ಗುರುವಾರ , ಅಕ್ಟೋಬರ್ 24, 2019
21 °C

ಕ್ರಿಕೆಟ್: ಆಸೀಸ್ ತಂಡದಲ್ಲಿ ಮಿಷೆಲ್ ಸ್ಟಾರ್ಕ್‌ಗೆ ಅವಕಾಶ

Published:
Updated:

ಸಿಡ್ನಿ (ಪಿಟಿಐ): ಭಾರತ ವಿರುದ್ಧದ ಮೂರನೇ ಕ್ರಿಕೆಟ್   ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಎಡಗೈ ವೇಗದ ಬೌಲರ್ ಮಿಷೆಲ್ ಸ್ಟಾರ್ಕ್ ಅವಕಾಶ ಗಿಟ್ಟಿಸಿದ್ದಾರೆ.ಗಾಯಗೊಂಡಿರುವ ಜೇಮ್ಸ ಪ್ಯಾಟಿನ್‌ಸನ್ ಜಾಗದಲ್ಲಿ ಸ್ಟಾರ್ಕ್‌ಗೆ 12ರ ಬಳಗದಲ್ಲಿ ಸ್ಥಾನ ಲಭಿಸಿದೆ. ಮೂರನೇ ಟೆಸ್ಟ್ ಪರ್ತ್‌ನಲ್ಲಿ ಜನವರಿ 13 ರಂದು ಆರಂಭವಾಗಲಿದೆ. ಎರಡನೇ ಟೆಸ್ಟ್ ವೇಳೆ ಬಲಗಾಲಿನ ಗಾಯಕ್ಕೆ ಒಳಗಾದ ಪ್ಯಾಟಿನ್‌ಸನ್ ಇನ್ನುಳಿದ ಎರಡೂ ಟೆಸ್ಟ್‌ಗಳಲ್ಲಿ ಆಡುತ್ತಿಲ್ಲ.21ರ ಹರೆಯದ ಸ್ಟಾರ್ಕ್ ಇದುವರೆಗೆ ಆಡಿದ ಎರಡು ಟೆಸ್ಟ್‌ಗಳಿಂದ ನಾಲ್ಕು ವಿಕೆಟ್ ಪಡೆದಿದ್ದಾರೆ.  ನ್ಯೂ ಸೌತ್‌ವೇಲ್ಸ್‌ನ ಈ ಬೌಲರ್ ಅದ್ಭುತ ವೇಗದ ಜೊತೆಗೆ ಚೆಂಡನ್ನು ಬೌನ್ಸ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಮೊದಲ ಎರಡು ಟೆಸ್ಟ್‌ಗಳಲ್ಲಿ ಅಷ್ಟೊಂದು ಪ್ರಭಾವಿ ಎನಿಸದ ಸ್ಪಿನ್ನರ್ ನಥಾನ್ ಲಿನ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.ಮೂರನೇ ಟೆಸ್ಟ್ ನಡೆಯುವ ವಾಕಾ ಕ್ರೀಡಾಂಗಣದ ಪಿಚ್ ವೇಗದ ಬೌಲಿಂಗ್‌ಗೆ ನೆರವು ನೀಡಲಿರುವ ಕಾರಣ ಆಸೀಸ್ ತಂಡ ನಾಲ್ಕು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗಾದಲ್ಲಿ ಲಿನ್ ಬದಲು ರ‌್ಯಾನ್ ಹ್ಯಾರಿಸ್ ಅಂತಿಮ ಹನ್ನೊಂದರಲ್ಲಿ ಅವಕಾಶ ಪಡೆಯಬಹುದು. ಆಸೀಸ್ ನಾಯಕ ಮೈಕಲ್ ಕ್ಲಾರ್ಕ್ ಕೂಡಾ ಇದೇ ಸೂಚನೆ ನೀಡಿದ್ದಾರೆ.ಹ್ಯಾರಿಸ್ ಇದುವರೆಗೆ ಎಂಟು ಟೆಸ್ಟ್ ಪಂದ್ಯಗಳನ್ನಾಡಿದ್ದು, 35 ವಿಕೆಟ್ ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲಿದ್ದರಿಂದ ಕಳೆದ ಕೆಲ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.ತಂಡ ಹೀಗಿದೆ: ಮೈಕಲ್ ಕ್ಲಾರ್ಕ್ (ನಾಯಕ), ಬ್ರಾಡ್ ಹಡಿನ್, ಎಡ್ ಕೋವನ್, ರ‌್ಯಾನ್ ಹ್ಯಾರಿಸ್, ಬೆನ್ ಹಿಲ್ಫೆನಾಸ್, ಮೈಕ್ ಹಸ್ಸಿ, ನಥಾನ್ ಲಿನ್, ಶಾನ್ ಮಾರ್ಷ್, ರಿಕಿ ಪಾಂಟಿಂಗ್, ಪೀಟರ್ ಸಿಡ್ಲ್, ಮಿಷೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)