯಣ್ಣನ ವ್ಯಕ್ತಿತ್ವಕ್ಕೆ ತಕ್ಕಂತೆ ಚಿತ್ರ ಮೂಡಿಬಂದಿದೆ ಎಂಬ ಸಮಾಧಾನ ಅವರದು.ಸುಮಾರು 180 ದಿನಗಳ ಕಾಲ ನಡೆದ ಚಿತ್ರೀಕರಣದ ವಿಶೇಷತೆಗಳ ಬಗ್ಗೆ ಮಾತು ಹೊರಳಿತು. ಯುದ್ಧದ ಸನ್ನಿವೇಶಗಳು ಅವರ ಪಾಲಿಗೆ ಸಾಕಷ್ಟು ಸವಾಲೊಡ್ಡಿದ್ದವು. ಸುಮಾರು ಮೂವತ್ತು ಆನೆಗಳು, ನೂರಕ್ಕೂ ಹೆಚ್ಚು ಕುದುರೆಗಳು, ಸಾವಿರಾರು ಕಲಾವಿದರನ್ನು ಒಳಗೊಂಡು ಸಮರದ ದೃಶ್ಯಗಳು ಮೂಡಿ ಬರಬೇಕಿತ್ತು.ಬೆಳಗಾವಿಯಲ್ಲಿ ಕೋಟೆ ಕೊತ್ತಲಗಳು ಕಡಿಮೆ ಇರುವುದರಿಂದ ರಾಜಸ್ತಾನದ ಜೈಪುರಕ್ಕೆ ತೆರಳಿ ಚಿತ್ರೀಕರಣ ನಡೆದಿತ್ತು. ಬೆಂಗಳೂರಿನ ಅರಮನೆ ಮೈದಾನವೂ ಕಿತ್ತೂರು ಯುದ್ಧಕ್ಕೆ ಸಾಕ್ಷಿಯಾಗಿತ್ತು. ಇಂಥ ದೊಡ್ಡ ದೃಶ್ಯಗಳು ರೀಟೇಕ್ ಆಗುವ ಕಷ್ಟಕರ ಸನ್ನಿವೇಶಗಳಲ್ಲಿ ಹೆಗಲು ಕೊಟ್ಟ ನಾಯಕನಟ ದರ್ಶನ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಸ್ಮರಿಸಿದರು. ಕುದುರೆ ಸವಾರಿಯನ್ನು ಚೆನ್ನಾಗಿ ಬಲ್ಲ ದರ್ಶನ್ ಕಲಾವಿದರಿಗೆ ಮಾರ್ಗದರ್ಶನ ಮಾಡುತ್ತಿದ್ದರಂತೆ. ಎರಡು ಮಹತ್ವದ ಯುದ್ಧ ಸನ್ನಿವೇಶಗಳು ಚಿತ್ರದಲ್ಲಿವೆ.ರಾಯಣ್ಣನ ಆತ್ಮ ಚಿತ್ರೀಕರಣವನ್ನು ಗಮನಿಸುತ್ತಿತ್ತು ಎಂಬುದು ನಿರ್ದೇಶಕರ ಗಟ್ಟಿ ನಂಬಿಕೆ! ಕೆಲವು ಕಾಕತಾಳೀಯ ಘಟನೆಗಳು ನಡೆದಿರುವ ಕುರಿತು ಸುದೀರ್ಘ ಪಟ್ಟಿ ಅವರಲ್ಲಿತ್ತು. ಚಿತ್ರ ಗೆಲ್ಲಲು ಇಂಥ ನಂಬಿಕೆಗಳೂ ಸಹಕಾರಿಯಾಗಬಲ್ಲವೇ ಎಂಬ ಅನುಮಾನವನ್ನು ಅವರು ಒಪ್ಪಲಿಲ್ಲ. ಗೆಲುವಿಗೆ ಕಾರಣವಾಗಬಲ್ಲ ಚಿತ್ರದ ತಾಂತ್ರಿಕ ಅಂಶಗಳ ಕುರಿತು ವಿವರಿಸುತ್ತಾ ಹೋದರು.ಸ್ಥಿರ ಚಿತ್ರಕ್ಕಾಗಿಯೇ ಎಚ್‌ಡಿ ಕ್ಯಾಮೆರಾ ತಂತ್ರಜ್ಞಾನವನ್ನು ಬಳಿಸಿಕೊಂಡಿತ್ತು ಚಿತ್ರತಂಡ. ಯುದ್ಧದ ಸನ್ನಿವೇಶಗಳಲ್ಲಿ ವೈವಿಧ್ಯಮಯವಾಗಿ ಕ್ಯಾಮೆರಾವನ್ನು ದುಡಿಸಿಕೊಳ್ಳಲಾಗಿದೆಯಂತೆ.ಸುಮಾರು ಒಂಬತ್ತಕ್ಕೂ ಹೆಚ್ಚು ಕ್ಯಾಮೆರಾಗಳಲ್ಲಿ ಕದನ ಕ್ಷಣಗಳನ್ನು ಹಿಡಿದಿಡಲಾಗಿದೆ. ಆದರೆ ಧಾಂಧೂಂ ಎನ್ನವಂಥ ಗ್ರಾಫಿಕ್ಸ್ ಬಳಸಿಲ್ಲ. ಬದಲಿಗೆ ವಾಸ್ತವದ ನೆಲೆಗಟ್ಟಿನಲ್ಲೇ ಕತೆ ಹೇಳುವ ಯತ್ನ ನಡೆದಿದೆ.ಚಿತ್ರದ ಮತ್ತೊಂದು ವಿಶೇಷವೆಂದರೆ ಹೆಲಿಕಾಪ್ಟರ್ ಬಳಸದೆಯೂ ಏರಿಯಲ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಇದಕ್ಕೆ ಸಹಕಾರ ನೀಡಿರುವುದು ಮುಂಬೈನಿಂದ ತರಿಸಲಾದ `ಹೆಲಿ ಕ್ಯಾಮೆರಾ~. ದೂರ ನಿಯಂತ್ರಿತ ಕ್ಯಾಮೆರಾ ಹೆಲಿಕಾಪ್ಟರ್‌ನಂತೆಯೇ ಆಕಾಶದಲ್ಲಿ ತೇಲಬಲ್ಲದು. ಆನೆ ಕುದುರೆಗಳು ಬೆದರದಂತೆ ದೃಶ್ಯಗಳನ್ನು ಸೆರೆ ಹಿಡಿಯಬಲ್ಲದು. ಜತೆಗೆ ಸಾವಿರ ಫ್ರೇಮುಗಳ ತಂತ್ರಜ್ಞಾನ, ಒಂದು ಕಿಮೀ ದೂರದ ದೃಶ್ಯವನ್ನೂ ಸಮರ್ಥವಾಗಿ ಸೆರೆ ಹಿಡಿಯಬಲ್ಲ ಶಕ್ತಿಶಾಲಿ ಲೆನ್ಸ್‌ಗಳು ಚಿತ್ರಕ್ಕೆ ಕಳೆ ತಂದಿವೆಯಂತೆ.`ರಾಯಣ್ಣ~ನಾಗಿ ಮಿಂಚುತ್ತಿರುವ ದರ್ಶನ್ ಹಾಗೂ ಚಿತ್ರಕ್ಕೆ ಸುಮಾರು 30 ಕೋಟಿಯಷ್ಟು ಬೃಹತ್ ಬಜೆಟ್ ಒದಗಿಸಿರುವ ನಿರ್ಮಾಪಕ ಆನಂದ ಅಪ್ಪುಗೋಳ ಕುರಿತು ನಾಗಣ್ಣ ಮೆಚ್ಚುಗೆಯ ಹೊಳೆಯನ್ನೇ ಹರಿಸಿದರು. ನಿರ್ಮಾಪಕರು ಮನಸ್ಸು ಮಾಡದಿದ್ದರೆ ಕತೆ ಹರಳುಗಟ್ಟುವುದು ಸಾಧ್ಯವೇ ಇರುತ್ತಿರಲಿಲ್ಲ ಎಂಬುದು ಅವರ ಮೆಚ್ಚುಗೆಗೆ ಕಾರಣ.`ರಾಯಣ್ಣನ ಪಾತ್ರ ಎನ್ನುತ್ತಿದ್ದಂತೆ ಮೊದಲು ನೆನಪಾದದ್ದೇ ದರ್ಶನ್. ಹಾಗೆಯೇ ಚೆನ್ನಮ್ಮನ ಪಾತ್ರಕ್ಕೆ ನಟಿ ಜಯಪ್ರದಾ ಚಿತ್ರತಂಡದ ಮನಸ್ಸಿನಲ್ಲಿ ಮೂಡಿದರು~ ಎನ್ನುತ್ತಾರೆ ಅವರು. `ಕಿತ್ತೂರು ರಾಣಿ ಚೆನ್ನಮ್ಮ~ಳಾಗಿ ಚಿರಸ್ಥಾಯಿಯಾದ ಬಿ. ಸರೋಜಾದೇವಿಯವರನ್ನೇ ಇಲ್ಲಿಯೂ ವೀರರಾಣಿಯಾಗಿ ಬಿಂಬಿಸಬಹುದಿತ್ತಲ್ಲಾ ಎಂಬ ಪ್ರಶ್ನೆಗೆ ಅವರದು ಮೌನ ಉತ್ತರ. ಒಟ್ಟಾರೆ ಕನ್ನಡ ಚಾರಿತ್ರಿಕ ಸಿನಿಮಾಗಳಲ್ಲಿ ನಟಿಸಿದ ಎಲ್ಲರಿಗೂ ಚಿತ್ರ ಅರ್ಪಣೆಯಾಗಲಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry