ಭಾನುವಾರ, ಡಿಸೆಂಬರ್ 8, 2019
25 °C
ಐಪಿಎಲ್ ಆರನೇ ಆವೃತ್ತಿ ಉದ್ಘಾಟನೆ ಇಂದು: ಕತ್ರಿನಾ, ಶಾರುಖ್ ಪ್ರಮುಖ ಆಕರ್ಷಣೆ

ಕ್ರಿಕೆಟಿಗರ ಸಂಭ್ರಮಕ್ಕೆ ತಾರಾ ರಂಗು

Published:
Updated:
ಕ್ರಿಕೆಟಿಗರ ಸಂಭ್ರಮಕ್ಕೆ ತಾರಾ ರಂಗು

ಕೋಲ್ಕತ್ತ: ಟೂರ್ನಿ ಆರಂಭಕ್ಕೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರನೇ ಆವೃತ್ತಿಯ ಉದ್ಘಾಟನೆ ಮಂಗಳವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಬಾಲಿವುಡ್ ನಟನಟಿಯರ ಉಪಸ್ಥಿತಿ ಕ್ರಿಕೆಟಿಗರ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಡಲಿದೆ.ಬಾಣಬಿರುಸುಗಳ ಚಿತ್ತಾರ, ನೆಚ್ಚಿನ ಕ್ರಿಕೆಟಿಗರ ಉಪಸ್ಥಿತಿ, ನಟ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್, ನಟಿಯರಾದ ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಅವರ ನೃತ್ಯ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದೆ. ಆರಂಭದ ವಿವಾದಗಳಿಂದ ಕ್ರಿಕೆಟ್ ಪ್ರಿಯರ ಮನದಲ್ಲಿ ಆವರಿಸಿರುವ ಕಹಿಯನ್ನು ಮರೆಯಿಸಿ ಸಂಗೀತದ ಮೋಡಿಯ ಮೂಲಕ ರಂಜಿಸಲು ಕಲಾವಿದರ ಬಳಗವೂ ಸಜ್ಜುಗೊಂಡಿದೆ.ವಿದ್ಯಾರ್ಥಿಗಳ ಸಮೂಹವೊಂದು ಮೈದಾನದಲ್ಲಿ ಶಿಸ್ತಾಗಿ ನಿಂತು ಓಂ ಮಾದರಿಯನ್ನು ಸೃಷ್ಠಿಸಲು ಸಜ್ಜುಗೊಂಡಿದೆ. ಇದಕ್ಕಾಗಿ ಕಳೆದ ಹಲವು ವಾರಗಳಿಂದ ವಿದ್ಯಾರ್ಥಿಗಳು ತಯಾರಿ ನಡೆಸಿದ್ದಾರೆ. ಇದು ಉದ್ಘಾಟನಾ ಸಮಾರಂಭದ ಇನ್ನೊಂದು ಪ್ರಮುಖ ಅಂಶ. `ಸಿಟಿ ಆಫ್ ಜಾಯ್' ಖ್ಯಾತಿಯ ಕೋಲ್ಕತ್ತದ ಶ್ರೀರಾಮ್‌ಪುರ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಉದ್ಘಾಟನಾ ಸಮಾರಂಭವನ್ನು ಚೆಂದವಾಗಿ ನಡೆಸಿಕೊಡಲು ಒಂದು ವಾರದಿಂದ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಈ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸುವ ಹೊಣೆಯನ್ನು ಮುಂಬೈಯ ರೆಡ್ ಚಿಲ್ಲಿಸ್ ಸಂಸ್ಥೆ ವಹಿಸಿಕೊಂಡಿದೆ.ವಿಶೇಷ ನೃತ್ಯ:

ನೃತ್ಯದ ಮೂಲಕವೇ ಕ್ರೀಡಾ ಪ್ರೇಮಿಗಳ ಮನದಲ್ಲಿ ಖುಷಿಯ ಮಹಲ್ ಕಟ್ಟಲು ಆಯೋಜಕರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ನೃತ್ಯವೇ ಪ್ರಧಾನ ಆಕರ್ಷಣೆಯಾಗಿದೆ. ನೃತ್ಯದ ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಗಿದ್ದು, ಪ್ರತಿ ಗುಂಪಿಗೂ ಪ್ರತ್ಯೇಕ ಸಹಾಯಕರು ಇರುತ್ತಾರೆ.ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿರುವ ತಂಡಗಳ ಸಂಖ್ಯೆಯನ್ನು ತೋರಿಸಲು ವಿಭಿನ್ನ ರೀತಿಯಲ್ಲಿ `ಎಲೆಕ್ಟ್ರಾನಿಕ್ ನಂಬರ್' ವ್ಯವಸ್ಥೆಯನ್ನು ಮಾಡಲಾಗಿದೆ ವಿಶೇಷ ಲೈಟಿಂಗ್ ಕೂಡಾ ಇದೆ. ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್‌ನ ನಾಯಕ ಗೌತಮ್ ಗಂಭೀರ್ ಸೇರಿದಂತೆ ಒಟ್ಟು ಒಂಬತ್ತು ತಂಡಗಳ ನಾಯಕರು ಸಮಾರಂಭದ ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಒಂಬತ್ತು ತಂಡಗಳು:

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್‌ಡೆವಿಲ್ಸ್, ರಾಜಸ್ತಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತ ನೈಟ್ ರೈಡರ್ಸ್, ಪುಣೆ ವಾರಿಯರ್ಸ್, ಹೈದರಾಬಾದ್ ಸನ್‌ರೈಸರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈ ಸಲದ ಐಪಿಎಲ್‌ನಲ್ಲಿ ಪೈಪೋಟಿ ನಡೆಸಲಿವೆ.ಉದ್ಘಾಟನಾ ಪಂದ್ಯದಲ್ಲಿ ಏಪ್ರಿಲ್ 3ರಂದು ನೈಟ್  ರೈಡರ್ಸ್ ಹಾಗೂ ಡೇರ್‌ಡೆವಿಲ್ಸ್ ತಂಡಗಳು ಆಡಲಿವೆ. ಈ ಟೂರ್ನಿಯಲ್ಲಿ 72 ಲೀಗ್ ಪಂದ್ಯಗಳು, ಎರಡು ಕ್ವಾಲಿಫೈಯರ್ ಒಂದು ಎಲಿಮಿನೇಟರ್ ಮತ್ತು ಫೈನಲ್ ಪಂದ್ಯ ನಡೆಯಲಿವೆ. ಮೇ 26ರಂದು ಕೋಲ್ಕತ್ತದಲ್ಲಿಯೇ ಫೈನಲ್ ಪಂದ್ಯ ಆಯೋಜನೆಯಾಗಿದೆ.ಹೋದ ಋತುವಿನಲ್ಲಿ 9 ತಂಡಗಳು ಪಾಲ್ಗೊಂಡಿದ್ದವು. ಈ ಸಲ ಡೆಕ್ಕನ್ ಜಾರ್ಜರ್ಸ್ ಬದಲು ಹೊಸ ಹೆಸರು ಮತ್ತು ಲಾಂಛನದೊಂದಿಗೆ ಹೈದರಾಬಾದ್ ಸನ್‌ರೈಸರ್ಸ್ ಮೊದಲ ಐಪಿಎಲ್ ಆಡಲಿದೆ.ಮಳೆಯು ಭೀತಿ: ಉದ್ಘಾಟನಾ ಸಮಾರಂಭಕ್ಕೆ ಮಳೆಯ ಭೀತಿ ಕಾಡುತ್ತಿದೆ. ಏಕೆಂದರೆ, ಇಲ್ಲಿನ ವಾತಾವರಣವೂ ಮಳೆಯ ಬರುವ ಹಾಗಿದೆ. ಇದು ಅದ್ದೂರಿಯಾಗಿ ಕಾರ್ಯಕ್ರಮ ನಡೆಸಬೇಕೆನ್ನುವ ಸಂಘಟಕರಲ್ಲಿ ಆತಂಕ ಮೂಡಿಸಿದೆ. ಒಂದು ವೇಳೆ ಮಳೆಯ `ಆಟ ನಡೆದರೆ, ಸುಂದರ ಸಮಾರಂಭಕ್ಕೆ ಸಾಕ್ಷಿಯಾಗಬೇಕೆನ್ನುವ ಕ್ರಿಕೆಟ್ ಪ್ರಿಯರ ಕನಸೂ ತೋಯ್ದು ಹೋಗಲಿದೆ.`ಕ್ರಿಕೆಟಿಗರನ್ನು ಹಾಗೂ ನೆಚ್ಚಿನ ನಟನಟಿಯರನ್ನು ನೋಡಬೇಕೆನ್ನುವ ಆಸೆಯಿಂದ ಸಾಕಷ್ಟು ಪ್ರಯಾಸ ಪಟ್ಟು ಟಿಕೆಟ್ ಖರೀದಿಸಿದ್ದೇನೆ. ಅದಕ್ಕಾಗಿ ಸೋಮವಾರ ಬೆಳಿಗ್ಗೆ 8 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದೆ' ಎಂದು ಖಾಸಗಿ ಕಂಪೆನಿಯ ಉದ್ಯೋಗಿ ಆರತಿ ಘೋಷಾಲ್ ಹೇಳಿದರು.ವಿವಾದದ ಗೂಡು:

ಈ ಸಲದ ಐಪಿಎಲ್ ಆವೃತ್ತಿ ಹಲವು ಕಾರಣಗಳಿಂದ ಆರಂಭದ ಮುನ್ನವೇ ಸುದ್ದಿ ಮಾಡಿತ್ತು. ಚೆನ್ನೈನಲ್ಲಿ ಪಂದ್ಯಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದರು. ಇದರಿಂದ ಆಕ್ರೋಶಗೊಂಡ ಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ `ಲಂಕಾ ಆಟಗಾರರು ಐಪಿಎಲ್ ಬಹಿಷ್ಕರಿಸಿ' ಎಂದು ಹೇಳಿದರು.ಕ್ರಿಕೆಟ್ ಪಂಡಿತರ ಹೇಳಿಕೆ, ಪ್ರಸ್ತುತ ಆಟಗಾರರ ವಿಷಾದದ ನಡುವೆಯೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಮಿಳುನಾಡಿನ ನಿರ್ಧಾರಕ್ಕೆ ತಲೆಬಾಗಿತು. ಚೆನ್ನೈನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಲಂಕಾದ ಆಟಗಾರರು ಆಡುವುದಿಲ್ಲ ಎಂದು ಭರವಸೆ ನೀಡಿತು. ಈ ಪರಿಣಾಮ `ಕ್ರೀಡಾ ರಾಜಕೀಯ'ದ ಜಂಜಾಟದಲ್ಲಿ ಶ್ರೀಲಂಕಾ ಆಟಗಾರರು ಪಂದ್ಯವನ್ನಾಡುವ ಮನ್ನವೇ ಸುಸ್ತಾಗಿ ಹೋದರು.ಆರನೇ ಆವೃತ್ತಿಯಲ್ಲಿ ಸಿಂಹಳೀಯ ನಾಡಿನ 13 ಆಟಗಾರರು ಇದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಅವರು ಆಡುವಂತಿಲ್ಲ. ಲಂಕಾದ ಕುಮಾರ ಸಂಗಕ್ಕಾರ (ಸನ್‌ರೈಸರ್ಸ್), ಮಾಹೇಲ ಜಯವರ್ಧನೆ (ಡೆಲ್ಲಿ ಡೇರ್‌ಡೆವಿಲ್ಸ್) ಹಾಗೂ ಆ್ಯಂಜಲೊ ಮ್ಯಾಥ್ಯೂಸ್ (ಪುಣೆ ವಾರಿಯರ್ಸ್) ತಂಡವನ್ನು ಮುನ್ನಡೆಸಲಿದ್ದಾರೆ. ಚೆನ್ನೈನಲ್ಲಿ ಹತ್ತು ಪಂದ್ಯಗಳು ನಡೆಯಲಿವೆ.ಕಳೆದ ವರ್ಷದ ಐಪಿಎಲ್‌ನಲ್ಲಿ `ಚಾಂಪಿಯನ್' ಆದ ಖುಷಿಯಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಶಾರೂಕ್‌ಗೆ ವಾಂಖೆಡೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಈ ನಿಷೇಧ ಆರನೇ ಆವೃತ್ತಿಯಲ್ಲೂ ಮುಂದುವರಿಯಲಿದೆ.ಹೀಗೆ ಹಲವು ವಿವಾದದ ನಡುವೆ ಮಂಗಳವಾರ ಆರಂಭವಾಗಲಿರುವ ಐಪಿಎಲ್ ಆರನೇ ಆವೃತ್ತಿ ಮೇ 26ರ ವರೆಗೆ ನಡೆಯಲಿದೆ. ಭರ್ತಿ ಒಂದೂವರೆ ತಿಂಗಳು ಕ್ರಿಕೆಟ್ ಪ್ರಿಯರಿಗೆ ಹಬ್ಬದ ಸುಗ್ಗಿ.ಪ್ರತಿಕ್ರಿಯಿಸಿ (+)