ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಮೋಹದ ಏರಿಳಿತಗಳು

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕಿವಿಗೊತ್ತಿ ರೇಡಿಯೊ ಹಿಡಿದುಕೊಂಡು ವೀಕ್ಷಕ ವಿವರಣೆ ಕೇಳುತ್ತಿದ್ದ ಆ ಹುಡುಗ ವೀಕ್ಷಕ ವಿವರಣೆಕಾರನ ಬಾಯಿಂದ ‘ಯೇ ಬಿಎಸ್‌ಎನ್‌ಎಲ್‌ ಚೌಕಾ’ ಎಂಬ ಮಾತು ಬರುತ್ತಿದ್ದಂತೆ ನಿಂತಲ್ಲೇ ಒಮ್ಮೆ ಜಿಗಿದು ತಾನೇ ರನ್‌ ಬಾರಿಸಿದವನಂತೇ ಸಂಭ್ರಮಿಸುತ್ತಿದ್ದ. ಆಫೀಸಿನಲ್ಲಿ ಕೆಲಸ ಮಾಡುವಾಗಲೂ ಕಿಸೆಯಲ್ಲಿಯೇ ಇರಿಸಿಕೊಂಡಿದ್ದ ಮಿನಿರೇಡಿಯೊವನ್ನು ಆಗಾಗ ಕದ್ದು ಮುಚ್ಚಿ ಆನ್‌ ಮಾಡಿ ಸಣ್ಣದನಿಯಲ್ಲಿ ಸ್ಕೋರ್‌ ತಿಳಿದುಕೊಳ್ಳುವುದರತ್ತಲೇ ಅವನ ಲಕ್ಷ್ಮ್ಯ.

ಭಾರತ–ಪಾಕಿಸ್ತಾನ ಮ್ಯಾಚ್‌ ಇದ್ದರಂತೂ ಅವತ್ತು ಎಷ್ಟೋ ವಿದ್ಯಾರ್ಥಿಗಳಿಗೆ ವಿಪರೀತ ಹುಷಾರು ತಪ್ಪುತ್ತಿತ್ತು. ಹಾಗೆ ಹುಷಾರು ತಪ್ಪಿದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿಲ್ಲ. ಬದಲಿಗೆ ಟೀವಿ ಮುಂದೆ ಒಂದು ಚಾಪೆ ಹಾಸಿಕೊಟ್ಟರೆ ಸಾಕು. ಮ್ಯಾಚ್‌ ಮುಗಿಯುವಷ್ಟರಲ್ಲಿ ಜ್ವರವೂ ಮಾಯ! ಇನ್ನು ರಸ್ತೆ ಪಕ್ಕ ಯಾವುದೋ ಗೂಡಂಗಡಿ ಮುಂದೆಯೋ, ಸ್ಟಾರ್‌ ಹೋಟೆಲ್‌ ಆವರಣದಲ್ಲಿಯೋ ವಿಪರೀತ ಜನಸಂದಣಿ ಸೇರಿದ್ದರೆ ಏನೋ ಅನಾಹುತ ಸಂಭವಿಸಿದೆ ಎಂದು ಗಾಬರಿಯಾಗಬೇಕಾಗಿಲ್ಲ. ಅಲ್ಲಿ ವಿಶ್ವಕಪ್‌ ಮ್ಯಾಚ್‌ ವೀಕ್ಷಣೆ ನಡೆಯುತ್ತಿದೆ ಎಂದು ಅರ್ಥೈಸಿಕೊಳ್ಳಬೇಕು.

ಇವೆಲ್ಲ ಪ್ರತಿ ವಿಶ್ವಕಪ್‌ ಸಂದರ್ಭದಲ್ಲಿ ಮಹಾನಗರದಲ್ಲಿ ಕಾಣಸಿಗುತ್ತಿದ್ದ ಕ್ರಿಕೆಟ್‌ ಕಾಯಿಲೆಗೆ ತುತ್ತಾದವರ ಪಡಿಪಾಟಲಿನ ನಿದರ್ಶನಗಳು. ಈ ಸಲವೂ ವಿಶ್ವಕಪ್‌ ಆರಂಭವಾಗಿದೆ. ಭಾರತ ಎರಡು ಶಕ್ತಿಶಾಲಿ ತಂಡಗಳನ್ನು ಬಗ್ಗುಬಡಿದು ತನ್ನ ವಿಜಯಯಾತ್ರೆ ಆರಂಭಿಸಿದೆ.
ಆದರೆ ವಿಶ್ವಕಪ್ ಕ್ರಿಕೆಟ್‌ ಬಗ್ಗೆ ನಗರಿಗರಲ್ಲಿ ಮೊದಲಿನಷ್ಟೇ ಮೋಹ  ಇದೆಯಾ?

ವರ್ಷದಿಂದ ವರ್ಷಕ್ಕೆ ಕ್ರಿಕೆಟ್‌ ಅಭಿಮಾನ ಇಳಿಮುಖವಾಗುತ್ತಿದೆಯಾ? ಈ ಊಹೆ ನಿಜವೇ ಆಗಿದ್ದರೆ ಅದಕ್ಕೆ ಕಾರಣಗಳೇನು? ಹೀಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕೆಲವು ನಗರಿಗರನ್ನು ಎದುರಿಸಿದಾಗ ಬಂದ ಉತ್ತರ ಕ್ರಿಕೆಟ್‌ ವ್ಯಾಮೋಹದ ಹಲವು ಆಯಾಮಗಳತ್ತ ಬೆಳಕು ಚೆಲ್ಲುವುದಷ್ಟೇ ಅಲ್ಲದೇ ಬದಲಾದ ಜೀವನಶೈಲಿಯತ್ತಲೂ ಬೊಟ್ಟುಮಾಡಿ ತೋರಿಸಿತು.

ಗಿರಿನಗರದ ನಿವಾಸಿಯಾದ ಹರ್ಷ ಭಟ್‌ ಕ್ರಿಕೆಟ್‌ ಪ್ರೇಮಿಯಷ್ಟೇ ಅಲ್ಲ, ಆಟಗಾರರೂ ಹೌದು. ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಹರ್ಷ ಅವರ ಪ್ರಕಾರ ನಗರಿಗರಲ್ಲಿ ಮೊದಲಿನಷ್ಟು ಕ್ರಿಕೆಟ್‌ ಕ್ರೇಜ್‌ ಉಳಿದಿಲ್ಲ. ಇದಕ್ಕೆ ಸಮಂಜಸ ಎನ್ನುವಂತಹ ಕಾರಣಗಳನ್ನೂ ಅವರು ನೀಡುತ್ತಾರೆ.

‘ಗಂಗೂಲಿ, ದ್ರಾವಿಡ್‌, ಲಕ್ಷ್ಮಣ್‌, ಸಚಿನ್‌ ಹೀಗೆ ಕ್ರಿಕೆಟ್‌ನ ಶ್ರೇಷ್ಠರು ಎನಿಸಿಕೊಂಡ ಆಟಗಾರರೆಲ್ಲ ಒಬ್ಬರ ಹಿಂದೊಬ್ಬರು ನಿವೃತ್ತರಾದರು. ಅವರ ನಂತರ ಬಂದ ಆಟಗಾರರು ಉತ್ತಮ ಪ್ರದರ್ಶನ ನೀಡುವುದಕ್ಕಿಂತ ವಿವಾದಗಳ ಮೂಲಕ ಗಮನ ಸೆಳೆದದ್ದೇ ಹೆಚ್ಚು. ಹಳೆಯ ಕಾಲದ ಕ್ರಿಕೆಟ್‌ ಸೊಗಸು ಈಗ ಇಲ್ಲ. ಇವೆಲ್ಲ ಕಾರಣಕ್ಕೆ ಜನರಲ್ಲಿ ಇಂದು ಕ್ರಿಕೆಟ್‌ ವ್ಯಾಮೋಹ ಅಷ್ಟಾಗಿ ಉಳಿದಿಲ್ಲ’ ಎನ್ನುವುದು ಹರ್ಷ ವಿಶ್ಲೇಷಣೆ.

