ಕ್ರಿಕೆಟ್: ಆತಿಥೇಯ ಆಸ್ಟ್ರೇಲಿಯಾಕ್ಕೆ ಆಘಾತ

7

ಕ್ರಿಕೆಟ್: ಆತಿಥೇಯ ಆಸ್ಟ್ರೇಲಿಯಾಕ್ಕೆ ಆಘಾತ

Published:
Updated:
ಕ್ರಿಕೆಟ್: ಆತಿಥೇಯ ಆಸ್ಟ್ರೇಲಿಯಾಕ್ಕೆ ಆಘಾತ

ಸಿಡ್ನಿ: ಆಸ್ಟ್ರೇಲಿಯಾ ತಂಡದ ಬೆಂಬಲಿಗರು ನಂಬಲು ಕೂಡ ಸಾಧ್ಯವಾಗದಂಥ ಸೋಲು. ಆತಿಥೇಯರು ಪ್ರವಾಸಿ ಶ್ರೀಲಂಕಾ ಎದುರು ಎಂಟು ವಿಕೆಟ್‌ಗಳ ಅಂತರದಿಂದ ಪರಾಭವಗೊಂಡಾಗ ಭಾರಿ ಅಚ್ಚರಿ.ಸಿಂಹಳೀಯರು ಇನ್ನೂ 101 ಎಸೆತಗಳು ಬಾಕಿ ಇರುವಂತೆಯೇ ಜಯದ ದಡ ಸೇರಿದ್ದು ಕೂಡ ಬೆರಗುಗೊಳಿಸಿದ ಘಟನೆ.ಮಳೆಯ ಅಡ್ಡಿಯಿಂದ ಕಳೆದು ಹೋದ ಸಮಯದ ಪರಿಣಾಮವಾಗಿ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ `ಡಕ್ವರ್ಥ್-ಲೂಯಿಸ್~ ನಿಯಮ ಜಾರಿಗೊಳಿಸಲಾಯಿತು. ಆದರೂ ಹೆಚ್ಚೇನು ಓವರುಗಳು ಕಡಿಮೆ ಆಗಲಿಲ್ಲ. ಉಭಯ ತಂಡಗಳಿಗೆ ಲಭ್ಯವಾಗಿದ್ದು ತಲಾ 41 ಓವರ್.ಆರಂಭದಲ್ಲಿಯೇ ಕುಸಿತದ ಹಾದಿ ಹಿಡಿದ ಆಸ್ಟ್ರೇಲಿಯಾ 40.5 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 158 ರನ್. ಮೈಕಲ್ ಕ್ಲಾರ್ಕ್ ಅನುಪಸ್ಥಿತಿಯಲ್ಲಿ ರಿಕಿ ಪಾಂಟಿಂಗ್ ನೇತೃತ್ವ ದಲ್ಲಿ ಆಡಿದ ಕಾಂಗರೂಗಳ ನಾಡಿನವರು ಆಗಲೇ ಗೆಲುವಿನ ಆಸೆ ಕೈಬಿಟ್ಟರು. ಡೇವಿಡ್ ಹಸ್ಸಿ (58; 90 ನಿಮಿಷ, 64 ಎಸೆತ, 6 ಬೌಂಡರಿ) ದಿಟ್ಟ ಆಟವನ್ನು ಆಡಿರದಿದ್ದರೆ ನೂರರ ಗಡಿ ದಾಟುವುದೂ ಆಸ್ಟ್ರೇಲಿಯಾಕ್ಕೆ ಕಷ್ಟವಾಗುತಿತ್ತು.ಫರ್ವೀಜ್ ಮಹಾರೂಫ್ ಹಾಗೂ `ಪಂದ್ಯ ಶ್ರೇಷ್ಠ~ ಗೌರವ ಪಡೆದ ತಿಸಾರ ಪೆರೆರಾ ಅವರು ಲಂಕಾ ಬೌಲಿಂಗ್ ದಾಳಿಗೆ ಬಲ ನೀಡಿದರು. ರನ್ ಗತಿಗೆ ಕಡಿವಾಣ ಹಾಕುವ ಜೊತೆಗೆ ತಲಾ ಎರಡು ವಿಕೆಟ್ ಕೂಡ ಕಬಳಿಸಿದರು. ಆದ್ದರಿಂದ `ಪಂಟರ್~ ಪಡೆಯ ಸಂಕಷ್ಟ ಹೆಚ್ಚಿತು. ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್, ಪಾಂಟಿಂಗ್, ಮೈಕ್ ಹಸ್ಸಿ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಡೇವಿಡ್ ಮಾತ್ರ ಕಷ್ಟಕಾಲದಲ್ಲಿ ಇಷ್ಟವಾಗುವಂಥ ಆಟವಾಡಿ ಗಮನ ಸೆಳೆದರು.ಡಕ್ವರ್ಥ್-ಲೂಯಿಸ್ ನಿಯಮವು ಶ್ರೀಲಂಕಾ ಜಯದ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಿತು. ಅದು ಗೆಲುವು ಸಾಧಿಸಲು ಗಳಿಸಬೇಕಾಗಿದ್ದು    152 ರನ್. ಬದಲಾದ ಗುರಿಯನ್ನು ಮುಟ್ಟುವುದು ಕಷ್ಟವೇ ಆಗಲಿಲ್ಲ. ಕೇವಲ ಎರಡು ವಿಕೆಟ್ ಕಳೆದುಕೊಂಡ ಸಿಂಹಳೀಯರು 24.1 ಓವರ್‌ನಲ್ಲಿಯೇ ವಿಜಯೋತ್ಸವ ಆಚರಿಸಿದರು. 6.28ರ ಸರಾಸರಿಯಲ್ಲಿ ರನ್ ಗಳಿಸಿದ್ದರಿಂದ ನಿರೀಕ್ಷೆಗೂ ಮೀರಿ ಬಹುಬೇಗ ಈ ತಂಡದವರು ದಡ ಸೇರಿದರು.

ಅಜೇಯರಾಗಿ ಉಳಿದ ನಾಯಕ ಮಾಹೇಲ ಜಯವರ್ಧನೆ (61; 108 ನಿ., 67 ಎ., 5 ಬೌಂಡರಿ) ಹಾಗೂ ತಿಲಕರತ್ನೆ ದಿಲ್ಶಾನ್ (45; 50 ನಿ., 41 ಎ., 4 ಬೌಂಡರಿ, 1 ಸಿಕ್ಸರ್) ಅವರು ಭದ್ರ ಬುನಾದಿ ಹಾಕಿದರು. ಕುಮಾರ ಸಂಗಕ್ಕಾರ (30; 41 ನಿ., 29 ಎ., 4 ಬೌಂಡರಿ, 1 ಸಿಕ್ಸರ್) ಅವರೂ ಚುರುಕಾಗಿ ರನ್ ಗಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry