ಕ್ರಿಕೆಟ್: ಬಿಡಿಕೆಎಸ್ಎಫ್ ಚಾಂಪಿಯನ್

ಹುಬ್ಬಳ್ಳಿ: ಮುಳುಗುತ್ತಿದ್ದ ಹಡಗನ್ನು ಏಕಾಂಗಿಯಾಗಿ ಮುನ್ನಡೆಸಿದ ಅಭಿಷೇಕ್ ಹೊನ್ನಾವರ ಪಂದ್ಯದ ಹೀರೋ ಆದರು. ಅಜೇಯ 102 ರನ್ ಗಳಿಸಿದ ಈ ಬಲಗೈ ಬ್ಯಾಟ್ಸ್ಮನ್ ರೋಚಕ ಪಂದ್ಯದಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ‘ಸಿ’ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.
ಕೆಎಸ್ಸಿಎ ಧಾರವಾಡ ವಲಯ ‘ಬಿ’ ಡಿವಿಷನ್ ಕ್ರಿಕೆಟ್ ಲೀಗ್ನ ಚಾಂಪಿಯನ್ ಆಗಲು ಗೆಲುವು ಅನಿವಾರ್ಯವಾಗಿದ್ದ ಕೊನೆಯ ಪಂದ್ಯದಲ್ಲಿ ಹುಬ್ಬಳ್ಳಿಯ ಟ್ಯಾಲೆಂಟ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿದ ಬಿಡಿಕೆ ಒಂಬತ್ತು ಪಂದ್ಯಗಳಿಂದ ಒಟ್ಟು 28 ಪಾಯಿಂಟ್ ಕಲೆ ಹಾಕಿತು.
ಎಂಟನೇ ಪಂದ್ಯ ಮುಕ್ತಾಯಗೊಂಡಾಗ 26 ಪಾಯಿಂಟ್ ಬಗಲಿಗೆ ಹಾಕಿಕೊಂಡಿದ್ದ ಟ್ಯಾಲೆಂಟ್ ಕ್ಲಬ್ ಪಂದ್ಯ ಡ್ರಾ ಮಾಡಿಕೊಂಡರೂ ಚಾಂಪಿಯನ್ ಆಗುತ್ತಿತ್ತು. ಆದರೆ ಅವರ ಕನಸು ನನಸಾಗಲು ಅಭಿಷೇಕ್ ಮತ್ತು ಆಲ್ರೌಂಡ್ ಆಟ ಪ್ರದರ್ಶಿಸಿದ ನವೀನ್ ಬಿಡಲಿಲ್ಲ. ಪಂದ್ಯ ಸೋತರೂ ಟ್ಯಾಲೆಂಟ್ ತಂಡ ‘ಎ’ ಡಿವಿಷನ್ಗೆ ಬಡ್ತಿ ಪಡೆಯಿತು. ಕಳೆದ ಬಾರಿ ಈ ತಂಡ ‘ಎ’ ಡಿವಿಷನ್ನಿಂದ ‘ಬಿ’ ಡಿವಿಷನ್ಗೆ ಹಿಂಬಡ್ತಿಗೆ ಒಳಗಾಗಿತ್ತು.
ಅಭಿಷೇಕ್ ಸಮಯೋಚಿತ ಶತಕ:
ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಅಭಿಷೇಕ್ ಹೊನ್ನಾವರಗೆ ಈ ಟೂರ್ನಿಯಲ್ಲಿ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಕೊನೆಯ ಪಂದ್ಯದಲ್ಲಿ ಸಮಯೋಚಿತ ಆಟವಾಡಿ ಶತಕ ಪೂರೈಸಿದ ಅವರು ತಂಡಕ್ಕೆ ಆಸರೆಯಾದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟ್ಯಾಲೆಂಟ್ ಕ್ಲಬ್ ಮುರುಗೇಶ ಎಂ (43, 48 ಎಸೆತ, 6 ಬೌಂ), ರಾಮಚಂದ್ರ ಎಚ್ (39, 48 ಎಸೆತ, 4 ಬೌಂ, 1 ಸಿ) ಮತ್ತು ಮಹೇಶ ಖೋಡೆ (38, 54 ಎಸೆತ, 2 ಸಿ, 2 ಬೌಂ) ಅವರ ಉತ್ತಮ ಆಟದ ನೆರವಿನಿಂದ 53.2 ಓವರ್ಗಳಲ್ಲಿ 197 ರನ್ ಗಳಿಸಿತು. ಉತ್ತಮ ಆರಂಭ ಪಡೆದ ಇನ್ನಿಂಗ್ಸ್ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರರ ಪ್ರತಿರೋಧ ಕಂಡು ಬಂದರೂ ಅಫ್ ಸ್ಪಿನ್ನರ್ಗಳಾದ ನವೀನ್ ಜಿ, ಸಾದಿಕ್ ಕಿತ್ತೂರು ಮತ್ತು ಪ್ರಮೋದ ಕಾಮತ್ ಪರಿಣಾಮಕಾರಿ ದಾಳಿ ನಡೆಸಿ ತಂಡದ ಓಟಕ್ಕೆ ಕಡಿವಾಣ ಹಾಕಿದರು.
ಬಿಡಿಕೆ ಇನ್ನಿಂಗ್ಸ್ ಒಂದು ಹಂತದಲ್ಲಿ ಡೋಲಾಯಮಾನವಾಗಿತ್ತು. ತಂಡ ಏಳು ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ಶ್ರವಣ್ ಎಚ್. ಎಲ್ಬಿಡಬ್ಲ್ಯು ಬಲಗೆ ಬಿದ್ದರೆ, 21 ರನ್ಗಳಾಗಿದ್ದಾಗ ಹರ್ಷಿಲ್ ಪಟೇಲ್ ರನೌಟ್ ಆಗಿ ವಾಪಸಾದರು.
ಈ ಸಂದರ್ಭದಲ್ಲಿ ಜೊತೆಗೂಡಿದ ಅಭಿಷೇಕ್ ಮತ್ತು ಅತ್ರೇಯ ಇನಾಮದಾರ 60 ರನ್ ಸೇರಿಸಿದರು. ಐದನೇ ವಿಕೆಟ್ಗೆ ನವೀನ್ ಜಿ. ಜೊತೆ 114 ರನ್ ಪೇರಿಸಿದ ಅಭಿಷೇಕ್ ತಂಡವನ್ನು ಗೆಲುವಿನ ದಡ ಸೇರಿಸಿದರು. 135 ಎಸೆತ ಎದುರಿಸಿದ ಅವರು ಆರು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ಟ್ಯಾಲೆಂಟ್ ಸ್ಪೋರ್ಟ್ಸ್ ಕ್ಲಬ್: 53.2 ಓವರ್ಗಳಲ್ಲಿ 197ಕ್ಕೆ ಆಲೌಟ್ (ಮುರುಗೇಶ ಎಂ 43, ರಾಮಚಂದ್ರ ಎಚ್ 39, ಮಹೇಶ ಖೋಡೆ 38, ರಾಘವೇಂದ್ರ ಎ. 28, ಅರುಣ ಸಕ್ರಿ 21; ವನೀನ್ 36ಕ್ಕೆ 4, ಸಾದಿಕ್ ಕಿತ್ತೂರ 63ಕ್ಕೆ3, ಪ್ರಮೋದ ಕಾಮತ್ 70ಕ್ಕೆ 3); ಬಿಡಿಕೆ ಎಸ್ಎಫ್ ‘ಸಿ’ ತಂಡ: 45.4 ಓವರ್ಗಳಲ್ಲಿ ಐದು ವಿಕೆಟ್ಗಳಿಗೆ 203 (ಅಭಿಷೇಕ್ ಹೊನ್ನಾವರ 102, ನವೀನ್ ಜಿ 37, ಅತ್ರೇಯ ಇನಾಮದಾರ 25; ಸುರೇಶ 14ಕ್ಕೆ 2).
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.