ಐಪಿಲ್‌ ಕೂಡ ಕ್ರಿಕೆಟ್‌ ಬಗೆಗಿನ ಆಸಕ್ತಿಯನ್ನು ಕುಂದಿಸುತ್ತಿದೆ ಎಂದು ಅವರು ಮಾತು ಸೇರಿಸುತ್ತಾರೆ. ‘ಈಗ ವರ್ಷಕ್ಕೆ 90 ದಿನ ಐಪಿಎಲ್‌ ಮ್ಯಾಚ್‌ಗಳು ನಡೆಯುತ್ತವೆ. ಅದರ ಮೇಲೆ ವಿಶ್ವಕಪ್‌. ಅಷ್ಟೆಲ್ಲ ಪಂದ್ಯಗಳನ್ನು ನೋಡುವ ಸಹನೆ ಜನರಿಗೆ ಎಲ್ಲಿರುತ್ತದೆ? ಈಗ ಮೊದಲಿನ ಹಾಗೆ ಇಡೀ ದಿನ ಕ್ರಿಕೆಟ್‌ ನೋಡುತ್ತಾ ಕುಳಿತುಕೊಳ್ಳುವಷ್ಟು ಸಹನೆ ಜನರಿಗಿಲ್ಲ’ ಎನ್ನುವ ಹರ್ಷ, ಭಾರತ ತಂಡದ ಮ್ಯಾಚ್‌ಗಳನ್ನು ಮಾತ್ರ ತಪ್ಪದೇ ನೋಡುತ್ತಾರಂತೆ.

ಪೀಣ್ಯ ಎರಡನೇ ಹಂತದ ಸಂಜೀವ ಅವರ ಅಭಿಪ್ರಾಯ ಇದಕ್ಕಿಂತ ಭಿನ್ನವಾದದ್ದು. ಅವರು ಬಿಡುವಿನಲ್ಲಿ ವಿಶ್ವಕಪ್‌ನ ಯಾವುದೇ ಮ್ಯಾಚ್‌ ಇದ್ದರೂ ತಪ್ಪದೇ ನೋಡುತ್ತಾರೆ. ‘ಕಾಲ ಎಷ್ಟೇ ಬದಲಾದರೂ ಕ್ರಿಕೆಟ್‌ ಪ್ರೀತಿ ಕಡಿಮೆಯಾಗಿಲ್ಲ’ ಎನ್ನುತ್ತಾರೆ ಸಂಜೀವ್‌.
ಸಂಜೀವ್ ಮಾತಿಗೆ ಪೂರಕ ಅಭಿಪ್ರಾಯ ಶ್ರೀನಿವಾಸನಗರದ ನಿವಾಸಿ ನಾರಾಯಣ ಗಾಯಕವಾಡ ಅವರದು. ‘ನನ್ನಲ್ಲಂತೂ ಕ್ರಿಕೆಟ್‌ ಕ್ರೇಜ್‌ ಮೊದಲಿನಷ್ಟೇ ಇದೆ’ ಎನ್ನುತ್ತಾರೆ ಅವರು.

ಭಾರತ, ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮ್ಯಾಚ್‌ ಇದ್ದರೆ ಇವರು ಟೀವಿ ಮುಂದಿನಿಂದ ಏಳುವುದೇ ಇಲ್ಲ. ‘ನಾನು ಐಪಿಎಲ್‌ ಪಂದ್ಯಗಳನ್ನೆಲ್ಲಾ ಅಷ್ಟು ಆಸಕ್ತಿಯಿಂದ ವೀಕ್ಷಿಸುವುದಿಲ್ಲ. ಆದರೆ ವಿಶ್ವಕಪ್‌ ಪಂದ್ಯಗಳನ್ನು ನೋಡುವುದನ್ನು ಮಾತ್ರ ತಪ್ಪಿಸುವುದಿಲ್ಲ’ ಎನ್ನುತ್ತಾರೆ ಅವರು. ಇವರಿಗಿಂತ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಲೆಕ್ಟ್ರಾನಿಕ್ಸ್‌ ಸಿಟಿಯ ರಂಗನಾಥ್‌.

‘ಈಗಿನ್ನೂ ವಿಶ್ವಕಪ್‌ ಆರಂಭವಾಗಿದೆಯಷ್ಟೇ. ಅದರ ಜ್ವರ ಏರಲು ಇನ್ನೂ ಸಮಯ ಬೇಕು. ಯಾವಾಗಲೂ ಮೊದಮೊದಲಿನ ಪಂದ್ಯಗಳಿಗೆ ಜನರು ಅಷ್ಟೇನೂ ಆಸಕ್ತಿ ತೋರಿಸುವುದಿಲ್ಲ. ಸೆಮಿಫೈನಲ್‌, ಫೈನಲ್‌ ಹಂತದ ಪಂದ್ಯಗಳನ್ನು ಹೆಚ್ಚು ಆಸಕ್ತಿಯಿಂದ ನೋಡುತ್ತಾರೆ. ಇದು ಈಗ ಆದ ಬದಲಾವಣೆಯಲ್ಲ. ಮೊದಲಿನಿಂದಲೂ ವಿಶ್ವಕಪ್‌ ಅನ್ನು ಜನ ನೋಡುತ್ತಿರುವುದೇ ಹೀಗೆ. ಮುಂದಿನ ಹಂತದಲ್ಲಿ ಖಂಡಿತ ಜನರ ಆಸಕ್ತಿ ಹೆಚ್ಚಾಗುತ್ತದೆ’ ಎನ್ನುವುದು ಅವರ ನಂಬಿಕೆ. ಅಲ್ಲದೇ ಜನರು ಕ್ರಿಕೆಟ್‌ ಮಾಹಿತಿಯನ್ನು ತಿಳಿದುಕೊಳ್ಳುವ ಮಾರ್ಗ ಬದಲಾಗಿರುವುದರ ಕುರಿತೂ ಅವರು ಗಮನ ಸೆಳೆಯುತ್ತಾರೆ.

‘ಮೊದಲಾದರೆ ಮೊಬೈಲ್‌ಗಳಲ್ಲಿ ತ್ವರಿತ ಅಂತರ್ಜಾಲ ಇರಲಿಲ್ಲ. ಟೀವಿ ಮುಂದೆ ಕೂತೋ, ರೇಡಿಯೊ ವೀಕ್ಷಕ ವಿವರಣೆ ಕೇಳಿಯೋ ಕ್ರಿಕೆಟ್‌ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತು. ಆದರೆ ಇಂದು ಆಟದ ಬಗ್ಗೆ ತಿಳಿದುಕೊಳ್ಳುವ ಮಾಧ್ಯಮಗಳು ಬದಲಾಗಿವೆ. ಕಚೇರಿಗೆ ರಜಾ ಹಾಕಿ ಇಡೀ ದಿನ ಕ್ರಿಕೆಟ್‌ ನೋಡುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಹಾಗೆಂದು ಅವರಿಗೆ ಕ್ರಿಕೆಟ್‌ ಪ್ರೀತಿ ಕಡಿಮೆಯಾಗಿದೆ ಎಂದಲ್ಲ.

ಬಹುತೇಕರು ಮೊಬೈಲ್‌ನಲ್ಲಿ, ಅಂತರ್ಜಾಲದಲ್ಲಿ ಕ್ರಿಕೆಟ್‌ ನೋಡುತ್ತಾರೆ. ಸ್ಕೋರ್‌ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಾರೆ. ಕಚೇರಿಯಲ್ಲಿ ಅದರ ಬಗ್ಗೆ ಚರ್ಚಿಸುತ್ತಾರೆ. ಜನರು ಆಟವನ್ನು ನೋಡುವ ಕ್ರಮ ಬದಲಾಗಿದೆಯೇ ಹೊರತು ಪ್ರೀತಿ ಕಡಿಮೆಯಾಗಿಲ್ಲ’ ಎನ್ನುವ ರಂಗನಾಥ ಅವರ ಮಾತು ಇಂದಿನ ನಗರಿಗರ ಜೀವನಕ್ರಮಕ್ಕೆ ಹೆಚ್ಚು ಹೊಂದುವಂತೆ ತೋರುತ್ತದೆ.

ಕ್ರಿಕೆಟ್‌ ಉಡುಪಿಗೂ ಬೇಡಿಕೆಯಿಲ್ಲ
ಪ್ರತಿಸಲದಂತೆ ಈ ವರ್ಷವೂ ವಿಶ್ವಕಪ್‌ ಆರಂಭವಾಗುತ್ತಿದ್ದಂತೆ ಕ್ರಿಕೆಟ್‌ ಟಿ–ಶರ್ಟ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಮಲ್ಲೇಶ್ವರದ

ಮಂತ್ರಿ ಮಾಲ್‌, ಬ್ರಿಗೇಡ್‌ ರಸ್ತೆಯ ನೈಕಿ ಷೋ ರೂಂ, ಬೇಸಿಕ್ಸ್‌ ಲೈಫ್‌ ಸೇರಿದಂತೆ ಬಹುತೇಕ ಮಾಲ್‌, ಷೋರೂಂಗಳಲ್ಲಿ ಕ್ರಿಕೆಟ್‌ ಉಡುಪುಗಳು ಲಭ್ಯ. ಆದರೆ ಬೆಂಗಳೂರಿಗರು ಯಾಕೋ ಈ ಉಡುಪಿಗೆ ಆಕರ್ಷಿತರಾಗುತ್ತಿಲ್ಲ ಎನ್ನುವುದು ವ್ಯಾಪಾರಿಗಳ ಅಳಲು.

‘ಸ್ಟಾರ್‌ ಇಂಡಿಯಾ’ ಎಂದು ಬರೆದ ನೀಲಿ ಟಿ– ಷರ್ಟ್‌ ಬಹುತೇಕ ಎಲ್ಲ ಮಳಿಗೆಗಳಲ್ಲಿಯೂ ಕಾಣಸಿಗುತ್ತವೆ. ‘ಒಂದೇ ವಿನ್ಯಾಸದ ಉಡುಪು ಇಟ್ಟಿದ್ದೇವೆ. ಆದರೆ ಈ ವರ್ಷ ಅಷ್ಟೊಂದು ಬೇಡಿಕೆಯೇ ಇಲ್ಲ.

ವಿಶ್ವಕಪ್‌ ಕ್ರಿಕೆಟ್‌ ಆರಂಭದಿಂದಲೇ ಮಾರಾಟಕ್ಕಿಟ್ಟಿದ್ದರೂ ಜನರು ಯಾಕೋ ಕೊಳ್ಳಲು ಆಸಕ್ತಿಯನ್ನೇ ತೋರುತ್ತಿಲ್ಲ’ ಎನ್ನುತ್ತಾರೆ ಬ್ರಿಗೇಡ್‌ ರಸ್ತೆಯ ಲಾಬಾಂಬಾ ಫ್ಯಾಷನ್ಸ್‌ ಮಳಿಗೆಯ ಅರ್ಷದ್‌. ‘ಇದೀಗ ವಿಶ್ವಕಪ್‌ ಆರಂಭವಾಗಿದೆ. ಭಾರತ ತಂಡ ಹೀಗೇ ಗೆಲ್ಲುತ್ತಾ ಹೋದರೆ ಮುಂದೆ ಇವುಗಳಿಗೆ ಬೇಡಿಕೆ ಬರಹುದು’ ಎಂಬ ಆಶಾವಾದವನ್ನೂ ಅವರು ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT