ಕ್ರಿಕೆಟಿಗರ ಫನ್‌ಗೇಮ್ ಫುಟ್‌ಬಾಲ್

7

ಕ್ರಿಕೆಟಿಗರ ಫನ್‌ಗೇಮ್ ಫುಟ್‌ಬಾಲ್

Published:
Updated:
ಕ್ರಿಕೆಟಿಗರ ಫನ್‌ಗೇಮ್ ಫುಟ್‌ಬಾಲ್

ನವದೆಹಲಿ: ಕ್ರಿಕೆಟ್ ವೃತ್ತಿ ಜೀವನ; ಆದ್ದರಿಂದ ರಂಜನೆಗಾಗಿ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬೇರೊಂದು ಆಟವನ್ನು ಅಭ್ಯಾಸಕ್ಕೆ ಮುನ್ನ ಆಡುವುದು ಅಗತ್ಯ. ಆದರೆ ಹೆಚ್ಚಿನ ಕ್ರಿಕೆಟ್ ತಂಡಗಳಿಗೆ ‘ವಾರ್ಮ್‌ಅಪ್’ ಆಗಲು ಫುಟ್‌ಬಾಲ್ ಆಟವಾಡುವುದೇ ಇಷ್ಟ.ಈ ಬಾರಿಯ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಹದಿನಾಲ್ಕು ತಂಡಗಳು ತಮ್ಮ ಅಭ್ಯಾಸದ ಅಂಗವಾಗಿ ಯಾವುದಾದರೂ ಎರಡು ಮೂರು ‘ಫನ್‌ಗೇಮ್’ಗಳನ್ನು ಹೊಂದಿವೆ. ಆದರೆ ಈ ಎರಡು ಮೂರು ಆಟಗಳಲ್ಲಿ ಒಂದು ಫುಟ್‌ಬಾಲ್ ಆಗಿದೆ ಎನ್ನುವುದು ವಿಶೇಷ.ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದವರಂತೂ ಅಭ್ಯಾಸಕ್ಕೆ ಮೊದಲು ಹಾಗೂ ಕೊನೆಯಲ್ಲಿ ಫುಟ್‌ಬಾಲ್ ಅನ್ನು ಆಡುತ್ತಾರೆ. ಕೆಲವರು ಫುಟ್‌ಬಾಲ್ ಚೆಂಡನ್ನು ಕಾಲಿನಲ್ಲಿ ನಿಯಂತ್ರಿಸುವ ಕಸರತ್ತು ಮಾಡಿ ಸಂತಸ ಪಡುತ್ತಾರೆ.ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ನಡೆಸಿದ ದಕ್ಷಿಣ ಆಫ್ರಿಕಾ ತಂಡದವರೂ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮೊರೆಹೋಗಿದ್ದು ಫುಟ್‌ಬಾಲ್ ಆಟಕ್ಕೆ. ಹಾಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಸಜ್ಜಾಗಲು ನಾಗಪುರದಲ್ಲಿ ತಾಲೀಮು ನಡೆಸಿದ್ದಾಗ ಇಂಗ್ಲೆಂಡ್ ತಂಡದವರು ಕೂಡ ಕೆಲವು ಹೊತ್ತು ಫುಟ್‌ಬಾಲ್ ಆಡಿದ್ದನ್ನು ಸ್ಮರಿಸಬಹುದು. ಪಾಲ್ ಕಾಲಿಂಗ್‌ವುಡ್ ಅವರಂತೂ ಸಾಕಷ್ಟು ಹೊತ್ತು ತಾವೊಬ್ಬರೇ ಚೆಂಡನ್ನು ನಿಯಂತ್ರಿಸುವ ಸಾಹಸದಲ್ಲಿ ತೊಡಗಿದ್ದು ಪತ್ರಿಕಾ ಛಾಯಾಗ್ರಾಹಕರ ಗಮನ ಸೆಳೆಯಿತು. ಕೋಟ್ಲಾದಲ್ಲಿ ದಕ್ಷಿಣ ಆಫ್ರಿಕಾದ ಡೆಲ್ ಸ್ಟೇನ್ ಕೂಡ ಇದೇ ರೀತಿಯಲ್ಲಿ ಫುಟ್‌ಬಾಲ್ ಚೆಂಡನ್ನು ನಿಯಂತ್ರಿಸುವ ಕಸರತ್ತು ಮಾಡಿದರು.ಫುಟ್‌ಬಾಲ್ ಆಟವನ್ನೇ ದೈಹಿಕ ವ್ಯಾಯಾಮದ ಅಂಗವಾಗಿ ಹೆಚ್ಚಿನ ತಂಡಗಳು ಹೊಂದಿರುವುದು ಅಚ್ಚರಿಯೇನಲ್ಲ. ಏಕೆಂದರೆ ಈ ಕ್ರೀಡೆಯು ಕಡಿಮೆ ಸಮಯದಲ್ಲಿ ದೇಹಕ್ಕೆ ಹೆಚ್ಚು ಕಸರತ್ತು ನೀಡುತ್ತದೆ. ಎಲ್ಲ ಆಟಗಾರರೂ ಒಟ್ಟಿಗೆ ಪಾಲ್ಗೊಳ್ಳುವುದಕ್ಕೂ ಅವಕಾಶ ಇರುತ್ತದೆ. ಒಬ್ಬರು ಆಡುತ್ತಿದ್ದರೆ ಇನ್ನೊಬ್ಬರು ಸುಮ್ಮನೇ ನೋಡುತ್ತಿರಬೇಕು ಎನ್ನುವಂಥ ಆಟವಾಗಿಲ್ಲ ಫುಟ್‌ಬಾಲ್.ಸುಮಾರು ಹತ್ತರಿಂದ ಹದಿನೈದು ನಿಮಿಷ ಮಾತ್ರ ಕ್ರಿಕೆಟ್ ತಂಡಗಳ ಆಟಗಾರರು ಅಭ್ಯಾಸದ ಅಂಗವಾಗಿ ‘ಫನ್‌ಗೇಮ್’ನಲ್ಲಿ ಪಾಲ್ಗೊಳ್ಳುತ್ತಾರೆ. ಅಷ್ಟು ಅವಧಿಯಲ್ಲಿ ದೇಹವು ವಾರ್ಮ್‌ಅಪ್ ಆಗಬೇಕು. ಆದ್ದರಿಂದ ವೇಗವಾಗಿ ದೇಹದ ಸ್ನಾಯುಗಳಿಗೆ ಕಸರತ್ತು ಸಿಗುವಂತೆ ಮಾಡಲು ‘ಫುಟ್‌ಬಾಲ್’ ಸೂಕ್ತವೆಂದು ಕೋಚ್‌ಗಳು ಅಭಿಪ್ರಾಯಪಡುತ್ತಾರೆ. ಜೊತೆಗೆ ಈ ಆಟವಾಡುವುದು ಕ್ರಿಕೆಟಿಗರಿಗೂ  ಇಷ್ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry