ಕ್ರಿಕೆಟ್: ಇಂಗ್ಲೆಂಡ್‌ಗೆ ಮತ್ತೆ ಮುಖಭಂಗಪಾಕ್ ಐತಿಹಾಸಿಕ ಸಾಧನೆ

7

ಕ್ರಿಕೆಟ್: ಇಂಗ್ಲೆಂಡ್‌ಗೆ ಮತ್ತೆ ಮುಖಭಂಗಪಾಕ್ ಐತಿಹಾಸಿಕ ಸಾಧನೆ

Published:
Updated:

ದುಬೈ (ಎಎಫ್‌ಪಿ): ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 71 ರನ್‌ಗಳ ಗೆಲುವು ಸಾಧಿಸಿ ಸರಣಿಯನ್ನು 3-0 ರಲ್ಲಿ `ಕ್ಲೀನ್ ಸ್ವೀಪ್~ ಮಾಡಿಕೊಂಡಿತು.

ಪಾಕ್ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯೊಂದರ ಎಲ್ಲ ಪಂದ್ಯಗಳಲ್ಲಿ ಗೆಲುವು ಪಡೆದದ್ದು ಇದೇ ಮೊದಲು.  ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ಸತತ ಮೂರು ಸೋಲಿನ ಕಾರಣ ಅವಮಾನಕ್ಕೆ ಗುರಿಯಾಯಿತು.ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ ಇಂಗ್ಲೆಂಡ್ 324 ರನ್ ಗಳಿಸಬೇಕಿತ್ತು. ಆದರೆ ಆ್ಯಂಡ್ರ್ಯೂ ಸ್ಟ್ರಾಸ್ ಬಳಗ ನಾಲ್ಕನೇ ದಿನದ ಚಹಾ ವಿರಾಮದ ಬಳಿಕ 252 ರನ್‌ಗಳಿಗೆ ಆಲೌಟಾಯಿತು. ವೇಗದ ಬೌಲರ್ ಉಮರ್ ಗುಲ್ (61ಕ್ಕೆ 4) ಮತ್ತು ಸರಣಿಯ ಎಲ್ಲ ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡವನ್ನು ಕಾಡಿದ ಸ್ಪಿನ್ನರ್ ಸಯೀದ್ ಅಜ್ಮಲ್ (67ಕ್ಕೆ 4) ಪಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಮೊದಲ ಇನಿಂಗ್ಸ್‌ನಲ್ಲಿ 100 ರನ್‌ಗಳ ಒಳಗೆ ಆಲೌಟಾದರೂ ಟೆಸ್ಟ್‌ನಲ್ಲಿ ಗೆಲುವು ಪಡೆದ ಅಪೂರ್ವ ಸಾಧನೆಯನ್ನು ಮಿಸ್ಬಾ ಉಲ್ ಹಕ್ ಬಳಗ ಮಾಡಿದೆ. 1907 ರಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿತ್ತು. ಲೀಡ್ಸ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ 76 ರನ್‌ಗಳಿಗೆ ಆಲೌಟಾದರೂ ಮರುಹೋರಾಟ ನಡೆಸಿ ಗೆಲುವು ತನ್ನದಾಗಿಸಿಕೊಂಡಿತ್ತು. ಇದೀಗ ಸುಮಾರು 105 ವರ್ಷಗಳ ಬಳಿಕ ಪಾಕ್ ಅಂತಹ ಸಾಧನೆ ಮಾಡಿದೆ.ವಿಕೆಟ್ ನಷ್ಟವಿಲ್ಲದೆ 36 ರನ್‌ಗಳಿಂದ ಸೋಮವಾರ ಆಟ ಆರಂಭಿಸಿದ ಇಂಗ್ಲೆಂಡ್ ಗೆಲುವಿಗಾಗಿ ತಕ್ಕಮಟ್ಟಿನ ಪ್ರಯತ್ನ ನಡೆಸಿತಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಅಲಸ್ಟರ್ ಕುಕ್ (49), ಎಯೊನ್ ಮಾರ್ಗನ್ (31) ಮತ್ತು ಮ್ಯಾಟ್ ಪ್ರಯರ್ (ಔಟಾಗದೆ 49) ಸೋಲು ತಪ್ಪಿಸಲು ನಡೆಸಿದ ಹೋರಾಟಕ್ಕೆ ತಕ್ಕ ಫಲ ಲಭಿಸಲಿಲ್ಲ.ಗುಲ್ ಮತ್ತು ಅಜ್ಮಲ್ ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ವಿಕೆಟ್ ಪಡೆದು ಇಂಗ್ಲೆಂಡ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಸರಣಿಯಲ್ಲಿ ಒಟ್ಟು 24 ವಿಕೆಟ್ ಪಡೆದ ಅಜ್ಮಲ್ `ಸರಣಿ ಶ್ರೇಷ್ಠ~ ಪ್ರಶಸ್ತಿ ಪಡೆದರು.ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಮೊದಲ ಇನಿಂಗ್ಸ್ 99 ಮತ್ತು ಎರಡನೇ ಇನಿಂಗ್ಸ್ 152.4 ಓವರ್‌ಗಳಲ್ಲಿ 365 ಇಂಗ್ಲೆಂಡ್: ಮೊದಲ ಇನಿಂಗ್ಸ್ 141 ಮತ್ತು ಎರಡನೇ ಇನಿಂಗ್ಸ್ 97.3 ಓವರ್‌ಗಳಲ್ಲಿ 252 (ಅಲಸ್ಟರ್ ಕುಕ್ 49, ಎಯೊನ್ ಮಾರ್ಗನ್ 31, ಮ್ಯಾಟ್ ಪ್ರಯರ್ ಔಟಾಗದೆ 49, ಉಮರ್ ಗುಲ್ 61ಕ್ಕೆ 4, ಸಯೀದ್ ಅಜ್ಮಲ್ 67ಕ್ಕೆ 4).

ಫಲಿತಾಂಶ: ಪಾಕಿಸ್ತಾನಕ್ಕೆ 71 ರನ್ ಗೆಲುವು ಹಾಗೂ 3-0 ರಲ್ಲಿ ಸರಣಿ ಜಯ; ಪಂದ್ಯಶ್ರೇಷ್ಠ: ಅಜರ್ ಅಲಿ, ಸರಣಿ ಶ್ರೇಷ್ಠ: ಸಯೀದ್ ಅಜ್ಮಲ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry